More

  Swati Muttina Male Haniye Review : ಕಂಬನಿ ಉಳಿಸುವ ಮಳೆಯ ಹನಿ

  ಚಿತ್ರ: ಸ್ವಾತಿ ಮುತ್ತಿನ ಮಳೆ ಹನಿಯೇ
  ನಿರ್ದೇಶನ: ರಾಜ್.ಬಿ. ಶೆಟ್ಟಿ
  ನಿರ್ಮಾಣ: ರಮ್ಯಾ
  ತಾರಾಗಣ: ರಾಜ್ ಬಿ.ಶೆಟ್ಟಿ, ಸಿರಿ ರವಿಕುಮಾರ್, ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ ಮುಂತಾದವರು

  ಪ್ರಮೋದ ಮೋಹನ ಹೆಗಡೆ

  ಜೀವನದ ತಿರುವುಗಳಲ್ಲಿ ಯಾರೋ ಅಪರಿಚಿತರು ಪರಿಚಯವಾಗುತ್ತಾರೆ. ಅವರೊಟ್ಟಿಗೆ ಸಮಯ ಕಳೆದಾಗ, ಅವರ ಕಥೆ ಕೇಳುವಾಗ, ಯಾವುದೋ ಒಂದು ಕ್ಷಣದಲ್ಲಿ ನಮ್ಮದೇ ಕಥೆ ಎನ್ನುವಷ್ಟು ಅವರು ಆಪ್ತಾರಾಗುತ್ತಾರೆ. ಆ ಆತ್ಮೀಯತೆಯನ್ನು ಹೃದಯ ಒಪ್ಪಿಕೊಂಡು ಸುಖದ ನದಿಯಲ್ಲಿ ಈಜಲು ಸಿದ್ಧವಾಗುವ ಹೊತ್ತಿಗೆ ಅವರು ದೂರವಾಗುವ ಸಂದರ್ಭ ಬಂದರೆ ಆಗುವ ದುಃಖ, ಹುಟ್ಟುವ ಖಾಲಿತನ, ಕಣ್ಣಂಚಲ್ಲೇ ಉಳಿದುಕೊಂಡು ಸುಡುವ ಕಂಬನಿ ತೀವ್ರವಾಗಿ ಕಾಡುತ್ತದೆ. ಇಂತಹದೊಂದು ಗಾಢವಾಗಿ ಕಾಡುವ ವಸ್ತುವನ್ನು ಹೊಂದಿರುವ ಹದವಾದ, ಹಿತವಾದ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’. ಬದುಕಿನ ವಾಸ್ತವದ ಬಗ್ಗೆ ಕನ್ನಡಿ ಹಿಡಿಯುವಲ್ಲಿ ನಿರ್ದೇಶಕ ರಾಜ್ ಬಿ. ಶೆಟ್ಟಿ ಗೆದ್ದಿದ್ದಾರೆ.

  ‘ಸುಂದರವಾದ ಸಾವು ಎಂದರೆ ಯಾವುದು ಗೊತ್ತಾ? ಕಂತ್ರಿ ನಾಯಿ ಅಂತೀವಲ್ಲ, ಅದನ್ನು ಹತ್ತು ಹನ್ನೆರಡು ವರ್ಷ ಕಟ್ಟು ಹಾಕದೇ ನಾವು ಸಾಕಿದರೆ ನಮ್ಮ ಜೊತೆಗೇ ಇರುತ್ತೆ. ಆದರೆ, ಅದು ಸಾಯೋ ಎರಡ್ಮೂರು ದಿನಗಳ ಮುಂಚೆ ನಾಪತ್ತೆ ಆಗೋಗತ್ತೆ. ಎಲ್ಲರಿಂದ ದೂರವಾಗಿ ನಾಯಿಯಾಗಿ ಸಾಯುತ್ತೆ. ಮನುಷ್ಯನೂ ಅದೇ ರೀತಿ ಮನುಷ್ಯನಾಗಿ ಸಾಯಬೇಕು’ ಅನಿಕೇತ್ (ರಾಜ್) ಹೇಳುವ ಈ ಮಾತೇ ಕಥೆಯ ಜೀವಾಳ. ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ಅವನು ಸಾವಿನ ಸಮೀಪದಲ್ಲಿದ್ದಾನೆ. ಆದರೆ, ಅವನ ಇರುವಿಕೆ, ಅವನ ಮಾತುಗಳು, ಅವನನ್ನು ಗುಣಪಡಿಸುವ ಡಾಕ್ಟರ್ ಪ್ರೇರಣಾ (ಸಿರಿ) ಬದುಕನ್ನು ಕಂಡುಕೊಳ್ಳುತ್ತಾಳೆ. ಪರಸ್ಪರ ನಿವೇದನೆ ಮಾಡಿಕೊಳ್ಳದೇ ಚಿಪ್ಪಿನಲ್ಲಿ ಅಡಗಿರುವ ಮುತ್ತಿನಂತಿರುವ ಅವರಿಬ್ಬರ ಸುಂದರ ಪ್ರೇಮ ನೋಡುವಾಗ ಹೃದಯ ಅರಳುತ್ತದೆ. ಜೀವನ ಬದಲಾದಾಗ ಅದೇ ಹೃದಯ ನರಳುತ್ತದೆ. ಇಡೀ ಸಿನಿಮಾ ಗೆಲ್ಲುವುದು ಅದಕ್ಕಿರುವ ಕಾವ್ಯಾತ್ಮಕ ಸ್ಪರ್ಷದಿಂದ. ಚಿತ್ರದಲ್ಲೇ ಅನೇಕ ಸೂಕ್ಷ್ಮ ಸಂಗತಿಗಳನ್ನು ಸೂಚ್ಯವಾಗಿ ತೋರಿಸಲಾಗಿದೆ. ಕಥೆ ಸುತ್ತುವುದು ಪ್ರೇರಣಾ ಬದುಕಿನ ಸುತ್ತ. ಭಾವನೆಗಳನ್ನು ನುಂಗಿಕೊಂಡು ಇನ್ನೊಬ್ಬರಿಗೆ ಧೈರ್ಯ ತುಂಬುವ ಪಾತ್ರವನ್ನು ಸಿರಿ ಸೊಗಸಾಗಿ ನಿಭಾಯಿಸಿದ್ದಾರೆ. ಅಂತಹ ಡಾಕ್ಟರ್‌ಗೆ ಧೈರ್ಯ ತುಂಬಿ ಪ್ರೀತಿ ನೀಡುವ ಪಾತ್ರದಲ್ಲಿ ರಾಜ್ ಜೀವಿಸಿದ್ದಾರೆ. ಉಳಿದವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

  ಚಿತ್ರ ನಿಧಾನ ಅಂತನ್ನಿಸಬಹುದು ಆದರೆ, ಇಂತಹ ಸಿನಿಮಾಗಳಿಗೆ ಅದರ ಅವಶ್ಯಕತೆ ಇದ್ದುದರಿಂದ ಎಲ್ಲಿಯೂ ತೊಡಕಾಗುವುದಿಲ್ಲ. ಮಿಧುನ್ ಮುಕುಂದನ್ ಮುದಗೊಳಿಸುವ ಸಂಗೀತ, ಪ್ರವೀಣ್ ಶ್ರಿಯಾನ್ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದು ಸಂಕಲನ ಮಾಡಿರುವ ರೀತಿ ಚಿತ್ರವನ್ನು ಇನ್ನೊಂದು ಹಂತಕ್ಕೆ ಏರಿಸುತ್ತದೆ. ಪ್ರೇರಣಾ ಕಣ್ಣಲ್ಲಿ ಉಳಿಯುವ ನಿರೀಕ್ಷೆ, ನಂದಿ ಬಟ್ಟಲು ಹೂವಿನ ಪರಿಮಳ, ಯಾವುದೋ ಘಾಟಿಯ ತಿರುವಿನಲ್ಲಿ ಸಾಗುವ ಬದುಕು, ಒಂಚೂರು ಕುತೂಹಲ ಹಾಗೇ ಉಳಿಯುತ್ತದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts