More

    ಜೇನುಗೂಡಿಗೆ ಕಾಂಗ್ರೆಸ್ ಕಲ್ಲು; ಅನಗತ್ಯ ಹೇಳಿಕೆ, ಅಸಂಬದ್ಧ ಪ್ರಲಾಪ

    ಸಂಪತ್ತಿನ ಮರುಹಂಚಿಕೆಯ ಕುರಿತು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿರುವ ಅಂಶದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ತೀವ್ರ ಟೀಕಾಟಿಪ್ಪಣಿ ಮುಂದುವರಿಸಿರುವ ಸಂದರ್ಭದಲ್ಲೇ, ಕಾಂಗ್ರೆಸ್​ನ ‘ಚಿಂತಕರ ಚಾವಡಿ’ಯ ಪ್ರಮುಖ ಸದಸ್ಯರಾದ ಸ್ಯಾಮ್ ಪಿತ್ರೋಡಾ ಅಮೆರಿಕದಿಂದಲೇ ಹೇಳಿಕೆಯೊಂದನ್ನು ನೀಡಿ, ಭಾರತದ ಲೋಕಸಭಾ ಚುನಾವಣಾ ಕಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

    ಅಲ್ಲಿನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ‘ಅಮೆರಿಕದಲ್ಲಿ ಈಗ ಜಾರಿಯಲ್ಲಿರುವಂತೆ ಭಾರತದಲ್ಲಿಯೂ ಪಿತ್ರಾರ್ಜಿತ ಆಸ್ತಿಯ ತೆರಿಗೆ ಪದ್ಧತಿ ಜಾರಿಗೆ ತಂದರೆ ಒಳ್ಳೆಯದು’ ಎಂದಿದ್ದಾರೆ. ‘ವ್ಯಕ್ತಿಯೊಬ್ಬ ಸಾವಿಗೀಡಾಗುತ್ತಿದ್ದಂತೆಯೇ ಆತನ ಒಟ್ಟು ಆಸ್ತಿಯಲ್ಲಿ ಶೇಕಡಾ 55ರಷ್ಟು ಆಸ್ತಿಯನ್ನು ಸರ್ಕಾರ ತೆರಿಗೆಯ ರೂಪದಲ್ಲಿ ವಶಪಡಿಸಿಕೊಳ್ಳಬಹುದು. ಉಳಿದ ಶೇಕಡಾ 45ರಷ್ಟು ಪಾಲನ್ನು ಮಾತ್ರ ಮಕ್ಕಳು ಹಂಚಿಕೊಳ್ಳಬಹುದು. ಸರ್ಕಾರಕ್ಕೆ ಈ ರೀತಿ ಬಂದ ಆಸ್ತಿಯನ್ನು ಅದು ಜನರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಅಥವಾ ತನಗೆ ಸೂಕ್ತವೆನಿಸಿದ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು. ಅಮೆರಿಕದ ಕೆಲವು ರಾಜ್ಯಗಳಲ್ಲಿ ಈಗಾಗಲೇ ಈ ನಿಯಮ ಅಸ್ತಿತ್ವದಲ್ಲಿದೆ’ ಎಂಬುದು ಸ್ಯಾಮ್ ಪಿತ್ರೋಡಾ ಅವರ ಸುದೀರ್ಘ ಹೇಳಿಕೆಯ ಸ್ಥೂಲ ಅರ್ಥವಾಗಿದೆ.

    ಪಿತ್ರೋಡಾ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆಪ್ತ ಬಳಗದಲ್ಲಿ ಇದ್ದವರು. ದಶಕಗಳ ಹಿಂದೆ ಭಾರತದ ರಾಜಕೀಯದಲ್ಲಿ ಸಕ್ರಿಯರೂ ಆಗಿದ್ದರು. ಈಗ ಅಮೆರಿಕದಲ್ಲಿ ನೆಲೆಸಿರುವ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಆಪ್ತರೂ, ಮಾರ್ಗದರ್ಶಕರೂ ಆಗಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರು ನೀಡುವ ಹೇಳಿಕೆಗೆ ಮಹತ್ವವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಮಾಡಬಹುದು ಎಂಬುದನ್ನು ಸ್ಯಾಮ್ಂಥ ಕಾಂಗ್ರೆಸ್ ಥಿಂಕ್​ಟ್ಯಾಂಕ್ ಸದಸ್ಯರ ಅಭಿಪ್ರಾಯಗಳು ಸೂಚ್ಯವಾಗಿ ತಿಳಿಸುತ್ತವೆ. ಬೇರೆ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದರೆ ಅದು ಸಾರ್ವಜನಿಕ ವಲಯದಲ್ಲಿ ಅಷ್ಟೇನೂ ಮಹತ್ವ ಪಡೆಯುತ್ತಿರಲಿಲ್ಲ. ಚುನಾವಣೆಯ ಸಂದರ್ಭವಾಗಿರುವುದರಿಂದ ಸಹಜವಾಗಿಯೇ ಆಡಳಿತಾರೂಢ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದೆ.

    ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಗಳ ಆಸ್ತಿಪಾಸ್ತಿಯನ್ನು ನುಸುಳುಕೋರರಿಗೆ ಹಂಚಿಕೆ ಮಾಡುತ್ತದೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗಳಿಗೆ ಇನ್ನೊಂದಿಷ್ಟು ಬಲವನ್ನು ಸ್ಯಾಮ್ ಪಿತ್ರೋಡಾ ಅವರೇ ಸ್ವತಃ ತಂದುಕೊಟ್ಟಂತಾಗಿದೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷವೇ ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ‘ಅದು ಅವರ ವೈಯಕ್ತಿಕ ಅಭಿಪ್ರಾಯ, ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದೆ. ಹೀಗೆ ಹೇಳುವ ಮೂಲಕ ಚುನಾವಣೆ ಸಮಯದಲ್ಲಿ ಆಗಬಹುದಾದ ನಷ್ಟವನ್ನು ತಪ್ಪಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ಮಾಡಿದೆಯೇ ಹೊರತು, ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರ ಮೂಲ ಚಿಂತನೆ ಅದೇ ರೀತಿಯಲ್ಲಿ ಇರುತ್ತದೆ ಎಂಬುದು ಗುಟ್ಟಿನ ವಿಷಯವೇನಲ್ಲ. ಭಾರತದಂತಹ ರಾಷ್ಟ್ರದಲ್ಲಿ ಇಂತಹ ವಿಷಯಗಳು ಅತ್ಯಂತ ಭಾವನಾತ್ಮಕವಾದಂಥವು. ಇವುಗಳ ಬಗ್ಗೆ ಪ್ರಸ್ತಾಪಿಸುವುದೆಂದರೆ ಜೇನುಗೂಡಿಗೆ ಕಲ್ಲು ಎಸೆದಂತೆಯೇ ಸರಿ. ಯಾವುದೇ ಪಕ್ಷದ ನಾಯಕರಿರಲಿ, ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸುವಾಗ ದುಪ್ಪಟ್ಟು ಎಚ್ಚರ ವಹಿಸುವುದು ಒಳ್ಳೆಯದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts