

ಲಖನೌ: ಪ್ರಿಯಕರನಿಗಾಗಿ ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಆಚರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೀಮಾ ಹೈದರ್ ಕೇಕ್ ಕತ್ತರಿಸಿ ಪ್ರಧಾನಿ ಮೋದಿಗೆ ಶುಭ ಹಾರೈಸುತ್ತಿರುವುದು ಕಂಡು ಬರುತ್ತದೆ.
ಭಾರತಕ್ಕೆ ವಿಶ್ವದಾದ್ಯಂತ ಕೀರ್ತಿ ತಂದುಕೊಟ್ಟಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನುಮದಿನದ ಶುಭಾಶಯಗಳು ಎಂದು ಹೇಳಿರುವ ಸೀಮಾ ಹೈದರ್, ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿ ಶುಭ ಕೋರಿದ್ದಾರೆ.
ಇತ್ತ ಸೀಮಾ ಹೈದರ್ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಅವರ ನಡೆಯನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ಸೀಮಾ ಹೈದರ್ ಪ್ರಧಾನಿ ಮೋದಿ ಅವರ ಜನ್ಮದಿನಾಚರಣೆ ಆಚರಿಸಿರಲಿಲ್ಲವೆಂದರೆ ಅದು ಅಪೂರ್ಣವಾಗುತ್ತಿತ್ತು ಎಂದು ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ದೇಶದ ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರಿಗೆ ರಕ್ಷಾ ಬಂಧನದ ಪ್ರಯುಕ್ತ ರಾಖಿ ಕಳುಹಿಸುವ ಮೂಲಕ ಸೀಮಾ ಹೈದರ್ ಸುದ್ದಿಯಲ್ಲಿದ್ದರು.