ಮೋಡಿ ಮಾಡಿದ ಅಕ್ಷರ ಸಿಂಗಾರೋತ್ಸವ

2 Min Read
ಮೋಡಿ ಮಾಡಿದ ಅಕ್ಷರ ಸಿಂಗಾರೋತ್ಸವ

ದಾವಣಗೆರೆ : ಬಣ್ಣಗಳ ಮೆರಗಿನಿಂದ ವೈವಿಧ್ಯಮಯ ವಿನ್ಯಾಸದಲ್ಲಿ ಸಿಂಗಾರಗೊಂಡ ಅಕ್ಷರಗಳು ಕನ್ನಡದ ಸೊಬಗನ್ನು ಹೆಚ್ಚಿಸುವ ಮೂಲಕ ಮೋಡಿ ಮಾಡಿದವು. ಒಂದೊಂದು ಚೌಕಟ್ಟಿನಲ್ಲೂ ಅದ್ಭುತವಾಗಿ ಮೂಡಿಬಂದ ಅರ್ಥಪೂರ್ಣ ನುಡಿಗಳನ್ನು ಜನತೆ ಮೆಲುಕು ಹಾಕಿದರು.
 ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅಕ್ಷರ ಸಿಂಗಾರೋತ್ಸವ’ದಲ್ಲಿ ಸುಮಾರು ಎಂಟು ಜನ ಕಲಾವಿದರು ರಚಿಸಿದ 50ಕ್ಕೂ ಅಧಿಕ ಕನ್ನಡ ಅಕ್ಷರಗಳ ಕಲಾಕೃತಿಗಳನ್ನು ಜನತೆ ಕಣ್ತುಂಬಿಕೊಂಡರು.
 ಒಂದೊಂದು ಫ್ರೇಮ್‌ನಲ್ಲೂ ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಕನ್ನಡ ವರ್ಣಮಾಲೆಗಳು, ದಾಸಶ್ರೇಷ್ಟರ ಕೀರ್ತನೆಗಳು, ವಚನಕಾರರ ವಚನಗಳು, ಸಾಹಿತಿಗಳ ಕವಿತೆಗಳು, ಅರ್ಥಪೂರ್ಣ ಗಾದೆ ಮಾತುಗಳು ಮನ ಸೆಳೆದವು. ಹಲವರು ತಮ್ಮ ಮೊಬೈಲ್‌ಗಳಲ್ಲಿ ನುಡಿಚಿತ್ರಗಳ ಸೆರೆಹಿಡಿದರು.
 ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಕ್ಷರ ಸಿಂಗಾರೋತ್ಸವ ಅಕ್ಷರ ವಿನ್ಯಾಸದ ಮುಂದುವರಿದ ಭಾಗವಾಗಿದೆ. ಕನ್ನಡ ಅಕ್ಷರಗಳನ್ನು ಅತ್ಯಂತ ಕಲಾತ್ಮಕವಾಗಿ ಚಿತ್ರಿಸಲಾಗಿದೆ ಎಂದು ಕಲಾವಿದರ ಕೈಚಳಕ ಶ್ಲಾಘಿಸಿದರು.
 ಹಳೆಯ ಕನ್ನಡ ದಿನಪತ್ರಿಕೆ, ಸಾಪ್ತಾಯಿಕ, ವಿಶೇಷಾಂಕಗಳನ್ನು ತೆರೆದರೆ ಅಕ್ಷರ ವಿನ್ಯಾಸಗಳ ಪ್ರಯೋಗ ನೋಡಬಹುದಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೊಸತನದ ಕಾಳಜಿ ಕಡಿಮೆಯಾಗಿದೆ. ರಾಜ್ಯದಲ್ಲಿ 182 ಜನ ಸಚಿತ್ರಕಾರರನ್ನು ಗುರುತಿಸಲಾಗಿದ್ದು, ಅಕಾಡೆಮಿಯಿಂದ ಕಲಾವಿದರ ಕಲಾಕೃತಿಗಳನ್ನು ಪುಸ್ತಕ ಹಾಗೂ ವಿಡಿಯೋ ರೂಪದಲ್ಲಿ ಹೊರತರುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಲಾಗುವುದು ಎಂದರು.
 ಕಲಾವಿದ್ಯಾರ್ಥಿಗಳು ಕೇವಲ ಒಂದೇ ಕಲಾ ಪ್ರಕಾರಕ್ಕೆ ಸೀಮಿತವಾಗದೆ ಎಲ್ಲ ಕಲಾ ಪ್ರಕಾರಗಳಲ್ಲೂ ತಮ್ಮ ಪ್ರತಿಭೆ ಮೆರೆಯಬೇಕು. ಆಧುನಿಕ ಕಲೆಗೆ ಜೋತುಬೀಳದೆ ದೇಶದ ಪರಂಪರೆ ಹಾಗೂ ಸಾಂಪ್ರದಾಯಕ ಕಲೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಕಲೆ ತಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
 ನಿವೃತ್ತ ಪ್ರೊಫೆಸರ್ ಸಿ.ಎಚ್. ಮುರುಗೇಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಅತ್ಯಂತ ರಚನಾತ್ಮಕ ಕಾರ್ಯಕ್ರಮ ನಡೆಯುತ್ತಿದ್ದು, ಹೆಚ್ಚಿನ ಅಭಿವೃದ್ಧಿ ಕಾರ್ಯದ ಜತೆಗೆ ಇಲ್ಲಿನ ಥೀಮ್ ಪಾರ್ಕ್ ಹೆಚ್ಚು ಪ್ರಸಿದ್ಧಿಯಾಗಬೇಕು. ವಿದ್ಯಾರ್ಥಿಗಳು ದೇವರು ಕೊಟ್ಟ ಕಲೆ ಸಿದ್ಧಿಸಿಕೊಳ್ಳಬೇಕು ಎಂದರು.
 ದೃಶ್ಯಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಜಯರಾಜ್ ಎಂ. ಚಿಕ್ಕಪಾಟೀಲ್ ಮಾತನಾಡಿ, ನಾವು ಚಿತ್ರಕಲೆ, ರೇಖಾಚಿತ್ರ, ಶಿಲ್ಪಕಲೆ ಹಾಗೂ ಛಾಯಾಚಿತ್ರ ಮಾತ್ರ ನೋಡುತ್ತೇವೆ. ಆದರೆ, ಇತಿಹಾಸವನ್ನು ಬರೆದಂತಹ ಅಕ್ಷರಗಳ ಉಗಮ, ಬೆಳವಣಿಗೆ ಹಾಗೂ ವಿಕಾಸ ಅಗಾಧವಾದದು. ದಾವಣಗೆರೆಯಲ್ಲಿ ಅಕ್ಷರ ಸಿಂಗಾರೋತ್ಸವ ನಡೆದಿರುವುದು ಇದೇ ಪ್ರಥಮ ಎಂದು ಹೇಳಿದರು.
 ಸಹಾಯಕ ಪ್ರಾಧ್ಯಾಪಕ ಸತೀಶ್‌ಕುಮಾರ್ ಪಿ. ವಲ್ಲೇಪುರೆ, ಇತರರು ಇದ್ದರು. ಕಲಾವಿದ ಟಿ.ಬಿ. ಕೋಡಿಹಳ್ಳಿ ಸ್ವಾಗತಿಸಿದರು. ದತ್ತಾತ್ರೇಯ ಎನ್. ಭಟ್ ನಿರೂಪಿಸಿದರು.

See also  ಆಗಸ್ಟ್ 1ರಿಂದಲೇ ಭದ್ರಾ ನಾಲೆಗೆ ನೀರು ಹರಿಸಲು ಒತ್ತಾಯ
TAGGED:
Share This Article