More

    ಎಸ್‌ಆರ್‌ಎಸ್ ಟ್ರಾವೆಲ್ಸ್ ಮಾಲೀಕ ರಾಜಶೇಖರ್ ವಿಧಿವಶ: ಕೋವಿಡ್-19 ಸೋಂಕಿಗೆ ಬಲಿ

    ಬೆಂಗಳೂರು: ದೇಶದ ಸಾರಿಗೆ ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಎಸ್‌ಆರ್‌ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಟಿ. ರಾಜಶೇಖರ್ (78) ಶುಕ್ರವಾರ ನಿಧನರಾದರು. ಮಾಗಡಿ ಮೂಲದ ರಾಜಶೇಖರ್ ಅವರು ದೇಶದ ಪ್ರಮುಖ ಸಾರಿಗೆ ಸಂಸ್ಥೆಗಳಲ್ಲಿ ಒಂದು ಎಂದೇ ಗುರುತಿಸಿಕೊಂಡಿದ್ದ ಎಸ್‌ಆರ್‌ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆ ಸ್ಥಾಪಿಸಿದ್ದರು. ಇದಕ್ಕೂ ಮುನ್ನ ಹಲವು ರೀತಿಯ ಸವಾಲುಗಳನ್ನು ಎದುರಿಸಿದ್ದರು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ರಾಜಶೇಖರ್, ಆರಂಭದಲ್ಲಿ ಟೂರಿಸ್ಟ್ ಬುಕ್ಕಿಂಗ್ ಏಜೆಂಟ್, ಟ್ರಾವೆಲ್ ಏಜೆಂಟ್ ಹೀಗೆ ಹಲವು ರೀತಿಯ ಕೆಲಸಗಳನ್ನು ಮಾಡಿದ್ದರು.

    1943ರ ಸೆ.17ರಂದು ಜನಿಸಿದ್ದ ರಾಜಶೇಖರ್, ಡಿಪ್ಲೊಮಾ ಇನ್ ಆಟೋಮೊಬೈಲ್ ವ್ಯಾಸಂಗ ಮಾಡಿದ್ದರು. ಹಲವು ಉದ್ಯೋಗದ ನಂತರ 1971ರಲ್ಲಿ ಎಸ್‌ಆರ್‌ಎಸ್ ಟ್ರಾವೆಲ್ಸ್ ಸ್ಥಾಪಿಸಿದರು. ಒಂದು ಬಸ್ ಮೂಲಕ ಆರಂಭಿಸಲಾದ ಸಂಸ್ಥೆ, ಇದೀಗ 3 ಸಾವಿರಕ್ಕೂ ಹೆಚ್ಚಿನ ಬಸ್‌ಗಳನ್ನು ಹೊಂದಿದೆ. ನಾಲ್ಕು ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ, ನೂರಾರು ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುತ್ತಿದೆ. ಬೆಂಗಳೂರು ಕೇಂದ್ರ ಕಚೇರಿಯಾಗಿದ್ದರೂ ಚೆನ್ನೈ, ಮುಂಬೈ, ವಿಜಯವಾಡ ಸೇರಿ ದೇಶದ ಇನ್ನಿತರ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಇದೀಗ ಎಸ್‌ಆರ್‌ಎಸ್ ಸಂಸ್ಥೆ 50ನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿಯೇ ತನ್ನ ಒಡೆಯನನ್ನು ಕಳೆದುಕೊಂಡಿದೆ.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

    ಸಾರಿಗೆ ಉದ್ಯಮಕ್ಕೆ ಅಪಾರ ಕೊಡುಗೆ: ಎಸ್‌ಆರ್‌ಎಸ್ ಮಾಲೀಕರಾಗಿ ಸಾರಿಗೆ ಉದ್ಯಮಕ್ಕೆ ಅಡಿಯಿಟ್ಟಿದ್ದ ಕೆ.ಟಿ.ರಾಜಶೇಖರ್, ಉದ್ಯಮದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಲವು ಕಾರ್ಯಗಳ ಮೂಲಕ ಸಂಕಷ್ಟ ಸಮಯದಲ್ಲಿ ನೆರವು ನೀಡಿದ್ದರು. ಪ್ರಸ್ತುತ ಪ್ರವಾಸಿ ವಾಹನ ಮಾಲೀಕರ ಕೇಂದ್ರ ಒಕ್ಕೂಟದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಕರ್ನಾಟಕ ಪ್ರವಾಸೋದ್ಯಮ ನೀತಿಯಲ್ಲಿ ಆತಿಥ್ಯ ಮತ್ತು ಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಅಂಶಗಳನ್ನು ಸೇರಿಸುವಲ್ಲಿ ರಾಜಶೇಖರ್ ಸಫಲರಾಗಿದ್ದರು. ರಾಜ್ಯ ಸಾರಿಗೆ ನೌಕರರು ಮುಷ್ಕರದಲ್ಲಿ ತೊಡಗಿದಾಗ ಸರ್ಕಾರದ ಮನವಿ ಮೇರೆಗೆ ಜನರಿಗೆ ನೆರವಾಗಲೆಂದು ಬಸ್ ಸೇವೆ ನೀಡುವುದಾಗಿ ಮೊದಲು ಹೇಳಿದವರು ರಾಜಶೇಖರ್. ಅದೇ ರೀತಿ ಕರೊನಾ ಸೋಂಕಿನ ಸಂಕಷ್ಟದಿಂದ ನಲುಗಿರುವ ಸಾರಿಗೆ ಉದ್ಯಮಕ್ಕೆ ನೆರವಾಗಬೇಕೆಂದು ರಾಜ್ಯ ಸರ್ಕಾರವನ್ನು ಬಲವಾಗಿ ಆಗ್ರಹಿಸಿದ್ದರು.

    ಕರೊನಾದಿಂದ ಬಳಲುತ್ತಿದ್ದರು: ಮೃಧು ಸ್ವಭಾವದವರಾಗಿದ್ದ ಕೆ.ಟಿ.ರಾಜಶೇಖರ್ ಇಳಿವಯಸ್ಸಿನಲ್ಲೂ ಚಟುವಟಿಕೆಯಿಂದ ಇರುತ್ತಿದ್ದರು. ಕರೊನಾ ಸೋಂಕಿಗೆ ತುತ್ತಾಗಿದ್ದರು. ಕಳೆದ 10 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಶುಕ್ರವಾರ ಬೆಳಗ್ಗೆ ಅಸುನೀಗಿದರು. ಮೃತರು ಮಗಳು ಮೇಘ ಮತ್ತು ಅಳಿಯ ದೀಪಕ್ ಅವರನ್ನು ಅಗಲಿದ್ದಾರೆ. ಎಸ್‌ಆರ್‌ಎಸ್ ಟ್ರಾವೆಲ್ಸ್ ಸಂಸ್ಥೆ ಮುನ್ನಡೆಸಲು ಮೇಘ ಮತ್ತು ದೀಪಕ್, ರಾಜಶೇಖರ್ ಅವರಿಗೆ ನೆರವಾಗುತ್ತಿದ್ದರು. ಎಸ್‌ಆರ್‌ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಇನ್ಫೋಸಿಸ್, ಅಪೋಲೋ, ಐಬಿಎಂ, ಡೆಲ್ ಸೇರಿ ಇನ್ನಿತರ ಸಂಸ್ಥೆಗಳು ನೀಡುವ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಎಸ್‌ಆರ್‌ಎಸ್ ಸಂಸ್ಥೆ ಭಾಜನವಾಗಿದೆ.

    ಇದನ್ನೂ ಓದಿ: ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ! 

    ಸಂಕೇಶ್ವರರ ಸಂತಾಪ
    ಎಸ್‌ಆರ್‌ಎಸ್ ಟ್ರಾವೆಲ್ಸ್ ಮಾಲೀಕರಾದ ಕೆ.ಟಿ.ರಾಜಶೇಖರ್ ಅವರ ನಿಧನಕ್ಕೆ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ಎಂಡಿ ಆನಂದ ಸಂಕೇಶ್ವರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಕೆ.ಟಿ.ರಾಜಶೇಖರ್ ಅವರು ಮೇರು ವ್ಯಕ್ತಿತ್ವವನ್ನು ಹೊಂದಿದ್ದರು. ಸಾರಿಗೆ ಉದ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದರು. ಟ್ರಾವೆಲ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದವರು ಎಸ್‌ಆರ್‌ಎಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಅವರ ಅಗಲಿಕೆಯಿಂದ ಸಾರಿಗೆ ಉದ್ಯಮಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
    | ಕೆ. ರಾಧಾಕೃಷ್ಣ ಹೊಳ್ಳ ಕರ್ನಾಟಕ ರಾಜ್ಯ ಟ್ರಾವೆಲ್ಸ್ ಆಪರೇಟರ್ಸ್ ಸಂಘದ​ ಅಧ್ಯಕ್ಷ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts