More

    ಮೋದಿ ಮತ್ತೆ ಪ್ರಧಾನಿಯಾಗಲೆಂದು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ 102ರ ವೃದ್ಧೆ!

    ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇವೆ. ಈಗಾಗಲೇ ಬಿಜೆಪಿ ಮೊದಲ ಹಂತದಲ್ಲಿ 195 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್​ ಇನ್ನೂ ಸೀಟು ಹಂಚಿಕೆ ಚರ್ಚೆಯಲ್ಲೇ ಮುಳುಗಿದೆ. ಕರ್ನಾಟಕದ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಗಳ ಸಸ್ಪೆನ್ಸ್​ ಮಾತ್ರ ಹಾಗೇ ಉಳಿದಿದೆ. ಇದೆಲ್ಲದರ ನಡುವೆ ಈಗಾಗಲೇ ಚುನಾವಣಾ ಪ್ರಚಾರ ಭರ್ಜರಿಯಾಗೇ ಆರಂಭವಾಗಿದೆ. ಕೆಲ ಸಮೀಕ್ಷೆಗಳು ನರೇಂದ್ರ ಮೋದಿ ಮತ್ತೆ ಪ್ರಧಾನ ಮಂತ್ರಿಯಾಗಲಿದ್ದಾರೆ ಅಂತಲೂ ಭವಿಷ್ಯ ಸಹ ನುಡಿದಿವೆ. ದೇಶದ ಹಿತದೃಷ್ಟಿಯಿಂದ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದು ಅನೇಕರ ಆಸೆಯಾಗಿದ್ದು, 102 ವರ್ಷದ ವೃದ್ಧೆಯೂ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ.

    102 ವರ್ಷದ ವೃದ್ಧೆಯೊಬ್ಬರು ಇಳಿ ವಯಸ್ಸಿನಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿರುವುದೇ ಅಚ್ಚರಿ. ಅದರಲ್ಲೂ ಪಾದಾಯಾತ್ರೆಯ ಉದ್ದೇಶದ ಬಗ್ಗೆ ಅವರಾಡಿರುವ ಮಾತುಗಳು ಇನ್ನಷ್ಟು ಅಚ್ಚರಿ ಉಂಟು ಮಾಡುತ್ತದೆ.

    ಪಾದಯಾತ್ರೆ ಮಾಡುತ್ತಿರುವ ನಿಮ್ಮ ಉದ್ದೇಶ ಏನು ಎಂದು ಸಹ ಯಾತ್ರಿಗಳು ವೃದ್ಧೆಯನ್ನು ಕೇಳಿದಾಗ ದೇಶಕ್ಕೆ ಒಳಿತಾಗಬೇಕು, ರೈತರಿಗೆ ಒಳ್ಳೆಯದಾಗಬೇಕು, ಮಳೆ-ಬೆಳೆಯಾದರೆ ತಾನೆ ರೈತರು ಬದುಕುವುದು, ಪ್ರಾಣಿಗಳಿಗೂ ನೀರಿಲ್ಲ, ದೇಶ ಉದ್ಧಾರವಾಗಬೇಕಾದರೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಎನ್ನುತ್ತಾರೆ. ಮೋದಿ ಯಾಕೆ ಪ್ರಧಾನಿಯಾಗಬೇಕು ಎಂದು ಯಾತ್ರಿಗಳಲ್ಲಿ ಒಬ್ಬರು ಮತ್ತೆ ಪ್ರಶ್ನೆ ಮಾಡುತ್ತಾರೆ. ದೇಶಕ್ಕೆ ಒಳಿತಾಗಬೇಕು ಅಂದ್ರೆ ಮೋದಿ ಬರಬೇಕು ಎನ್ನುತ್ತಾರೆ. ಇದಿಷ್ಟು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ವಿಡಿಯೋ ಶೇರ್​ ಮಾಡಿಕೊಂಡ ವಿಜಯೇಂದ್ರ
    ವೃದ್ಧೆಯು ಮೋದಿಯ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶೇರ್​ ಮಾಡಿಕೊಂಡಿದ್ದು, ಮೋದಿ ಕಾ ಪರಿವಾರ್​ ಅಭಿಯಾನದ ವಿರುದ್ಧ ತಮ್ಮ ಮೂರ್ಖತನವನ್ನು ಪ್ರದರ್ಶಿಸುತ್ತಿರುವ ಕಾಂಗ್ರೆಸ್​ ಮತ್ತು ವಿಪಕ್ಷಗಳಿಗೆ ಭಾರತದ ಮೂಲೆ ಮೂಲೆಯಲ್ಲಿರುವ ಈ ತಾಯಂದಿರು ಮತ್ತು ಸಹೋದರಿಯರಲ್ಲಿ ಉತ್ತರವಿದೆ ಎಂದು ಕುಟುಕಿದ್ದಾರೆ.

    ಸಮೃದ್ಧಿಯಾದ ಮಳೆ ಮತ್ತು ದೇಶದ ಒಳಿತಿಗಾಗಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಸ್ಥಾನದಲ್ಲಿ ನೋಡುವ ಬಯಕೆಯಿಂದ 102 ವರ್ಷದ ವೃದ್ಧೆ ಕಾಡಿನ ಕಡಿದಾದ ಬೆಟ್ಟ ದಾರಿಯಲ್ಲಿ ಕಲ್ಲು ಮುಳ್ಳುಗಳನ್ನು ಲೆಕ್ಕಿಸದೇ ಮಲೆ ಮಹದೇಶ್ವರನ ಆಶೀರ್ವಾದಕ್ಕಾಗಿ ಕಠಿಣ ಪಾದಯಾತ್ರೆ ಕೈಗೊಂಡಿದ್ದಾರೆ. ಇದು ಕೋಟಿಗಟ್ಟಲೆ ಭಾರತೀಯರ ಭಾವನೆಗಳನ್ನು ಪ್ರತಿಧ್ವನಿಸುತ್ತಿದೆ. ಈ ಅಜ್ಜಿಯ ನಿಸ್ವಾರ್ಥ ಭಕ್ತಿ ಮತ್ತು ರಾಷ್ಟ್ರ ಮತ್ತು ನಮ್ಮ ಪ್ರಧಾನಿಯ ಮೇಲಿನ ಪ್ರೀತಿಗೆ ನಾವು ತಲೆಬಾಗುತ್ತೇವೆ ಎಂದು ವಿಜಯೇಂದ್ರ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂದು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಿರುವ ಮಹಾ ತಾಯಿಯ ಮಾತುಗಳನ್ನ ಕೇಳಿ ಎಂದು ಸಂಸದ ಪ್ರತಾಪ್​ ಸಿಂಹ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

    ಚುನಾವಣಾ ಬಾಂಡ್​ ಕೇಸ್​: ಗಡುವು ವಿಸ್ತರಣೆ ಕೋರಿದ SBI ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

    ಸ್ಕೂಟರ್​ಗೆ ಅಡ್ಡಬಂದಿದ್ದಕ್ಕೆ ಬಾಲಕಿ ಎಂದೂ ನೋಡದೆ ಮಂಡ್ಯ ಕಸಾಪ ಗೌರವ ಕಾರ್ಯದರ್ಶಿಯಿಂದ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts