More

    ಮುಚ್ಚುವಂತಿದ್ದ ವಿದ್ಯಾಲಯಕ್ಕೆ ಹಳೇ ವಿದ್ಯಾರ್ಥಿಗಳು, ದಾನಿಗಳ ಕಾಯಕಲ್ಪ: ಆಲಡ್ಕ ನೂಜಿ ಶಾಲೆ ಯಶೋಗಾಥೆ

    ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ
    ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗ್ರಾಮೀಣ ಭಾಗ ಕರ್ಜೆ ಗ್ರಾಪಂ ವ್ಯಾಪ್ತಿಯ ಹಲುವಳ್ಳಿ ಗ್ರಾಮದ ಆಲಡ್ಕ(ನೂಜಿ)ಯಲ್ಲಿ 1961ರಲ್ಲಿ ಆರಂಭವಾಗಿದ್ದ ಸರ್ಕಾರಿ ಶಾಲೆ, ವಿದ್ಯಾರ್ಥಿಗಳ ಕೊರತೆಯಿಂದ ಒಂದು ಹಂತದಲ್ಲಿ ಮುಚ್ಚುವಂತಾಗಿತ್ತು. ಆದರೆ ಹಳೇ ವಿದ್ಯಾರ್ಥಿಗಳ, ದಾನಿಗಳ ಸಕಾಲಿಕ ಪ್ರಯತ್ನದಿಂದಾಗಿ ಶಾಲೆಯಿಂದು ಉಳಿದು, ಬೆಳೆಯುತ್ತಿದೆ. ಇದು ಆ ಶಾಲೆಯ ಯಶೋಗಾಥೆ.

    ಹಿಂದುಳಿದ ಗ್ರಾಮೀಣ ಪ್ರದೇಶದ ನೂಜಿ ಶ್ರೀ ಗೋಪಾಲಕೃಷ್ಣ ಮಠದ ಅಂಗಣದಲ್ಲಿ ಶಿಕ್ಷಣ ಪ್ರೇಮಿ ಕೃಷ್ಣ ಭಟ್ಟರ ಮನೆಯ ಚಾವಡಿಯಲ್ಲಿ 1961ರಲ್ಲಿ ಶಾಲೆ ಆರಂಭಗೊಂಡಿತು. ಹಲವು ವರ್ಷ ಚಾವಡಿಯಲ್ಲಿ ಶಾಲೆ ನಡೆದು, ದಿ.ವಿಠಲ ಶೆಟ್ಟಿ, ದಿ.ಶ್ರೀನಿವಾಸ ಪ್ರಭು, ದಿ.ಬೊಂಬ ನಾಯ್ಕ, ದಿ.ಆನಂದ ಶೆಟ್ಟಿ, ದಿ.ಸೋಮ ನಾಯ್ಕ, ದಿ.ರಾಮ ನಾಯ್ಕ ಕುಕ್ಕುಡೆ, ದಿ.ಮಿಣ್ಪ ನಾಯ್ಕ, ದಿ.ಕೊಂಬ ನಾಯ್ಕ ಹಾಗೂ ಶ್ಯಾಮಣ್ಣ ಪ್ರಭು ಮತ್ತು ಬೂದ ನಾಯ್ಕ ನೇತೃತ್ವದಲ್ಲಿ ಹುಲ್ಲಿನ ಛಾವಣಿ ನಿರ್ಮಿಸಲ್ಪಟ್ಟು ಶಾಲೆ ಸ್ಥಳಾಂತರವಾಯಿತು. ಬಳಿಕ ಒಂದು ಕೊಠಡಿ ಕಟ್ಟಡದೊಂದಿಗೆ ಪಟೇಲ ದಿ.ಮೋಹನದಾಸ ಶೆಟ್ಟಿ ಅವರ ಮುತುವರ್ಜಿಯಲ್ಲಿ ಸ್ವಂತ ನೆಲೆ ಕಂಡುಕೊಂಡಿತು. 2000ರಲ್ಲಿ ಐದನೆಯ ತರಗತಿಯವರೆಗೆ ಮೇಲ್ದರ್ಜೆಗೇರಿತು.

    ದಾನಿಗಳು, ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಪಾಲಕರ ಸಹಕಾರದಿಂದ ವಾಹನ ವ್ಯವಸ್ಥೆ, ವಾಹನ ವೆಚ್ಚ, ಗೌರವ ಶಿಕ್ಷಕರ ಸಂಬಳ, ಪಠ್ಯಪುಸ್ತಕ, ಸಮವಸ್ತ್ರ, ಎಲ್‌ಕೆಜಿ-ಯುಕೆಜಿ ವಿದ್ಯಾರ್ಥಿಗಳ ಸಂಪೂರ್ಣ ವೆಚ್ಚ ಭರಿಸಲಾಗುತ್ತಿದೆ. ಸಂಸ್ಥೆಯ 60ನೇ ವರ್ಷದ ಸವಿನೆನಪಿಗಾಗಿ 1650 ಚದರ ಅಡಿ ವಿಸ್ತೀರ್ಣ 31 ಲಕ್ಷ ರೂ. ಮೊತ್ತದ ತರಗತಿ ಕೊಠಡಿ ಸೇರಿದಂತೆ ಸಭಾಭವನ ನಿರ್ಮಾಣವಾಗಿದೆ. ಸರ್ಕಾರ, ಪಾಲಕರು, ದಾನಿಗಳು, ಎಸ್‌ಡಿಎಂಸಿ ನೆರವಿನಿಂದ 70 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ನೂತನ ತರಗತಿ ಕಟ್ಟಡಗಳು ನಿರ್ಮಾಣವಾಗಿವೆೆ. 35 ಲಕ್ಷ ರೂ. ವೆಚ್ಚದ ಶಾಲಾ ಕೊಠಡಿ ವಜ್ರಸೌಧ ನಿರ್ಮಾಣಗೊಂಡಿದೆ.

    ಮುಚ್ಚುವಂತಿದ್ದ ವಿದ್ಯಾಲಯಕ್ಕೆ ಹಳೇ ವಿದ್ಯಾರ್ಥಿಗಳು, ದಾನಿಗಳ ಕಾಯಕಲ್ಪ: ಆಲಡ್ಕ ನೂಜಿ ಶಾಲೆ ಯಶೋಗಾಥೆ

    ಮುಂದಿನ ಯೋಜನೆಗಳು

    ರಂಗಮಂದಿರ ನಿರ್ಮಾಣ, ಶಾಲಾ ಕೈತೋಟ, ಆಟದ ಮೈದಾನ, ಕಿಂಡರ್ ಗಾರ್ಡನ್, ಸ್ಮಾರ್ಟ್ ಕ್ಲಾಸ್, ಶೌಚಗೃಹ, ಶಾಲಾ ವಾಹನ.

    ಆರಕ್ಕಿಳಿದ ಸಂಖ್ಯೆ

    ವಿವಿಧ ಕಾರಣಗಳಿಂದ 2018-19ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆರಕ್ಕೆ ಕ್ಷೀಣಿಸಿ ಶಾಲೆ ಮುಚ್ಚುವ ಸ್ಥಿತಿಗೆ ಬಂದಿತ್ತು. ಹಳೇ ವಿದ್ಯಾರ್ಥಿಗಳು, ದಾನಿಗಳು, ಗ್ರಾಮಸ್ಥರು, ಪಾಲಕರ ಸಹಕಾರದಿಂದ ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಭಾಷೆ ಕಲಿಸಲು ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲಾಯಿತು.

    ಮುಚ್ಚುವಂತಿದ್ದ ವಿದ್ಯಾಲಯಕ್ಕೆ ಹಳೇ ವಿದ್ಯಾರ್ಥಿಗಳು, ದಾನಿಗಳ ಕಾಯಕಲ್ಪ: ಆಲಡ್ಕ ನೂಜಿ ಶಾಲೆ ಯಶೋಗಾಥೆ

    ಮೂಲಸೌಕರ್ಯಕ್ಕೆ ಯೋಜನೆ

    ಶಾಲಾ ಆಟದ ಮೈದಾನ ಸೇರಿದಂತೆ ಎರಡು ಎಕರೆ ಜಾಗ ಡೀಮ್ಡ್ ಫಾರೆಸ್ಟ್ ಕಾರಣದಿಂದ ಇದುವರೆಗೆ ಪಹಣಿ ಪತ್ರ ಪಡೆಯಲು ಸಾಧ್ಯವಾಗಿಲ್ಲ. ಜ್ಞಾನದೀಪ ಯೋಜನೆಯ ಅಡಿಯಲ್ಲಿ ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗೌರವ ಶಿಕ್ಷಕರ ನಿಯೋಜನೆಯಾಗಿದೆ. 2019-20ರಲ್ಲಿ 30 ವಿದ್ಯಾರ್ಥಿಗಳಿಂದ ಈ ಸಾಲಿನಲ್ಲಿ 78 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಂತಹಂತವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಶೈಕ್ಷಣಿಕ ಅಗತ್ಯಗಳೊಂದಿಗೆ ಶಾಲೆಗೆ ಮೂಲ ಸೌಕರ್ಯ ಸಲುವಾಗಿ ನೂತನ ಯೋಜನೆ ರೂಪಿಸಲಾಗಿದೆ.

    ಶಾಲಾ ವಿದ್ಯಾರ್ಥಿಗಳನ್ನು ಕರೆತರಲು ಹೊಸ ಬಸ್ ಖರೀದಿಸಲು ಆಲೋಚಿಸಲಾಗಿದೆ. ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಗೆ ಮೇಲ್ದರ್ಜೆಗೇರಿಸಲು ಯೋಚಿಸಲಾಗಿದೆ.
    -ರವಿರಾಜ್ ಶೆಟ್ಟಿ ಆಲಡ್ಕ
    ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ

    ಹೊಸೂರು, ಹಲುವಳ್ಳಿ, ಕುರ್ಪಾಡಿ, ಚೆಗ್ರಿಬೆಟ್ಟು ಹಾಗೂ ಚೇರ್ಕಾಡಿ ಭಾಗದಿಂದ ಈಗಾಗಲೇ ತಮ್ಮ ಮಕ್ಕಳನ್ನು ದಾಖಲಾತಿ ಮಾಡುತ್ತಿದ್ದಾರೆ. ಈ ಬಾರಿ ಯೋಗ ತರಗತಿ, ಸ್ಮಾರ್ಟ್ ಕ್ಲಾಸ್ ಮತ್ತು ಯಕ್ಷಗಾನ ತರಬೇತಿ ಉಚಿತ ನೀಡಲಾಗುವುದು. ಅನುಭವಿ ಶಿಕ್ಷಕ ವೃಂದವಿದೆ. ಹಳೇ ವಿದ್ಯಾರ್ಥಿಗಳ ಶ್ರಮದಿಂದ ಶಾಲೆ ಅಭಿವೃದ್ಧಿ ಹೊಂದುತ್ತಿದೆ.
    -ರಾಧಾಕೃಷ್ಣ ಪ್ರಭು
    ಹಳೇ ವಿದ್ಯಾರ್ಥಿ ಸಂಘ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts