More

    40 ವರ್ಷದ ದಾಖಲೆ ಪುಡಿ ಮಾಡುವುದೇ ಬಿಜೆಪಿ?

    ರಾಘವ ಶರ್ಮ ನಿಡ್ಲೆ, ನವದೆಹಲಿ
    ಕಳೆದ 4 ದಶಕಗಳಿಂದ ಓವೈಸಿ ಕುಟುಂಬದ ಹಿಡಿತದಲ್ಲಿರುವ ಹೈದರಾಬಾದ್ ಲೋಕಸಭೆ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿಗೆ ಸಾಕ್ಷಿಯಾಗುತ್ತಿದೆ. ಹಾಲಿ ಸಂಸದ, ಆಲ್ ಇಂಡಿಯಾ ಮಜ್ಲಿಸ್ ಇತ್ತೆಹದುಲ್ ಮುಸ್ಲಿಮಿನ್ (ಎಐಎಂಐಎಂ) ಪಕ್ಷದ ಅಧ್ಯಕ್ಷ ಸಯ್ಯದ್ ಅಸಾದುದ್ದಿನ್ ಓವೈಸಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಹಿಂದುತ್ವದ ಪ್ರಬಲ ಪ್ರತಿಪಾದಕಿ ಮಾಧವಿ ಲತಾ ಸ್ಪರ್ಧಿಸಿರುವುದರಿಂದ ಈ ಕ್ಷೇತ್ರವೀಗ ಎರಡು ಶಕ್ತಿಗಳ ರಣಕಣವಾಗಿ ಮಾರ್ಪಟ್ಟಿದೆ.

    ಮೋದಿ ನಾಯಕತ್ವ, ಹಿಂದುಗಳ ರಕ್ಷಣೆ, ಸಾಂಸ್ಕೃತಿಕ ರಾಷ್ಟ್ರ ವಾದ ಹಾಗೂ ಓವೈಸಿ ಕುಟುಂಬ ರಾಜಕಾರಣವೇ ಮಾಧವಿ ಲತಾ ಪ್ರಚಾರದ ಮುಖ್ಯ ವಿಷಯಗಳು. ಮುಸ್ಲಿಂ ಬಾಹುಳ್ಯವುಳ್ಳ ಈ ಕ್ಷೇತ್ರದ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಿರುವ ಓವೈಸಿಗೆ ಮಾಧವಿ ಲತಾ ಸೆಡ್ಡು ಹೊಡೆದಿದ್ದರೂ, ತನ್ನದೇ ಮತಬ್ಯಾಂಕ್ ಹಾಗೂ ಗಟ್ಟಿ ಬೆಂಬಲಿಗ ವರ್ಗವನ್ನು ಹೊಂದಿರುವ ಓವೈಸಿಯನ್ನು ಕಟ್ಟಿಹಾಕುವುದು ಸುಲಭದ ಮಾತೇನಲ್ಲ. ಹಳೆ ಹೈದರಾಬಾದ್ ಅಭಿವೃದ್ಧಿಯಾಗದೆ, ಶೋಚನೀಯ ಸ್ಥಿತಿಯಲ್ಲಿರುವುದಕ್ಕೆ ಓವೈಸಿ ಕಾರಣ ಎನ್ನುತ್ತಾ ಮತದಾರರನ್ನು ಸೆಳೆಯಲು ಮಾಧವಿ ಯತ್ನಿಸಿದ್ದಾರೆ. ಪ್ರಚಾರದ ವೇಳೆ ಬಾಣವನ್ನು ಮಸೀದಿಯೊಂದಕ್ಕೆ ಗುರಿಯಾಗಿಸುತ್ತಿದ್ದ ದೃಶ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಲ್ಲದೆ, ಕೋಮು ಪ್ರಚೋದನೆ ಎಂದು ಕೇಸನ್ನೂ ದಾಖಲಿಸಲಾಗಿದೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ 7 ವಿಧಾನಸಭೆ ಕ್ಷೇತ್ರಗಳಿದ್ದು, ಗೋಶಾಮಹಲ್ ಹೊರತುಪಡಿಸಿ 6 ಕ್ಷೇತ್ರಗಳಲ್ಲಿ ಎಐಎಂಐಎಂ ಶಾಸಕರಿದ್ದಾರೆ. 1984ರಿಂದ ಓವೈಸಿ ಕುಟುಂಬವನ್ನು ಈ ಕ್ಷೇತ್ರದಲ್ಲಿ ಸೋಲಿಸಲು ಯಾರಿಗೂ ಸಾಧ್ಯವಾಗಿಲ್ಲ.

    ಬಿಜೆಪಿ ‘ಬಿ’ ಟೀಮ್ ನಾಯಕ ಎಂದೇ ವಿಪಕ್ಷಗಳು ಓವೈಸಿ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದರೂ, ಈ ಬಾರಿ ಓವೈಸಿಯನ್ನು ಸೋಲಿಸಲು ಮೋದಿ-ಅಮಿತ್ ಷಾ ಪ್ಲ್ಯಾನ್ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ದೇಶದ ವಿವಿಧೆಡೆ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿ, ಅಲ್ಲಿ ಕಾಂಗ್ರೆಸ್ ಮತಗಳು ವಿಭಜನೆಯಾಗುವಂತೆ ನೋಡಿಕೊಳ್ಳುತ್ತಿದ್ದುದರಿಂದ ಓವೈಸಿ ಪರೋಕ್ಷವಾಗಿ ಬಿಜೆಪಿಗೆ ನೆರವಾಗುತ್ತಿದ್ದರು. ಆದರೆ, ಈ ಬಾರಿ ಓವೈಸಿ ವಿರುದ್ಧ ಬಿಜೆಪಿ ಆಕ್ರಮಣಕಾರಿ ಧೋರಣೆ ಪ್ರದರ್ಶಿಸಿರುವುದು ಈ ವಿಶ್ಲೇಷಣೆಗಳನ್ನೆಲ್ಲಾ ಮೂಲೆಗುಂಪು ಮಾಡಿದೆ. ಸಂಸದೀಯ ವಾಕ್ಪಟುತ್ವ, ಅಸಾಧಾರಣ ಜ್ಞಾನದಿಂದಾಗಿ ದಿಲ್ಲಿ ರಾಜಕಾರಣದಲ್ಲಿ ಓವೈಸಿಗೆ ವರ್ಚಸ್ಸಿದೆ. ಮುಸ್ಲಿಮರನ್ನು ಓಲೈಸಿದರೂ, ರಾಷ್ಟ್ರ-ಅಂತಾರಾಷ್ಟ್ರೀಯ ರಾಜಕೀಯ ಇತಿಹಾಸ ಸೇರಿದಂತೆ ಹಲವು ವಿಷಯಗಳ ಬಗ್ಗೆ ಜ್ಞಾನ ಹೊಂದಿರುವುದರಿಂದ ಎಲ್ಲಾ ಪಕ್ಷಗಳಲ್ಲೂ ಓವೈಸಿಗೆ ಸ್ನೇಹಿತರಿದ್ದಾರೆ.

    ಓವೈಸಿ ಮನೆತನದ ರಾಜಕೀಯ ಹಿನ್ನೆಲೆ: ಓವೈಸಿ ಮನೆತನದಲ್ಲಿ ಸುಲ್ತಾನ್ ಸಲಾಹುದ್ದೀನ್ ಪ್ರಸಿದ್ಧ ಹೆಸರು. ಓವೈಸಿ ವಂಶವನ್ನು ರಾಜಕೀಯವಾಗಿ ಸದೃಢಗೊಳಿಸಿದವರು. ಹಳೇ ಹೈದರಾಬಾದ್ ಪ್ರಾಂತದ ಮುಸ್ಲಿಮರಲ್ಲಿ ಪ್ರಾಬಲ್ಯ ಸಾಧಿಸಿ, ‘ಮುಸ್ಲಿಮರ ಅಭಿವೃದ್ಧಿ’ಯನ್ನೇ ಘೊಷವಾಕ್ಯವನ್ನಾಗಿಟ್ಟುಕೊಂಡು, ಎಂಐಎಂ (ಮಜ್ಲಿಸ್ ಇತ್ತೆಹದುಲ್ ಮುಸ್ಲಿಮೀನ್) ಪಕ್ಷದ ರಾಜಕೀಯ ಪುನರುತ್ಥಾನಕ್ಕೆ ಕಾರಣನಾದವರು ಸಲಾಹುದ್ದಿನ್. 1920ರಲ್ಲಿ ನಿಜಾಮರ ಆಶೀರ್ವಾದದೊಂದಿಗೆ ಎಂಐಎಂ ಸ್ಥಾಪನೆಯಾಯಿತಾದರೂ, ರಾಜಕೀಯ ಶಕ್ತಿಯಾಗುವಲ್ಲಿ ವಿಫಲವಾಗಿತ್ತು. ಹೈದರಾಬಾದನ್ನು ಭಾರತಕ್ಕೆ ಸೇರಿಸುವುದು ಎಂಐಎಂಗೆ ಇಷ್ಟವಿರಲಿಲ್ಲ. ಇದರಿಂದ ಅಂಟಿಕೊಂಡ ರಾಷ್ಟ್ರವಿರೋಧಿ ಪಟ್ಟ ಮತ್ತು ಸ್ವಾತಂತ್ರ್ಯ ಬಳಿಕವೂ ಎಂಐಎಂ ಬಂಡಾಯದ ಸದ್ದು ಸಡಿಲಗೊಳ್ಳದೇ ಇದ್ದದ್ದು 1948ರಲ್ಲಿ ಆ ಸಂಘಟನೆಯ ನಿಷೇಧಕ್ಕೆ ಕಾರಣವಾಯಿತು.

    1957ರಲ್ಲಿ ಎಂಐಎಂ ನಿಷೇಧ ತೆರವಾಗಿದ್ದು ಓವೈಸಿ ಮನೆತನಕ್ಕೆ ವರವಾಯಿತು. ಆಗ ಸಕ್ರಿಯರಾಗಿದ್ದ ಅಬ್ದುಲ್ ವಹೀದ್ ಓವೈಸಿ (ಅಸಾದುದ್ದೀನ್​ರ ಅಜ್ಜ) ಹೈದರಾಬಾದ್​ನಲ್ಲಿ ಮತ್ತು ಮುಸ್ಲಿಮರು ಬಲವಾಗಿ ಬೇರೂರಿರುವ ಸ್ಥಳಗಳಲ್ಲಿ ಎಂಐಎಂನ್ನು ಕಟ್ಟಲು ಪ್ರಯತ್ನಿಸಿದರು. ‘ಮುಸ್ಲಿಮರು ತುಳಿತಕ್ಕೊಳಗಾಗಿದ್ದೇವೆ. ನಮ್ಮ ಪ್ರಗತಿಗೆ ನಾವೇ ಶ್ರಮಿಸಬೇಕು. ಹಾಗಾಗಿ ರಾಜಕೀಯವಾಗಿ ಬಲಗೊಳ್ಳಬೇಕು’ ಎನ್ನುತ್ತಾ ಸಮುದಾಯವನ್ನು ಸೆಳೆಯಲು ಪ್ರಯತ್ನಪಟ್ಟರು. ವಕೀಲರಾಗಿದ್ದರಿಂದ ಮಾತನಾಡುವ ಕಲೆ ಅವರಿಗೆ ಸಿದ್ಧಿಸಿತ್ತು. ಎಂಐಎಂನ್ನು ಆಲ್ ಇಂಡಿಯಾ ಮಜ್ಲಿಸ್ ಇತ್ತೆಹದುಲ್ ಮುಸ್ಲಿಮೀನ್ (ಎಐಎಂಐಎಂ) ಎಂದು ಬದಲಾಯಿಸಿ, ಪಕ್ಷದ ಮೇಲಿದ್ದ ರಾಷ್ಟ್ರವಿರೋಧಿ ಎಂಬ ಕೊಳೆ ತೊಳೆಯಲು ಯತ್ನಿಸಿದರು. ಆದರೆ ಎಂಐಎಂನ ಚಹರೆ ಬದಲಿಸಿದ್ದು ಅವರ ಮಗ ಸುಲ್ತಾನ್ ಸಲಾಹುದ್ದೀನ್.

    ಕಾರ್ಪೆರೇಟರ್ ಆಗಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಸಲಾಹುದ್ದೀನ್, ಪಕ್ಷ ಸಂಘಟನೆಯನ್ನೇ ಆದ್ಯತೆಯನ್ನಾಗಿಸಿಕೊಂಡು 1978ರಲ್ಲಿ ಮೊದಲ ಬಾರಿಗೆ ಚಾರ್​ವಿುನಾರ್ ಕ್ಷೇತ್ರದಲ್ಲಿ ಜಯ ಗಳಿಸಿ ಶಾಸಕರಾದರು. ನಂತರ ಹೈದರಾಬಾದ್ ಕ್ಷೇತ್ರದಿಂದ 6 ಬಾರಿ ಸಂಸದರಾಗಿ ಆಯ್ಕೆಯಾದರು. ಕಾಂಗ್ರೆಸ್ ಜೊತೆ ನಿರಂತರ ಮೈತ್ರಿ ಸಾಧಿಸಿದ್ದ ಎಂಐಎಂ ಎಂದಿಗೂ ಸಂಬಂಧ ಕೆಡಿಸಿಕೊಂಡಿರಲಿಲ್ಲ. ಸಲಾಹುದ್ದೀನ್ ಚಾಲಾಕಿ ನಾಯಕ. ಕಾಂಗ್ರೆಸ್​ನೊಳಗೆ ಬಂಡಾಯ ಎದ್ದಾಗಲ್ಲೆಲ್ಲಾ ಪ್ರಬಲ ಗುಂಪಿಗೆ ಆಂತರಿಕ ಬೆಂಬಲ ನೀಡುತ್ತಿದ್ದರು. ಪಕ್ಷ ಸಣ್ಣದಾಗಿದ್ದರೂ, ಅಧಿಕಾರದಲ್ಲಿರಬೇಕು ಎಂಬ ಲೆಕ್ಕಾಚಾರ. ಎಂಐಎಂ ಮೂಲಕ 4 ಬಾರಿ ವಿಧಾನಸಭೆ ಪ್ರವೇಶಿಸಿದ್ದ ಮಹಮ್ಮದ್ ಅಮಾನುಲ್ಲಾಖಾನ್, ಎಂಐಎಂನ ಅಂದಿನ ಅಧ್ಯಕ್ಷ ಸಲಾಹುದ್ದೀನ್ ಓವೈಸಿಯ ನಂಬಿಕಸ್ಥ. ಓವೈಸಿ ಕುಟುಂಬ ರಾಜಕಾರಣ ಅಮಾನುಲ್ಲಾಖಾನ್​ಗೆ ಹಿಡಿಸಿರಲಿಲ್ಲ. ಅಲ್ಲದೆ, ದಿನದಿಂದ ದಿನಕ್ಕೆ ಅಮಾನುಲ್ಲಾಖಾನ್ ವರ್ಚಸ್ಸು ಹೆಚ್ಚುತ್ತಲೇ ಇದ್ದದ್ದು ಸಲಾಹುದ್ದೀನ್ ಚಿಂತೆಗೂ ಕಾರಣವಾಗಿತ್ತು. ಕೊನೆಗೆ ಅಮಾನುಲ್ಲಾಖಾನ್ ಬಂಡಾಯವನ್ನೇ ನೆಪವಾಗಿಸಿಕೊಂಡು, ಓವೈಸಿ ಪಕ್ಷದಿಂದಲೇ ಆಮಾನತುಗೊಳಿಸಿದರು.

    ಓವೈಸಿ ಕುಟುಂಬದ ಸ್ವಜನಪಕ್ಷಪಾತ ಹಾಗೂ ಸರ್ವಾಧಿಕಾರ ವಿರೋಧಿಸಿ ತಾನು ಎಂಐಎಂ ತೊರೆದಿದ್ದೇನೆ ಎಂದ ಅಮಾನುಲ್ಲಾಖಾನ್ 1993ರಲ್ಲಿ ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ಸಂಘಟನೆ ಸ್ಥಾಪಿಸಿದರು. ಆ ಮೂಲಕ ಎಂಐಎಂಗೆ ಸೆಡ್ಡು ಹೊಡೆಯಲು ಪ್ರಯತ್ನಿಸಿದರಾದರೂ, ಸಲಾಹುದ್ದೀನ್​ರ 2ನೇ ಪುತ್ರ ಅಕ್ಬರುದ್ದೀನ್ ಎದುರು 1999ರ ಚುನಾವಣೆಯಲ್ಲಿ ಸೋತರು. 2002ರಲ್ಲಿ ಅಮಾನುಲ್ಲಾಖಾನ್ ನಿಧನರಾದರು. ಇತ್ತ ಪ್ರಬಲ ನಾಯಕರನ್ನು ಕಡೆಗಣಿಸಿ, ಪಕ್ಷದ ಏಕಮೇವಾದ್ವಿತೀಯ ನಾಯಕನಾಗಿ ಹೊರಹೊಮ್ಮಿದ್ದ ಸಲಾಹುದ್ದೀನ್, ಮುಸ್ಲಿಮರ ಪ್ರಖರ ನಾಯಕರಾಗಿ ಗುರುತಿಸಿಕೊಂಡಿದ್ದರು.

    ಮಾಧವಿ ಲತಾ ಯಾರು?: ನಿಜಾಮ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಪದವಿ, ಓಸ್ಮಾನಿಯಾ ವಿವಿಯಿಂದ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿರುವ ಮಾಧವಿ ಭರತನಾಟ್ಯ ಕಲಾವಿದೆಯಾಗಿ, ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮಾಧವಿ ಹೈದರಾಬಾದ್ ಮೂಲದ ವಿರಿಂಚಿ ಗ್ರೂಪ್ ಅಧ್ಯಕ್ಷೆಯಾಗಿದ್ದಾರೆ. ತ್ರಿವಳಿ ತಲಾಖ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಓವೈಸಿ ತ್ರಿವಳಿ ತಲಾಖ್ ನಿಷೇಧದ ಪ್ರಮುಖ ವಿರೋಧಿ. ಅವರ ವಿರುದ್ಧವೇ ಮಾಧವಿ ಲತಾ ಸ್ಪರ್ಧಿಸುತ್ತಿರುವುದು ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ. ಇದನ್ನೆಲ್ಲ ಗಮನಿಸಿಯೇ ಮಾಧವಿಗೆ ಟಿಕೆಟ್ ನೀಡಲು ಬಿಜೆಪಿ ತೀರ್ಮಾನಿಸಿತ್ತು.

    ಅಪ್ಪ ಬೆಳೆಸಿದ ಆಲದ ಮರ: 2004ರಲ್ಲಿ ಅಧ್ಯಕ್ಷ ಸ್ಥಾನ ತೊರೆದ ಸಲಾಹುದ್ದೀನ್ ಓವೈಸಿ, ತಮ್ಮ ಪುತ್ರ ಅಸಾದುದ್ದೀನ್​ರನ್ನು ಮುಖ್ಯವೇದಿಕೆಗೆ ಕರೆತಂದರು. 2004ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಅಸಾದುದ್ದೀನ್ ಮತ್ತೆ ಹಿಂತಿರುಗಿ ನೋಡಲಿಲ್ಲ. ಅಪ್ಪ ಬೆಳೆಸಿದ ಆಲದ ಮರವನ್ನು ಈಗಲೂ ನೀರು ಹಾಕಿ ಬೆಳೆಸುತ್ತಿದ್ದಾರೆ. ಪಕ್ಷವನ್ನು ಬೇರೆ ರಾಜ್ಯಗಳಲ್ಲೂ ವಿಸ್ತರಿಸಲು ಯತ್ನಿಸುತ್ತಿದ್ದಾರೆ. 2013ರಲ್ಲಿ ಸಂಸತ್​ನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಅಸಾದುದ್ದೀನ್ ಓವೈಸಿಗೆ ‘ಸಂಸದ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

    ಕುಟುಂಬ ರಾಜಕಾರಣ: ಮುಸ್ಲಿಂ ಅಭಿವೃದ್ಧಿ ಮಂತ್ರದ ಜೊತೆಗೆ ಕುಟುಂಬ ರಾಜಕಾರಣವನ್ನು ಅಷ್ಟೇ ಚೆನ್ನಾಗಿ ನಿರ್ವಹಿಸಿದ ‘ಖ್ಯಾತಿ’ಯೂ ಓವೈಸಿ ಮನೆತನದ್ದು. ‘ಓವೈಸಿ ವಂಶಜರನ್ನು ಬಿಟ್ಟು ಬೇರೆ ಇನ್ಯಾರೂ ಪಕ್ಷದಲ್ಲಿ ಪ್ರಬಲರಾಗದಂತೆ ಪ್ರತಿಯೊಬ್ಬ ‘ಓವೈಸಿ’ಯೂ ನೋಡಿಕೊಂಡಿದ್ದಾನೆ’ ಎಂಬುದು ಇಂದು ನಿನ್ನೆಯ ಆರೋಪವಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts