More

    ಮುಚ್ಚಲಿದ್ದ ಶಾಲೆಯಲ್ಲಿ 431 ವಿದ್ಯಾರ್ಥಿಗಳು: ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ಯಶೋಗಾಥೆ

    ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ
    ಬ್ರಹ್ಮಾವರ ತಾಲೂಕಿನ ಗ್ರಾಮೀಣ ಪ್ರದೇಶವಾದ ಕೊಕ್ಕರ್ಣೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಶತಮಾನ ಪೂರೈಸಿರುವ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆ. ಒಂದು ಕಾಲದಲ್ಲಿ 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಈ ವಿದ್ಯಾದೇಗುಲ ಬದಲಾದ ಪರಿಸ್ಥಿತಿ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವ ಇತ್ಯಾದಿಗಳಿಂದಾಗಿ ಮುಚ್ಚುವ ಪರಿಸ್ಥಿತಿಗೆ ಬಂದಿತ್ತು. ಆಗ ಶಾಲಾ ಶಿಕ್ಷಕರು, ಎಸ್‌ಡಿಎಂಸಿ, ಹಳೇ ವಿದ್ಯಾರ್ಥಿಗಳು ಜತೆಯಾಗಿ ಶಾಲೆಗೆ ಮರುಜೀವ ನೀಡುವ ಸಂಕಲ್ಪ ತೊಟ್ಟರು. ಆ ಸಂಕಲ್ಪ ಇಂದು ಶಾಲೆಯ ಯಶೋಗಾಥೆಗೆ ಮುನ್ನುಡಿ ಬರೆದಿದೆ.

    ಹಳೇ ವಿದ್ಯಾರ್ಥಿ ಸಂಘವನ್ನು ರಚಿಸಿಕೊಂಡು ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಸೆಳೆಯುವ ಸಲುವಾಗಿ ವಿವಿಧ ಪ್ರೋತ್ಸಾಹಕ ಯೋಜನೆ ತರುವಲ್ಲಿ ದಾನಿಗಳು ನೆರವಾದರು. ವಿದ್ಯಾರ್ಥಿಗಳ ದಾಖಲಾತಿಗಾಗಿ ಮನೆ-ಮನೆ ಭೇಟಿ ನೀಡಿದರು. ಉಚಿತ ವಾಹನದ ವ್ಯವಸ್ಥೆ ಮಾಡಲು ದಾನಿಗಳನ್ನು ಸಂಪರ್ಕಿಸಿದರು. ಸರ್ಕಾರಿ ಶಾಲೆಯ ಮೇಲಿನ ಅಭಿಮಾನದಿಂದ ಹಲವಾರು ಮಂದಿ ಕೈ ಜೋಡಿಸಿ ಸಹಕರಿಸಿದರು. ಹೀಗಾಗಿ ದಾಖಲಾತಿ ಏರಿಕೆಯಾಯಿತು.

    ಮೂರು ಮಂದಿ ಕಾಯಂ ಶಿಕ್ಷಕರಿದ್ದರೂ ಸಹ ಹಳೇ ವಿದ್ಯಾರ್ಥಿಗಳ ಮತ್ತು ದಾನಿಗಳ ಸಹಕಾರದಿಂದ ಗೌರವ ಶಿಕ್ಷಕರನ್ನು ನೇಮಿಸಿ ಒಂದು ಮತ್ತು ಆರನೇಯ ತರಗತಿಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲಾಯಿತು. ಗುಣಮಟ್ಟದ ಕಲಿಕೆ ಜತೆ ನವೀನ ಚಟುವಟಿಕೆ ಕಾರಣ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚುತ್ತಾ ಬಂತು. ಇದೀಗ ಈ ಸಾಲಿನಲ್ಲಿ 431ಕ್ಕೆ ಏರಿಕೆಯಾಗಿದೆ.

    2019-20ರಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆಯಾಯಿತು. ಒಂದು ಸಂದರ್ಭ ವಿದ್ಯಾರ್ಥಿಗಳ ದಾಖಲಾತಿಗೆ ಮನೆಮನೆಗೆ ಭೇಟಿ ನೀಡಬೇಕಾದ ಪರಿಸ್ಥಿತಿ ಇದ್ದ ಶಾಲೆಯಲ್ಲಿ ಇಂದು ಪಾಲಕರೇ 10ರಿಂದ 15 ಕಿ.ಮೀ ದೂರದಿಂದ ವಾಹನ ವ್ಯವಸ್ಥೆ ಮಾಡಿಕೊಂಡು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುತ್ತಿದ್ದಾರೆ. ಶಾಲೆಯಲ್ಲಿ ದಾಖಲಾತಿಗಾಗಿ ಪಾಲಕರ ಒತ್ತಾಯ ಹೆಚ್ಚುತ್ತಿದೆ.

    ಕರೋನಾ ಸಂದರ್ಭ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಐದು ಮಂದಿ ಶಿಕ್ಷಕರು, ವಿದ್ಯಾಗಮ ಕಾರ್ಯಕ್ರಮ ಹಾಗೂ ಆನ್‌ಲೈನ್ ತರಗತಿ ಮೂಲಕ ತರಗತಿ ನಡೆಸಿದ್ದರು. ಕರೋನಾ ಸಂದರ್ಭ ಅನೇಕ ಆನ್‌ಲೈನ್ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಕರಾಟೆ, ಕ್ರೀಡೆ, ಪ್ರತಿಭಾ ಕಾರಂಜಿ ಮುಂತಾದ ಸ್ಪರ್ಧೆಗಳಲ್ಲಿಯೂ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.

    ಈ ಶಾಲೆಗೆ ದೊರೆತಿರುವ ಪ್ರಶಸ್ತಿಗಳು

    ರಾಜ್ಯಮಟ್ಟದ ಸ್ವಚ್ಛ ವಿದ್ಯಾಲಯ ಪ್ರಶಸ್ತಿ, ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ, ನ್ಯಾಶನಲ್ ಲೆವೆಲ್ ಟೈಡ್ ಟರ್ನರ್ ಚಾಂಪಿಯನ್ ಪ್ರಶಸ್ತಿ, ಧರ್ಮಸ್ಥಳ ಶಾಂತಿವನ ಟ್ರಸ್ಟ್ ಆಯೋಜಿಸಿದ ನೈತಿಕ ಮೌಲ್ಯಾಧಾರಿತ ಪುಸ್ತಕದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

    ಮಕ್ಕಳ ಹೆಸರಲ್ಲಿ ನಿರಖು ಠೇವಣಿ

    2017ರಲ್ಲಿ ಒಂದನೇ ತರಗತಿಗೆ ದಾಖಲಾಗುವ ಪ್ರತಿ ವಿದ್ಯಾರ್ಥಿಯ ಹೆಸರಿನಲ್ಲಿ ರೂ.5,000 ನಿರಖು ಠೇವಣಿ ಇಡುವ ಯೋಜನೆ ಜಾರಿಗೆ ತರಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ವಾಹನದ ವ್ಯವಸ್ಥೆ, ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ನೀಡಲಾಯಿತು. 11 ವಿದ್ಯಾರ್ಥಿಗಳು ದಾಖಲಾಗಿ ಶಾಲೆಯಲ್ಲಿ ಒಟ್ಟು 53 ವಿದ್ಯಾರ್ಥಿಗಳಿದ್ದರು. 2018ರಲ್ಲಿ ರೂ.3,000 ನಿರಖು ಠೇವಣಿ ನೀಡಲಾಯಿತು. ಆಗ ವಿದ್ಯಾರ್ಥಿಗಳ ದಾಖಲಾತಿ 65ಕ್ಕೆ ಏರಿತು.

    ಆಂಗ್ಲ ಮಾಧ್ಯಮಕ್ಕೆ ಸಮನಾಗಿ ಬೇಡಿಕೆ

    ಆಂಗ್ಲ ಮಾಧ್ಯಮಕ್ಕೆ ಸಮನಾಗಿ ಕನ್ನಡ ಮಾಧ್ಯಮಕ್ಕೂ ಸಹ ದಾಖಲಾತಿಗೆ ಬೇಡಿಕೆ ಇರುವುದು ಈ ಶಾಲೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ. ಈ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಮಾಧ್ಯಮದಲ್ಲಿ 152 ವಿದ್ಯಾರ್ಥಿಗಳು, ಆಂಗ್ಲ ಮಾಧ್ಯಮದಲ್ಲಿ 279 ವಿದ್ಯಾರ್ಥಿಗಳಿದ್ದಾರೆ. ಎಲ್.ಕೆ.ಜಿ ಹಾಗೂ ಯು.ಕೆ.ಜಿ.ತರಗತಿಗಳು ಪ್ರೌಢಶಾಲಾ ಆವರಣದಲ್ಲಿದ್ದು ಅಲ್ಲಿ 91 ವಿದ್ಯಾರ್ಥಿಗಳಿದ್ದಾರೆ.

    ಶಾಲೆಯಲ್ಲಿ ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಅತ್ಯುತ್ತಮ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ್ದಾರೆ. ಶಾಲಾ ಕಟ್ಟಡ ಮತ್ತು ಶಾಲಾ ವಾಹನದ ಬೇಡಿಕೆ ಈಡೇರಿದರೆ ಈ ಶಾಲೆ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗುತ್ತದೆ.
    -ಉದಯ್ ನಾಯಕ್ ಎಸ್‌ಡಿಎಂಸಿ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts