More

    ಬಹುಕೋಟಿ ವಂಚಕ ಯುವರಾಜ್​ ಸ್ವಾಮಿ ವಿರುದ್ಧ ಮತ್ತೆರಡು ಪ್ರಕರಣ ದಾಖಲು!

    ಬೆಂಗಳೂರು: ಬಿಜೆಪಿ ಮುಖಂಡರ ಹೆಸರು ಹೇಳಿಕೊಂಡು ಕೋಟ್ಯಂತರ ರೂ. ವಂಚಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಯುವರಾಜ್ ಸ್ವಾಮಿ ವಿರುದ್ಧ ಮತ್ತೆರಡು ವಂಚನೆ ಪ್ರಕರಣ ದಾಖಲಾಗಿದೆ.

    ಮಹಾಲಕ್ಷ್ಮೀ ಲೇಔಟ್ ನಿವಾಸಿ ಡಾ.ಗೌರಿಶಂಕರ್ ಎಂಬುವರು ನೀಡಿದ ದೂರಿನ ಮೇರೆಗೆ ಸದಾಶಿವನಗರ ಠಾಣೆ ಪೊಲೀಸರು ವಂಚನೆ, ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಪೊಲೀಸ್ ಅ​ಧಿಕಾರಿಗಳು ತಿಳಿಸಿದ್ದಾರೆ.

    ಪ್ರಕರಣದ ಹಿನ್ನಲೆ

    ಗೌರಿಶಂಕರ್ ಎಂಬುವರ ಕುಟುಂಬಕ್ಕೆ ಸೇರಿದ ರಾಜಮಹಲ್ ವಿಲಾಸ್ ಸಮೀಪದಲ್ಲಿ 50*85 ಅಡಿ ವಿಸ್ತೀರ್ಣದ ಜಾಗವಿದ್ದು, ಬಿಡಿಎನಿಂದ ಅವರ ತಂದೆ ವೈ ರೂಪ್ಲ ನಾಯ್ಕ ಎಂಬುವರ ಹೆಸರಿಗೆ ನೋಂದಣಿಯಾಗಿದೆ. ಅದರಲ್ಲಿ ಮನೆ ಕೂಡ ನಿರ್ಮಿಸಿಕೊಳ್ಳಲಾಗಿದೆ. 2009ರಲ್ಲಿ ತಂದೆ ರೂಪ್ಲ ನಾಯ್ಕ ಮೃತಪಟ್ಟಿದ್ದಾರೆ.

    ಬಳಿಕ ಮನೆಯನ್ನು ಆರು ಮಕ್ಕಳ ಪೈಕಿ ತಮ್ಮ ಸಹೋದರ ಮಹದೇವ್ ಎಂಬುವರ ಹೆಸರಿಗೆ ಖಾತೆ ವರ್ಗಾವಣೆ ಮಾಡಲಾಗಿದ್ದು, ಪ್ರತಿ ವರ್ಷ ತೆರಿಗೆ ಪಾವತಿ ಮಾಡಲಾಗುತ್ತಿದೆ. ಈ ಮಧ್ಯೆ ಆರೋಪಿ ಯುವರಾಜ್‌ಸ್ವಾಮಿಈ ಜಾಗವನ್ನು ತಮ್ಮ ತಂದೆ ರೂಪ್ಲ ನಾಯ್ಕ ತನಗೆ ವಿಲ್ ಮೂಲಕ ಬರೆದುಕೊಟ್ಟಿದ್ದಾರೆ ಎಂದು ಖಾತೆ ಬದಲಾವಣೆ ಮಾಡಿಕೊಂಡಿದ್ದಾನೆ.

    ಬಳಿಕ ವಿಲ್ ಪತ್ರ ಪಡೆದುಕೊಂಡು ನೋಡಿದಾಗ 2003ರಲ್ಲಿ ಆರೋಪಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ತಂದೆ ಆರೋಪಿಗೆ ವಿಲ್ ಬರೆದುಕೊಟ್ಟಿರುವಂತೆ ದಾಖಲೆ ಸೃಷ್ಟಿಸಿ, ತಂದೆಯ ನಕಲಿ ಸಹಿ ಕೂಡ ಪತ್ತೆಯಾಗಿದೆ. ಹೀಗಾಗಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಯುವರಾಜ ಸ್ವಾಮಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಗೌರಿಶಂಕರ್ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.

    yuvaraj swamy

    ಇದನ್ನೂ ಓದಿ: ಅಂಬೇಡ್ಕರ್​ ಕುರಿತು ಅವಹೇಳನ; ವರದಿ ನೀಡುವಂತೆ ಜೈನ್ ವಿವಿಗೆ ಸೂಚನೆ

    ಚೆಕ್‌ಬೌನ್ಸ್ ಪ್ರಕರಣ ದಾಖಲು

    ಮತ್ತೊಂದು ಪ್ರಕರಣದಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಹಣ ಪಡೆದು, ಬಳಿಕ ಚೆಕ್ ನೀಡಿ ವಂಚಿಸಿದ ಸಂಬಂಧ ಚೆಕ್‌ಬೌನ್ಸ್ ಪ್ರಕರಣ ದಾಖಲಾಗಿದೆ. ಗೋವಿಂದಯ್ಯ ಎಂಬುವರು ನೀಡಿದ ದೂರಿನ ಮೇರೆಗೆ ಸದಾಶಿವನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

    ಗೋವಿಂದಯ್ಯ ಅವರ ಅಳಿಯನಿಗೆ ಕೆಲಸ ಕೊಡಿಸುವುದಾಗಿ 30 ಲಕ್ಷ ರೂ. ಪಡೆದುಕೊಂಡಿದ್ದ ಯುವರಾಜ್ ಸ್ವಾಮಿ ಕೆಲಸವೂ ಕೊಡಿಸದೆ, ಹಣವೂ ಕೊಡದೆ ವಂಚಿಸಿದ್ದಾನೆ. ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಗೋವಿಂದಯ್ಯ ಪ್ರಕರಣ ದಾಖಲಿಸಿದ್ದರು.

    ನ್ಯಾಯಾಲಯದಲ್ಲಿ ಕೇಸು ವಿಚಾರಣೆ ಹಂತದಲ್ಲಿರುವಾಗ ಪುನಃ ಗೋವಿಂದಯ್ಯರನ್ನು ಸಂಪರ್ಕಿಸಿದ್ದ ಯುವರಾಜ್ ಸ್ವಾಮಿ ಪ್ರಕರಣ ಕೈಬಿಟ್ಟರೆ 30 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದ್ದ ಎಂದು ಹೇಳಲಾಗಿದೆ. ಅಲ್ಲದೆ, ನ್ಯಾಯಾಲಯದ ಬಳಿಯೇ ಗೋವಿಂದಯ್ಯರಿಗೆ 5 ಲಕ್ಷ ರೂ. ಮತ್ತು 10 ಲಕ್ಷ ರೂ.ನ ತಲಾ ಎರಡು ಚೆಕ್ ಕೊಟ್ಟು ಪ್ರಕರಣ ಹಿಂಪಡೆಯುವಂತೆ ಕೋರಿದ್ದರು.

    ಹೀಗಾಗಿ ಅದರನ್ವಯ ಗೋವಿಂದಯ್ಯ ಪ್ರಕರಣ ಹಿಂಪಡೆದಿದ್ದರು. ಆದರೆ ಕೆಲ ದಿನಗಳ ನಂತರ ಎರಡೂ ಚೆಕ್ ಬೌನ್ಸ್ ಆಗಿದೆ. ಹಣ ಕೇಳಿದರೆ ಕೊಡುತ್ತಿಲ್ಲ ಎಂದು ಯುವರಾಜ್ ಸ್ವಾಮಿ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಗೆ ಗೋವಿಂದಯ್ಯ ದೂರು ನೀಡಿದ್ದಾರೆ.

    ಕೆಲಸ ಕೊಡಿಸುವುದಾಗಿ ಅನೇಕರಿಗೆ ವಂಚಿಸಿದ್ದ ಆರೋಪದಡಿ ಯುವರಾಜ್ ಸ್ವಾಮಿಯ ಮನೆಯ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು 89ಕ್ಕೂ ಹೆಚ್ಚು ದಾಖಲೆಗಳನ್ನು ಜಪ್ತಿ ಮಾಡಿದ್ದರು. ಯುವರಾಜ್ ಸ್ವಾಮಿ ಮತ್ತು ಆತನ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳು ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಬಳಿಕ ಜೈಲು ಸೇರಿದ್ದ ಯುವರಾಜ ಸ್ವಾಮಿ, ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts