ಸಿನಿಮಾ

ಬಿಬಿಎಂಪಿ ವ್ಯಾಪ್ತಿಯ 300 ಕಡೆಗಳಲ್ಲಿ ಥೀಮ್ ಆಧಾರಿತ ಮತಗಟ್ಟೆಗಳ ಸ್ಥಾಪನೆ: ತುಷಾರ್​ ಗಿರಿನಾಥ್​

ಬೆಂಗಳೂರು: ಮತದಾನ ನಡೆಯುವ ಎಲ್ಲ ಮತಗಟ್ಟೆಗಳ ಕೇಂದ್ರಗಳ ಸುತ್ತ ಉತ್ತಮ ವಾತಾವರಣ ಮೂಡಿಸಲು ತಕ್ಷಣದಿಂದಲೇ ಸ್ವಚ್ಚತಾ ಆಂದೋಲನ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನಗರದ 3,600 ಸ್ಥಳಗಳಲ್ಲಿ 8,802 ಮತಗಟ್ಟೆಗಳಿವೆ. ಈ ಎಲ್ಲ ಮತಗಟ್ಟೆಗಳ ಬಳಿಯಿರುವ ರಾಜಕಾಲುವೆಗಳಲ್ಲಿ ಹೂಳೆತ್ತುವ ಕೆಲಸ ಮಾಡಲಾಗುವುದು.

ಎಲ್ಲ ಮತಗಟ್ಟೆ ಕನಿಷ್ಠ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುವ ಜತೆಗೆ 1,500 ಮತಗಟ್ಟೆಗಳ ಬಳಿ ನೆರಳಿಗಾಗಿ ಪೆಂಡಾಲ್ ವ್ಯವಸ್ಥೆ ಮಾಡಲಾಗುವುದು. ನಗರದಲ್ಲಿ ಪಿಂಕ್ ಬೂತ್, ಅಂಗವಿಕರ ಬೂತ್, ಪರಿಸರ ಬೂತ್, ಡಿಜಿಟಲ್ ಬೂತ್, ಯುವ ಸಮೂಹ ಬೂತ್ ಸೇರಿದಂತೆ ಸುಮಾರು 300 ಥೀಮ್ ಆಧಾರಿತ ಮತಗಟ್ಟೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

BBMP

ಇದನ್ನೂ ಓದಿ: ಬಹುಕೋಟಿ ವಂಚಕ ಯುವರಾಜ್​ ಸ್ವಾಮಿ ವಿರುದ್ಧ ಮತ್ತೆರಡು ಪ್ರಕರಣ ದಾಖಲು!

ಮತದಾನದ ಚೀಟಿ ವಿತರಣೆ

ಮತದಾರರ ಪಟ್ಟಿಯಲ್ಲಿರುವ ಎಲ್ಲರಿಗೂ ಮತದಾರರ ಚೀಟಿ, ಮತದಾನದ ಮಾರ್ಗಸೂಚಿಯನ್ನು ವಿತರಿಸಲಾಗುತ್ತಿದೆ. ಮತಗಟ್ಟೆಯ ವಿವರವನ್ನು ಕೂಡಾ ನೀಡಲಾಗುತ್ತಿದೆ. ಮತದಾನದ ದಿನಕ್ಕಿಂದ 6 ದಿನದ ಮುಂಚಿತವಾಗಿಯೇ ಎಲ್ಲರಿಗೂ ಮತದಾರರ ಚೀಟಿ ತಲುಪಿಸಲಾಗುವುದು.

ಬಾರ್ ಕೋಡ್ ಸ್ಕ್ಯಾನ್​ ಮಾಡಿಯೂ ಮಾಹಿತಿ ಪಡೆಯಬಹುದು. ನಗರದಲ್ಲಿ ಕಳೆದ ಬಾರಿ ಶೇ.55 ಮತದಾನವಾಗಿತ್ತು. ಈ ಬಾರಿ ಶೇ.75ಕ್ಕೇರಿಸಲು ಗುರಿ ಹೊಂದಲಾಗಿದೆ. ಮತದಾರರು ಸ್ವಯಂಪ್ರೇರಿತರಾಗಿ ಮತಗಟ್ಟೆಗೆ ಬಂದು ಮತ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.

42 ಸಾವಿರ ಸಿಬ್ಬಂದಿ ನಿಯೋಜನೆ

ಚುನಾವಣೆಯ ಸಂಬಂಧ ಒಟ್ಟು 8,802 ಮತಗಟ್ಟೆಗಳಿಗೆ ಅಂದಾಜು 36 ಸಾವಿರ ಅಧಿಕಾರಿ, ಸಿಬ್ಬಂದಿಗಳು ಬೇಕಿದ್ದಾರೆ. ಜತೆಗೆ ಸೆಕ್ಟರ್ ಮೆಜಿಸ್ಟ್ರೇಟ್, ಮೈಕ್ರೋ ಅಬ್ಸರ್‌ವರ್ಸ್ ಸೇರಿದಂತೆ ಬೇರೆ ಬೇರೆ ಕಾರ್ಯಕ್ಕೆ ಒಟ್ಟಾರೆ 42,000 ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.

ಅತಿ ಸೂಕ್ಷ್ಮ, ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪ್ಯಾರಾ ಮಿಲಿಟರಿ ಪಡೆ, ಪೊಲೀಸ್ ಸಿಬ್ಬಂದಿ ಹಾಗೂ ಹೋಂ ಗಾರ್ಡ್‌ಗಳನ್ನು ಬಳಸಿಕೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

tushar

ಸಿ-ವಿಜಿಲ್ ಮೂಲಕ ದೂರು ದಾಖಲಿಸಿ

ನಗರದಲ್ಲಿ 250ಕ್ಕೂ ಹೆಚ್ಚು ಫ್ಲೈಯಿಂಗ್​ ಸ್ಕ್ವಾಡ್​, 230 ವೀಡಿಯೋ ತಂಡ, 35 ವೀಡಿಯೋ ವೀಕ್ಷಣಾ ತಂಡಗಳು ಎಲ್ಲದರ ಮೇಲೂ ಹೆಚ್ಚು ನಿಗಾವಹಿಸಲಾಗುವುದು. ಮುಂದಿನ ವಾರ ಮತದಾನ ನಡೆಯಲಿದ್ದು, ಏನಾದರೂ ಆಮೀಷಗಳು ಬಂದಲ್ಲಿ ಸಿ-ವಿಜಿಲ್ ತಂತ್ರಾಂಶದಲ್ಲಿ ದೂರು ದಾಖಲಿಸಬಹುದು. ಇದರ ಮೂಲಕ ದೂರು ನೀಡಿದರೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್