More

    VIDEO | ಮಹಿಳಾ ಕ್ರಿಕೆಟರ್ ಅದ್ಭುತ ಫೀಲ್ಡಿಂಗ್ ನಿರ್ವಹಣೆಯ ವಿಡಿಯೋ ವೈರಲ್!

    ಶಾರ್ಜಾ: ಐಪಿಎಲ್ ಟೂರ್ನಿಯ ನಡುವೆ ಮಹಿಳೆಯರ ಮಿನಿ-ಐಪಿಎಲ್ ಖ್ಯಾತಿಯ ಮಹಿಳಾ ಟಿ20 ಚಾಲೆಂಜ್ ಟೂರ್ನಿ ಸದ್ದಿಲ್ಲದೆ ನಡೆದುಹೋಗಿದೆ. ಇದೇ ವೇಳೆ ಚಾಂಪಿಯನ್ ಟ್ರೈಲ್‌ಬ್ಲೇಜರ್ಸ್‌ ತಂಡದ ಪರ ಆಡಿದ ಥಾಯ್ಲೆಂಡ್ ಆಟಗಾರ್ತಿ ಥಾಯ್ಲೆಂಡ್ ಆಟಗಾರ್ತಿ ನಟ್ಟಕನ್ ಚಾಂಥಮ್ ಅದ್ಭುತ ಫೀಲ್ಡಿಂಗ್ ನಿರ್ವಹಣೆಯ ಮೂಲಕ ಗಮನಸೆಳೆದಿದ್ದಾರೆ. ಸೂಪರ್‌ನೋವಾಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋಮವಾರ ಅವರು ಸೂಪರ್‌ವುಮನ್ ರೀತಿಯಲ್ಲಿ ಹಾರಿ ಬೌಂಡರಿಯೊಂದನ್ನು ರಕ್ಷಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸೂಪರ್‌ನೋವಾಸ್ ತಂಡ ಚೇಸಿಂಗ್ ಆರಂಭಿಸಿದ ವೇಳೆ, ಸೋಫಿ ಎಕ್ಲೆಸ್ಟೋನ್ ಎಸೆದ ಇನಿಂಗ್ಸ್‌ನ 2ನೇ ಓವರ್‌ನಲ್ಲಿ ನಟ್ಟಕನ್ ಚಾಂಥಮ್ ಅವರಿಂದ ಈ ಅದ್ಭುತ ನಿರ್ವಹಣೆ ಬಂದಿತು. ಜೆಮೀಮಾ ರೋಡ್ರಿಗಸ್ ಬಾರಿಸಿದ ಚೆಂಡು ಥರ್ಡ್ ಮ್ಯಾನ್ ಕಡೆ ಹೋಗಿತ್ತು. ಆಗ ಚೆಂಡಿನ ಹಿಂದೆ ಓಡುತ್ತ ಹೋದ ನಟ್ಟಕನ್ ಚಾಂಥಮ್, ಬೌಂಡರಿ ಗೆರೆಯ ಬಳಿ ಆಕ್ರೋಬ್ಯಾಟಿಕ್ ಶೈಲಿಯಲ್ಲಿ ಡೈವ್ ಹೊಡೆದು ಚೆಂಡನ್ನು ತಡೆದರು. ಈ ಮೂಲಕ ಬಹುತೇಕ ಖಚಿತವೆನಿಸಿದ್ದ ಬೌಂಡರಿಯನ್ನು ತಡೆದರು.

    ಅವರ ಈ ಅದ್ಭುತ ಫೀಲ್ಡಿಂಗ್ ನಿರ್ವಹಣೆಗೆ ವಿಶ್ವದೆಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. 2015ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಕಲಂ ಕೂಡ ಇದೇ ರೀತಿಯಲ್ಲಿ ಹಾರಿ ಬೌಂಡರಿ ತಡೆಗಟ್ಟಿದ್ದಕ್ಕೆ ಥಾಯ್ಲೆಂಡ್ ಆಟಗಾರ್ತಿಯ ಪ್ರಯತ್ನವನ್ನು ಹೋಲಿಸಲಾಗುತ್ತಿದೆ.

    ಅದ್ಭುತ ಫೀಲ್ಡಿಂಗ್ ನಿರ್ವಹಣೆಯ ಮೂಲಕ ಗಮನಸೆಳೆದ ನಟ್ಟಕನ್ ಚಾಂಥಮ್ ನಿರ್ವಹಣೆಯನ್ನು ಟ್ರೈಲ್‌ಬ್ಲೇಜರ್ಸ್‌ ತಂಡದ ನಾಯಕಿ ಸ್ಮತಿ ಮಂದನಾ ಕೂಡ ಪ್ರಶಂಸಿಸಿದ್ದು, ಮಹಿಳಾ ಕ್ರಿಕೆಟ್‌ನಲ್ಲಿ ಈ ರೀತಿಯ ಫೀಲ್ಡಿಂಗ್ ನಿರ್ವಹಣೆಯನ್ನು ಹಿಂದೆಂದೂ ಕಂಡಿರಲಿಲ್ಲ ಎಂದಿದ್ದಾರೆ.

    ಈ ನಡುವೆ ಹಾರಿ ಚೆಂಡನ್ನು ತಡೆಯುವ ವೇಳೆ ನಟ್ಟಕನ್ ಚಾಂಥಮ್ ಕುತ್ತಿಗೆಗೆ ಏಟಾಗಿತ್ತು. ಈ ಬಗ್ಗೆ ಕೆಲ ಕ್ರಿಕೆಟ್ ಪ್ರೇಮಿಗಳು ವಿಚಾರಿಸಿರುವುದಕ್ಕೆ ಪ್ರತಿಯಾಗಿ 24 ವರ್ಷದ ನಟ್ಟಕನ್ ಚಾಂಥಮ್, ‘ನನ್ನ ಕುತ್ತಿಗೆಯ ಬಗ್ಗೆ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು, ಆದರೆ ನಾನು ಈಗ ಸಂಪೂರ್ಣ ಫಿಟ್ ಆಗಿದ್ದೇನೆ. ಯಾವುದೇ ನೋವು ಇಲ್ಲ’ ಎಂದು ಟ್ವೀಟಿಸಿದ್ದಾರೆ. ನಟ್ಟಕನ್ ಚಾಂಥಮ್ ಮಹಿಳಾ ಟಿ20 ಚಾಲೆಂಜ್‌ನಲ್ಲಿ ಆಡಿದ ಥಾಯ್ಲೆಂಡ್‌ನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts