More

  ಮಾಲಕಿಗೆ ಪ್ರಜ್ಞೆ ತಪ್ಪಿಸಿ ಚಿನ್ನ ಕದ್ದ ಮಹಿಳೆ

  ಬೆಂಗಳೂರು: ಮಜ್ಜಿಗೆಯಲ್ಲಿ ಮತ್ತು ಬರಿಸುವ ಮದ್ದು ಬೆರೆಸಿ ಪೇಯಿಂಗ್ ಗೆಸ್ಟ್ ಮಾಲಕಿಗೆ ಕುಡಿಸಿ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು ಮಾಡಿದ್ದ ಅಡುಗೆ ಕೆಲಸದಾಳು ಹಲಸೂರು ಪೊಲೀಸರ ಅತಿಥಿಯಾಗಿದ್ದಾಳೆ.

  ಹಲಸೂರು ಬಳಿಯ ರಾಜೇಶ್ವರಿ ಬಂಧಿತೆ. ಕೆಲ ದಿನಗಳ ಹಿಂದೆ ಚಿನ್ನಾಭರಣ ಕಳವು ಆಗಿರುವ ಬಗ್ಗೆ ಪಿ.ಜಿ. ಮಾಲೀಕರು ದೂರು ನೀಡಿದ್ದರು. ಇದರ ಮೇರೆಗೆ ತನಿಖೆ ಕೈಗೊಂಡು ರಾಜೇಶ್ವರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ. ಆರೋಪಿಯಿಂದ 130 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಕೌಟುಂಬಿಕ ಕಲಹ ಕಾರಣ ತನ್ನ ಪತಿಯಿಂದ ಪ್ರತ್ಯೇಕವಾಗಿದ್ದ ರಾಜೇಶ್ವರಿ, ತಿಂಗಳ ಹಿಂದಷ್ಟೇ ಹಲಸೂರು ಸಮೀಪದ ಪಿ.ಜಿ.ಗೆ ಕೆಲಸಕ್ಕೆ ಸೇರಿದ್ದಳು. ಕೆಲ ದಿನಗಳಲ್ಲೇ ಮಾಲಕಿಯ ವಿಶ್ವಾಸವನ್ನು ಗಳಿಸಿದ್ದಳು. ಮಾ.23ರಂದು ಅನಾರೋಗ್ಯಕ್ಕೆ ತುತ್ತಾಗಿದ್ದ ಪಿ.ಜಿ. ಮಾಲಕಿ, ಕಾಲು ಒತ್ತಿ ಆರೈಕೆ ಮಾಡಿ ಮಜ್ಜಿಗೆಯಲ್ಲಿ ಮತ್ತು ಭರಿಸುವ ಮದ್ದು ಬೆರೆಸಿಕೊಟ್ಟಿದ್ದಳು. ಸಂತ್ರಸ್ತೆ ಪ್ರಜ್ಞೆ ತಪ್ಪಿದ ಬಳಿಕ 130 ಗ್ರಾಂ ಚಿನ್ನ ದೋಚಿದ್ದಳು. ಆಭರಣಗಳನ್ನು ಪರಿಚಿತ ಚಿನ್ನದ ವ್ಯಾಪಾರಿಗೆ ಮಾರಾಟ ಮಾಡಿ ಹಣ ಪಡೆದು ಪಿ.ಜಿ. ಕೆಲಸಕ್ಕೆ ಹಾಜರಾಗಿದ್ದಳು.

  ಅದೇ ದಿನ ಸಂಜೆ ಚಿನ್ನ ನಾಪತ್ತೆ ಬಗ್ಗೆ ದೂರುದಾರರಿಗೆ ಗೊತ್ತಾಗಿತ್ತು. ಕೂಡಲೇ ಪಿ.ಜಿ. ಕೆಲಸಗಾರರನ್ನು ವಿಚಾರಿಸಿದಾಗ ಯಾರೂ ಒಪ್ಪಿಕೊಂಡಿಲ್ಲ. ಶಂಕೆ ಮೇರೆಗೆ ರಾಜೇಶ್ವರಿ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಸುಳಿವು ಸಿಕ್ಕಿತು. ಕೃತ್ಯ ನಡೆದ ಮಧ್ಯಾಹ್ನ ಪಿ.ಜಿ. ಸಮೀಪದ ಚಿನ್ನಾಭರಣ ಮಳಿಗೆಗೆ ತೆರಳಿ ಆಭರಣಗಳನ್ನು ಮಾರಾಟ ಮಾಡಿದ್ದಳು. ಚಿನ್ನದ ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ರಾಜೇಶ್ವರಿ ಹೆಸರು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts