More

    ಚುನಾವಣಾ ಬಾಂಡ್​ ಕೇಸ್​: ಗಡುವು ವಿಸ್ತರಣೆ ಕೋರಿದ SBI ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

    ನವದೆಹಲಿ: ರಾಜಕೀಯ ಪಕ್ಷಗಳು ಪಡೆದ ಚುನಾವಣಾ ಬಾಂಡ್​ಗಳ ಮಾಹಿತಿಯನ್ನು ನೀಡಲು ಗಡುವು ವಿಸ್ತರಣೆ ಕೋರಿರುವ ಸ್ಟೇಟ್​ ಬ್ಯಾಂಕ್​ ಇಂಡಿಯಾ (ಎಸ್​ಬಿಐ) ವಿರುದ್ಧ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್​) ಹೆಸರಿನ ಎನ್​ಜಿಒ, ಸುಪ್ರೀಂಕೋರ್ಟ್​ನಲ್ಲಿ ಗುರುವಾರ (ಮಾರ್ಚ್​ 07) ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿದೆ.

    ವಕೀಲ ಪ್ರಶಾಂತ್​ ಭೂಷಣ್ ಮುಖಾಂತರ ಎಡಿಆರ್​ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ. ಅರ್ಜಿಯನ್ನು ಇಮೇಲ್​ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ನೇತೃತ್ವದ ಪೀಠ, ಪ್ರಶಾಂತ್​ ಭೂಷಣ್​ ಅವರಿಗೆ ಸೂಚಿಸಿದ್ದು, ಮಾರ್ಚ್ 11 ರಂದು ನ್ಯಾಯಾಂಗ ನಿಂದನೆ ಅರ್ಜಿಯನ್ನು ಪಟ್ಟಿ ಮಾಡುವುದಾಗಿ ಖಾತರಿಪಡಿಸಿದೆ.

    ಫೆ. 15ರಂದು ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್, ಚುನಾವಣಾ ಬಾಂಡ್ ಅಥವಾ ಎಲೆಕ್ಟೋರಲ್​ ಬಾಂಡ್​ ಯೋಜನೆಯು ಆರ್ಟಿಕಲ್ 19(1)(ಎ) ಅನ್ನು ಉಲ್ಲಂಘಿಸುತ್ತದೆ ಮತ್ತು ಅಸಂವಿಧಾನಿಕವಾಗಿದೆ ಎಂದು ಹೇಳಿ, ಚುನಾವಣಾ ಬಾಂಡ್​ ಯೋಜನೆಯನ್ನೇ ರದ್ದು ಮಾಡಿತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು ಈ ಮಹತ್ವದ ಆದೇಶ ಹೊರಡಿಸಿತು.

    ತೀರ್ಪಿನ ವೇಳೆ 2024ರ ಮಾರ್ಚ್ 13 ರೊಳಗೆ ಭಾರತೀಯ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಎಲೆಕ್ಟೋರಲ್ ಬಾಂಡ್ ಖರೀದಿಗಳ ವಿವರಗಳನ್ನು ಪ್ರಕಟಿಸಬೇಕು ಎಂದು ಸಾಂವಿಧಾನಿಕ ಪೀಠ ಸೂಚಿಸಿತ್ತು. ಅಲ್ಲದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2019ರಿಂದ ಪ್ರಸ್ತುತ ದಿನಾಂಕದವರೆಗೆ ಚುನಾವಣಾ ಬಾಂಡ್ ಕೊಡುಗೆಗಳನ್ನು ಪಡೆದ ಪಕ್ಷಗಳ ವಿವರಗಳನ್ನು ಮಾರ್ಚ್​ 6ರೊಳಗೆ ಸಲ್ಲಿಸಲು ತಿಳಿಸಿತ್ತು. ಇದರ ಜತೆಗೆ ಚುನಾವಣಾ ಬಾಂಡ್ ನೀಡುವುದನ್ನು ನಿಲ್ಲಿಸಿ ಎಂದು ಬ್ಯಾಂಕ್​ಗಳಿಗೆ ಸೂಚನೆ ನೀಡಿತು.

    ಜೂನ್​ 30ಕ್ಕೆ ವಿಸ್ತರಿಸಿ
    ಗಡುವು ವಿಸ್ತರಣೆ ಕೋರಿ ಮಾರ್ಚ್​ 4ರಂದು ಎಸ್​ಬಿಐ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದೆ. ಜೂನ್​ 30ರವೆಗೆ ಗಡುವು ವಿಸ್ತರಣೆ ಮಾಡುವಂತೆ ಎಸ್​ಬಿಐ ಮನವಿ ಮಾಡಿದೆ. 116 ದಿನಗಳ ಕಾಲಾವಧಿಯನ್ನು ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿರುವ ಅರ್ಜಿಯನ್ನು ಒಂದು ವೇಳೆ ಸುಪ್ರೀಂ ಕೋರ್ಟ್ ಅಂಗೀಕರಿಸಿದ್ದಲ್ಲಿ, ಲೋಕಸಭೆ ಚುನಾವಣೆ ಮುಗಿಯುವವರೆಗೂ ರಾಜಕೀಯ ನಿಧಿಯ ಕುರಿತ ಪ್ರಮುಖ ಮಾಹಿತಿಯು ಗೌಪ್ಯವಾಗಿರುತ್ತದೆ.

    ಚುನಾವಣಾ ಬಾಂಡ್​ಗಳ ಬಗ್ಗೆ ಕೋರ್ಟ್​ ಹೇಳಿದ್ದೇನು?
    ಕಪ್ಪುಹಣದ ವಿರುದ್ಧದ ಹೋರಾಟ ಮತ್ತು ಬಾಂಡ್​ ನೀಡುವ ದಾನಿಗಳ ಗೌಪ್ಯತೆಯನ್ನು ಕಾಪಾಡುವ ಉದ್ದೇಶವು ಈ ಯೋಜನೆಯನ್ನು ಸಮರ್ಥಿಸಿಕೊಳ್ಳಲಾಗದು. ಚುನಾವಣಾ ಬಾಂಡ್​ಗಳಿಂದ ಕಪ್ಪುಹಣ ನಿಗ್ರಹವೇ ಅಸಾಧ್ಯವಾಗಿದೆ. ಈ ಯೋಜನೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಮತದಾರರು ತಮ್ಮ ಮತ ಚಲಾಯಿಸಲು ಅಗತ್ಯವಾದ ಮಾಹಿತಿಯ ಹಕ್ಕನ್ನು ಹೊಂದಿದ್ದಾರೆ ಮತ್ತು ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಕೋರ್ಟ್​ ಒತ್ತಿಹೇಳಿತು.

    ಏನಿದು ಚುನಾವಣಾ ಬಾಂಡ್​?
    ಈ ಯೋಜನೆಯನ್ನು 2018ರ ಜನವರಿಯಲ್ಲಿ ಆರಂಭಿಸಲಾಯಿತು. ಈ ಚುನಾವಣಾ ಬಾಂಡ್​ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಒಂದು ಕ್ರಮವಾಗಿದೆ. ಈ ಬಾಂಡ್​ಗಳನ್ನು​ ಸಾಮಾನ್ಯ ಜನರು ಅಥವಾ ಕಾರ್ಪೊರೇಟ್​ ಸಂಸ್ಥೆಗಳು ಬ್ಯಾಂಕ್​ಗಳಲ್ಲಿ ಖರೀದಿ ಮಾಡಿ, ಅದನ್ನು ರಾಜಕೀಯ ಪಕ್ಷಗಳಿಗೆ ನೀಡಬಹುದು. ಇದನ್ನು ಪಕ್ಷಗಳು ನಿಧಿಯನ್ನಾಗಿ ಬಳಸಿಕೊಳ್ಳುತ್ತವೆ. ಇಲ್ಲಿ ಬಾಂಡ್​ ಖರೀದಿಸಿದ ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ ಅಥವಾ ಬಾಂಡ್​ ಪಡೆದ ಪಕ್ಷದ ಹೆಸರಾಗಲಿ ಬಹಿರಂಗವಾಗುವುದಿಲ್ಲ. ಬದಲಾಗಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. (ಏಜೆನ್ಸೀಸ್​)

    ಚುನಾವಣಾ ಬಾಂಡ್​ ಮಾಹಿತಿ ನೀಡಲು ಗಡುವು ವಿಸ್ತರಣೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಎಸ್​ಬಿಐ

    ಗುಟ್ಟಾಗಿ 2ನೇ ಮದುವೆಯಾದ ರಾಖಿ ಸಾವಂತ್​ ಮಾಜಿ ಪತಿ ಆದಿಲ್! ಯಾರು ಈ ಸೋಮಿ ಖಾನ್?​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts