More

    ಬಡಮಕ್ಕಳ ಶಿಕ್ಷಣಕ್ಕೆ 7 ಕೋಟಿ ರೂ. ಮೌಲ್ಯದ ಜಮೀನು ದಾನ ಮಾಡಿದ ಮಹಿಳೆ! ಪ್ರತ್ಯಕ್ಷ ದೈವವೆಂದ ಜನರು

    ಚೆನ್ನೈ: ಕೋಟಿ ಕೋಟಿ ಹಣವಿದ್ದರೂ ಒಂದೇ ಒಂದು ರೂಪಾಯಿ ಖರ್ಚು ಮಾಡಲು ಹಿಂದೆ-ಮುಂದೆ ನೋಡುವ ಮತ್ತು ನೂರು ಬಾರಿ ಯೋಚಿಸುವ ಈ ಕಾಲದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಬಿಟ್ಟುಕೊಡುವ ಮೂಲಕ ಕೊಡುಗೈ ದಾನಿ ಎನಿಸಿಕೊಂಡಿರುವ ಕೊಪ್ಪಳದ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದ ಸಂಗತಿ ನಿಮಗೆಲ್ಲರಿಗೂ ತಿಳಿದಿದೆ. ಇದೇ ಮಾದರಿಯಲ್ಲಿ ತಮಿಳುನಾಡಿನ ಮಹಿಳೆಯೊಬ್ಬರು ಭಾರಿ ಬೆಲೆ ಬಾಳುವ ಭೂಮಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆ.

    ಮದುರೈ ಜಿಲ್ಲೆಯ ಕೊಡಿಕ್ಕುಳಂ ಮೂಲದ ಆಯಿ ಅಮ್ಮಳ್​ ಎಂಬುವರು 7 ಕೋಟಿ ರೂ. ಮೌಲ್ಯದ ಭೂಮಿಯನ್ನು ಸರ್ಕಾರಿ ಶಾಲೆಯ ವಿಸ್ತರಣೆಗೆಂದು ದಾನ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮ್ಮಳ್​ ಅವರಿಗೆ ಇದೇ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಪ್ರಶಸ್ತಿ ನೀಡಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಅವರು ಗೌರವಿಸಲಿದ್ದಾರೆ.

    ಶಿಕ್ಷಣ ಎಂಬುದು ಅಕ್ಷಯವಾದ ಸಂಪತ್ತು ಎಂದಿರುವ ಸ್ಟಾಲಿನ್, ಆಯಿ ಪುರಾಣಂ ಅಮ್ಮಾಳ್ ಅವರ ದೇಣಿಗೆಯಿಂದ ಸಾವಿರಾರು ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಾರೆ. ಆಯಿ ಅಮ್ಮಾಳ್ ಅವರು ಮೌಲ್ಯಯುತವಾದ ತಮಿಳು ಸಮುದಾಯದ ಸಂಕೇತವಾಗಿದ್ದಾರೆ. ಶಿಕ್ಷಣ ಮತ್ತು ಬೋಧನೆ ಅತ್ಯುನ್ನತ ಸದ್ಗುಣವಾಗಿದ್ದು, ಮುಂಬರುವ ಗಣರಾಜ್ಯೋತ್ಸವದಂದು ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳಿಂದ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಸ್ಟಾಲಿನ್​ ಅವರು ತಿಳಿಸಿದ್ದಾರೆ.

    ರಾಷ್ಟ್ರೀಕೃತ ಬ್ಯಾಂಕ್‌ ಒಂದರಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಯಿ ಪುರಾಣಂ ಅಮ್ಮಾಳ್, ಕೊಡಿಕುಳಂನ ಒಟ್ಟಕಡೈ ಬಳಿ ಇರುವ ಸರ್ಕಾರಿ ಶಾಲೆಯನ್ನು ಹೈಯರ್ ಸೆಕೆಂಡರಿ ಶಾಲೆಯನ್ನಾಗಿ ಪರಿವರ್ತಿಸಲು ಜಮೀನು ಅಗತ್ಯವಿದೆ ಎಂದು ಕಂಡುಕೊಂಡಾಗ, ಜಮೀನು ರಿಜಿಸ್ಟ್ರಾರ್‌ಗೆ ಹೋಗಿ ತಮ್ಮ ಜಮೀನನ್ನು ಶಾಲೆಯ ಹೆಸರಿಗೆ ನೋಂದಾಯಿಸುವ ಮೂಲಕ ತಮ್ಮ ಉದಾರತೆಯನ್ನು ಮರೆದಿದ್ದಾರೆ.

    ತುಂಡು ಭೂಮಿಗಾಗಿ ಕೊಲೆ ನಡೆಯುವ ಈ ಕಾಲದಲ್ಲಿ ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ದಾನವಾಗಿ ನೀಡಿರುವ ಆಯಿ ಅಮ್ಮಾಳ್​ ಅವರು ಸ್ಥಳೀಯ ಜನರ ಪಾಲಿಗೆ ಪ್ರತ್ಯಕ್ಷ ದೈವವಾಗಿದ್ದಾರೆ. ಶಾಲೆಯ ಹೆಸರಿಗೆ ಜಮೀನು ನೋಂದಣಿ ಮಾಡಿದ ಬಳಿಕ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಖ್ಯ ಶಿಕ್ಷಣಾಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.

    ಈ ಮಾಹಿತಿ ತಿಳಿಯುತ್ತಿದ್ದಂತೆ ಮಧುರೈ ಸಂಸದ ವೆಂಕಟೇಶನ್ ಅವರು ಕೊಡಿಕ್ಕುಳಂಗೆ ತೆರಳಿ ಜನವರಿ 11 ರಂದು ಆಯಿ ಅಮ್ಮಾಳ್​ ಅವರನ್ನು ಭೇಟಿ ಮಾಡಿ, ಧನ್ಯವಾದ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸರ್ಕಾರಿ ಶಾಲೆಗೆ 2 ಎಕರೆ ಜಮೀನು ದಾನ ಮಾಡಿ ಮಕ್ಕಳ ಶಿಕ್ಷಣಕ್ಕೆ ನೆರವಾದ ಹುಚ್ಚಮ್ಮಗೆ ರಾಜ್ಯೋತ್ಸವ ಪ್ರಶಸ್ತಿ

    ವಿಮಾನ ನಿಲ್ದಾಣಗಳಲ್ಲಿ ವಾರ್​ ರೂಂ ಸ್ಥಾಪನೆ: ಹೊಸ ನಿಯಮಾವಳಿ ಘೋಷಿಸಿದ ವಿಮಾನಯಾನ ಸಚಿವ ಸಿಂಧಿಯಾ

    ಆಂಧ್ರದಲ್ಲಿ ಕಾಂಗ್ರೆಸ್​ ನೂತನ ಅಧ್ಯಕ್ಷೆಯಾಗಿ ವೈಎಸ್ ಶರ್ಮಿಳಾ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts