More

    ವಿಮಾನ ನಿಲ್ದಾಣಗಳಲ್ಲಿ ವಾರ್​ ರೂಂ ಸ್ಥಾಪನೆ: ಹೊಸ ನಿಯಮಾವಳಿ ಘೋಷಿಸಿದ ವಿಮಾನಯಾನ ಸಚಿವ ಸಿಂಧಿಯಾ

    ನವದೆಹಲಿ: ಮಂಜು ಆವರಿಸಿದ ಕಾರಣ ನೂರಾರು ವಿಮಾನಗಳ ವಿಳಂಬ ಅಥವಾ ರದ್ದತಿಗೆ ಕಾರಣವಾಗಿರುವ ದೇಶೀಯ ಮತ್ತು ಅಂತರಾಷ್ಟ್ರೀಯ ವಾಣಿಜ್ಯ ವಿಮಾನ ಕಾರ್ಯಾಚರಣೆಗಳನ್ನು ನಿಭಾಯಿಸಲು ಆರು ಅಂಶಗಳ ಕ್ರಿಯಾ ಯೋಜನೆಯನ್ನು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಪ್ರಕಟಿಸಿದ್ದಾರೆ.

    ಎಕ್ಸ್​ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್‌ ಹಾಕಿರುವ ಸಿಂಧಿಯಾ ಅವರು, “ಪ್ರಯಾಣಿಕರ ಅನಾನುಕೂಲತೆಯನ್ನು ತಗ್ಗಿಸಲು” ಏರ್‌ಲೈನ್‌ಗಳಿಗೆ ನೀಡಲಾದ ಹೊಸ SOP (ಸ್ಟ್ಯಾಂಡರ್ಡ್​ ಆಪರೇಟಿಂಗ್​ ಪ್ರೊಸಿಜರ್ಸ್) ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ವಿವರಿಸಿದ್ದಾರೆ.

    ಕೇಂದ್ರವು ಎಲ್ಲಾ ಆರು ಮೆಟ್ರೋ ವಿಮಾನ ನಿಲ್ದಾಣಗಳ ಕುರಿತು ದೈನಂದಿನ ವರದಿಗಳನ್ನು ಹೊಂದಿದೆ. ಅಲ್ಲದೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ನಿರ್ದೇಶನಗಳ ಅನುಷ್ಠಾನದ ಕುರಿತ ವರದಿಗಳನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

    “ಪ್ರಯಾಣಿಕರ ಅನಾನುಕೂಲತೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆ ನಿರ್ವಾಹಕರು ಎಲ್ಲಾ ಆರು ಮೆಟ್ರೋಗಳಲ್ಲಿ ‘ವಾರ್ ರೂಮ್’ಗಳನ್ನು (ತುರ್ತು ಕೊಠಡಿ) ಸ್ಥಾಪಿಸುತ್ತಾರೆ,” ಎಂದು ಅವರು ತಿಳಿಸಿದ್ದಾರೆ.

    “ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ನಿರ್ವಹಿಸುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್​ಎಫ್​) ಸಾಕಷ್ಟು ಸಿಬ್ಬಂದಿಯು ಎಲ್ಲ ಸಮಯದಲ್ಲಿ ಇರುವಂತೆ ಖಾತ್ರಿಪಡಿಸಲಾಗುವುದು” ಎಂದೂ ಅವರು ಹೇಳಿದ್ದಾರೆ.

    ಮಂಜು ಆವರಿಸುವುದರಿಂದ ಉಂಟಾಗುವ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರ ಅನಾನುಕೂಲತೆಯನ್ನು ತಗ್ಗಿಸಲು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (SOP) ಸೋಮವಾರ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗಿದೆ. ಈ ಎಸ್​ಒಪಿಗಳ ಜತೆಗೆ, ನಾವು ಎಲ್ಲಾ 6 ಮೆಟ್ರೋ ವಿಮಾನ ನಿಲ್ದಾಣಗಳಿಗೆ ಪ್ರತಿದಿನ ಮೂರು ಬಾರಿ ಘಟನೆಗಳ ವರದಿಯನ್ನು ಕೋರಿದ್ದೇವೆ ಎಂದು ಅವರು ತಿಳಿಸಿದ್ದಾರೆ.

    ಇಂಡಿಗೋ ಮತ್ತು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಕಳಪೆ ಸಂವಹನ ಮತ್ತು ಕೆಟ್ಟ ಹವಾಮಾನದ ಕಾರಣ ಉಂಟಾದ ವಿಳಂಬದ ಬಗೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

    ಭಾನುವಾರ ದೆಹಲಿಯಲ್ಲಿ ಬೆಳಗ್ಗೆ 5 ರಿಂದ 9 ರ ನಡುವೆ ಗೋಚರತೆ ಶೂನ್ಯಕ್ಕೆ ಇಳಿದಿದೆ. ವಾಯುಯಾನ ಸಚಿವಾಲಯವು ಸಮಸ್ಯೆಗಳನ್ನು ಪರಿಹರಿಸುವವರೆಗೆ ತಾಳ್ಮೆಯಿಂದಿರಿ ಎಂದು ಸಿಂಧಿಯಾ ಮನವಿ ಮಾಡಿದ್ದರು.

    ದೆಹಲಿ-ಗೋವಾ ಇಂಡಿಗೋ ವಿಮಾನದಲ್ಲಿ ಪೈಲಟ್​ ಮೇಲೆ ಪ್ರಯಾಣಿಕರೊಬ್ಬರು ಹಲ್ಲೆ ಮಾಡಿದ್ದನ್ನು ಉಲ್ಲೇಖಿಸಿದ್ದ ಅವರು, ವಿಮಾನಗಳಲ್ಲಿ ಹಿಂಸಾಚಾರದ ಯಾವುದೇ ಉದಾಹರಣೆಯನ್ನು “ಸ್ವೀಕಾರಾರ್ಹವಲ್ಲ” ಎಂದು ಸಚಿವರು ಹೇಳಿದ್ದರು. ಅಲ್ಲದೆ, ಗೋವಾ-ದೆಹಲಿ ವಿಮಾನ ವಿಳಂಬವಾದ ಕಾರಣ ಪ್ರಯಾಣಿಕರು ರನ್​ ವೇಯಲ್ಲಿಯೇ ಊಟ, ವಿಶ್ರಾಂತಿ ಮಾಡುತ್ತಿದ್ದ ವಿಡಿಯೋ ವೈರಲ್​ ಆಗಿತ್ತು.

    ಸೋದರನ ವಿರುದ್ಧ ಸೋದರಿ ಅಖಾಡಾಕ್ಕೆ: ಆಂಧ್ರದಲ್ಲಿ ಶರ್ಮಿಳಾ ನೇಮಕದಿಂದ ಕಾಂಗ್ರೆಸ್​ ಲಾಭವಾಗುವುದೇ?

    ಕೃಷಿ ರಾಸಾಯನಿಕ ಕಂಪನಿಯ ಷೇರುಗಳಲ್ಲಿ ರೂ. 1 ಲಕ್ಷ ಹೂಡಿಕೆ: 10 ವರ್ಷಗಳಲ್ಲಿ ರೂ. 70 ಲಕ್ಷಕ್ಕೆ ಏರಿಕೆ

    ರಾಮ ಮಂದಿರ ಉದ್ಘಾಟನೆ ‘ಮೋದಿಯವರ ಫಂಕ್ಷನ್’: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts