More

    ಮರೀಚಿಕೆಯಾದ ವಿದ್ಯುತ್

    -ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

    ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗವಾದ ಕೊಕ್ಕಡ, ಪಟ್ರಮೆ, ನಿಡ್ಲೆ , ಹತ್ಯಡ್ಕ, ಶಿಶಿಲ ಶಿಬಾಜೆ ಗ್ರಾಮಗಳಲ್ಲಿ ಹಲವು ದಿನಗಳಿಂದ ವಿದ್ಯುತ್ ಸಮಸ್ಯೆ ತಲೆದೋರಿದ್ದು, ನೀರಿಲ್ಲದೆ ಕೃಷಿ ಬೆಳೆಗಳು ಕಣ್ಣ ಮುಂದೆಯೇ ಒಣಗಿ ಹೋಗುತ್ತಿರುವುದನ್ನು ಕಂಡು ಕೃಷಿಕರು ದಿಕ್ಕು ತೋಚದಂತಾಗಿದ್ದಾರೆ. ಮತ್ತೊಂದೆಡೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ.

    ದಿನದಲ್ಲಿ ಒಂದು ತಾಸು ತ್ರಿಫೇಸ್ ವಿದ್ಯುತ್ ಇದ್ದರೂ ಅದೂ ಕೈಕೊಡುತ್ತಿರುತ್ತದೆ. ಉಳಿದಂತೆ ಲೋವೊಲ್ಟೇಜ್‌ನಿಂದ ಪಂಪ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಫೆ.15ರಿಂದ ಮೇ ಅಂತ್ಯದವರೆಗೆ ತೋಟಕ್ಕೆ ನೀರು ಹಾಯಿಸುವುದು ಅನಿವಾರ್ಯವಾಗಿದ್ದು, ಈ ಭಾಗದ ಜನರ ಜೀವನೋಪಾಯವಾದ ಅಡಕೆ ಬೆಳೆಯನ್ನು ಉಳಿಸಿಕೊಳ್ಳಲಾರದೆ ಬೆಳೆಗಾರರು ಕಂಗಾಲಾಗಿದ್ದಾರೆ.

    ಕುಡಿವ ನೀರಿಗೂ ತಾತ್ವಾರ

    ಗ್ರಾಪಂನಿಂದ ಟ್ಯಾಂಕ್‌ಗಳ ಮೂಲಕ ಸರಬರಾಜಾಗುತ್ತಿರುವ ಕುಡಿಯುವ ನೀರಿಗೂ ತಾತ್ವಾರ ಎದುರಾಗಿದೆ. 50 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್‌ನಲ್ಲಿ ನೀರು ತುಂಬಬೇಕಾದರೆ ಕನಿಷ್ಠ 6 ತಾಸು ಸಮರ್ಪಕ ವಿದ್ಯುತ್ ಬೇಕು. 25 ಲೀಟರ್‌ನ ಟ್ಯಾಂಕ್‌ಗಳಿಗೆ 3-4 ತಾಸು ವಿದ್ಯುತ್ ಬೇಕು. ಆದರೆ ಪ್ರಸ್ತುತ ದಿನದಲ್ಲಿ ಒಂದು ತಾಸೂ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಅದೂ ಅಲ್ಲದೆ ವೋಲ್ಟೇಜ್‌ನಿಂದ ಪಂಪ್ ಹಾಳಾಗುತ್ತಿದ್ದು, ಮತ್ತೊಂದು ಸಮಸ್ಯೆ ಸೃಷ್ಟಿಯಾಗುತ್ತಿದೆ.

    ಹೆಚ್ಚುವರಿ ಪರಿವರ್ತಕ

    ಕಳೆದ ವರ್ಷ ಬೆಳ್ತಂಗಡಿ ಉಪಕೇಂದ್ರ ವ್ಯಾಪ್ತಿಯಲ್ಲಿ 290 ಹಾಗೂ ಉಜಿರೆ ವ್ಯಾಪ್ತಿಯಲ್ಲಿ 248 ಪರಿವರ್ತಕಗಳನ್ನು ಹೊಸದಾಗಿ ಅಳವಡಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಈ ಹಿಂದೆ ದಿನಕ್ಕೆರಡು ಬಾರಿಯಂತೆ ತ್ರಿಫೇಸ್ ವಿದ್ಯುತ್ ನೀಡುತ್ತಿದ್ದು, ಈ ವರ್ಷ ಎಲ್ಲವೂ ಬದಲಾಗಿದೆ. ಹೊಸ ಪರಿವರ್ತಕ ಅಳವಡಿಕೆಯಿಂದ ವೋಲ್ಟೆಜ್ ಸಮಸ್ಯೆ ಇರಲಾರದು ಎಂದುಕೊಂಡಿದ್ದ ಬಳಕೆದಾರರ ನಿರೀಕ್ಷೆ ಸುಳ್ಳಾಗಿದೆ. ಗೃಹಬಳಕೆಯ ಉಪಕರಣಗಳೂ ವೋಲ್ಟೆಜ್ ಸಮಸ್ಯೆಯಿಂದ ಕಾರ್ಯನಿರ್ವಹಿಸುತ್ತಿಲ್ಲ.

    ಹಕ್ಕೊತ್ತಾಯಕ್ಕೆ ನಿರ್ಧಾರ

    ಕೊಕ್ಕಡದಿಂದ ಮುಂಡೂರುಪಳಿಕೆವರೆಗೆ ನೆಲ್ಯಾಡಿ ಸಬ್‌ಸ್ಟೇಷನ್‌ನಿಂದ 3 ಫೇಸ್ ವಿದ್ಯುತ್ ನೀಡುವಂತೆ ಆಗ್ರಹಿಸಿ ಕೊಕ್ಕಡ ಗ್ರಾಮದ ವಿದ್ಯುತ್ ಬಳಕೆದಾರರು ಬೆಳ್ತಂಗಡಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಮಂಗಳೂರು ಮೆಸ್ಕಾಂ ವ್ಯವಸ್ಥಾಪಕರಿಗೆ ಮಂಗಳವಾರ ಮನವಿ ನೀಡಿದರು. ಸಮಸ್ಯೆ ಬಗೆಹರಿಯದಿದ್ದಲ್ಲಿ ಮಾ.30ರಂದು ಕೊಕ್ಕಡ ಮೆಸ್ಕಾಂ ಜೆಇ ಕಚೇರಿ ಎದುರು ಹಕ್ಕೊತ್ತಾಯ ಮಾಡಲಿದ್ದೇವೆ ಎಂದು ತಿಳಿಸಿದರು. ತಾಲೂಕು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಲಂಬಿಲ, ಸಾಮಾಜಿಕ ಹೋರಾಟಗಾರ ಶ್ರೀಧರ ಗೌಡ ಕೆಂಗೇಡೇಲು, ಗ್ರಾಪಂ ಸದಸ್ಯ ಜಗದೀಶ ಕೆಂಪಕೋಡಿ, ರೈತರಾದ ದಿನಕರ ಕೇಚೋಡಿ, ಮೋಹನ ಬಡೆಕೈಲು, ಸುಂದರ ಗೌಡ ಹಳ್ಳಿಂಗೇರಿ, ಸುಂದರ್ ಕೆಂಗುಡೇಲು, ಕೆ.ವಿ.ಭಟ್ ಹಳ್ಳಿಂಗೇರಿ, ಗುರುಪ್ರಸಾದ್ ಕೊಲ್ಲಾಜೆಪಳಿಕೆ ಇದ್ದರು.

    ಪಟ್ರಮೆ ಫೀಡರ್ ಓವರ್‌ಲೋಡ್‌ನಿಂದ ಪದೇಪದೆ ಟ್ರಿಪ್ ಆಗುತ್ತಿದ್ದು, ಇದರಿಂದ ಕೊಕ್ಕಡ ಮತ್ತು ಪಟ್ರಮೆ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. 4 ದಿನದ ಹಿಂದೆ ಅಲ್ಲಿಗೆ ತೆರಳಿ ಸಮಸ್ಯೆ ಪರಿಶೀಲಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪಕ್ಕದ ನೆಲ್ಯಾಡಿ ಭಾಗದ ಫೀಡರ್‌ಗಳಿಂದ ಸ್ವಲ್ಪ ವಿದ್ಯುತ್ ಅನ್ನು ಪಟ್ರಮೆ ಭಾಗಕ್ಕೆ ನೀಡುವುದೇ ಪರಿಹಾರವಾಗಿದೆ. ಈ ಬಗ್ಗೆ ಈಗಾಗಲೇ ಮೇಲಧಿಕಾರಿಗಳಿಗೆ ತಿಳಿಸಿದ್ದು, ನೆಲ್ಯಾಡಿ ಭಾಗದ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಮಾತನಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು.
    -ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ,
    ಮೆಸ್ಕಾಂ ಇಲಾಖೆ ಉಜಿರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts