More

    ಪ್ರತಿಪಕ್ಷಕ್ಕೆ ‘ರಾಜಕೀಯ ನಿರುದ್ಯೋಗ’ದ ದಾರಿದ್ರ್ಯ: ‘ಸಂಸದ್ ದನಿ’ ಸಂವಾದದಲ್ಲಿ ತೇಜಸ್ವಿಸೂರ್ಯ ಕುಟುಕು

    ಬೆಂಗಳೂರು: ಕೇಂದ್ರ ಸರ್ಕಾರದ ಅಭಿವೃದ್ಧಿ ಪರವಾದ ಯೋಜನೆಗಳು ದೇಶದ ಯುವಜನರಿಗೆ ಉದ್ಯೋಗದ ಅಭಯ ನೀಡಿದ್ದರೂ, ಅದನ್ನು ಅಲ್ಲಗಳೆಯುತ್ತಿರುವ ಪ್ರತಿಪಕ್ಷಕ್ಕೆ ‘ರಾಜಕೀಯ ನಿರುದ್ಯೋಗ’ದ ದಾರಿದ್ರ್ಯ ಆವರಿಸಿದೆ ಎಂದು ಸಂಸದ ತೇಜಸ್ವಿಸೂರ್ಯ ಹೇಳಿದ್ದಾರೆ.

    ನಗರದ ದಯಾನಂದ ಸಾಗರ್ ಕಾಲೇಜ್‌ನಲ್ಲಿ ‘ಸಂಸದ್ ದನಿ’ ವೇದಿಕೆ ಶನಿವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

    2014ರಿಂದ 2023ರ ಅವಧಿಯಲ್ಲಿ ಭಾರತವು ಹಿಂದೆಂದೂ ಕಾಣದ ಅಭಿವೃದ್ಧಿ ಕಂಡಿದೆ. ಈ ಅವಧಿಯಲ್ಲಿ ತಲಾದಾಯ ದುಪ್ಪಟ್ಟು ಆಗಿದೆ. ಇಪಿಎಫ್​ಒ ಸದಸ್ಯರ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ. ಹೊಸದಾಗಿ 90 ಸಾವಿರ ನವೋದ್ಯಮಗಳು ಹೊಸ ರೂಪದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಮಾತ್ರ ದೇಶದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂದು ಹೇಳುತ್ತಲೇ, ಭಾರತ್ ಜೋಡೋ ಯಾತ್ರೆಯನ್ನು ಪೂರೈಸಿದ್ದು ನಾವು (ಎನ್‌ಡಿಎ ಸರ್ಕಾರ) ನಿರ್ಮಿಸಿದ ರಸ್ತೆಯಲ್ಲೇ ಎಂಬುದನ್ನು ಮರೆತಿದ್ದಾರೆ ಎಂದು ಕಾಲೆಳೆದರು.

    ಕಾಲಮಿತಿಯ ಅಭಿವೃದ್ಧಿ ಸರ್ಕಾರದ ವೇಗದ ನೀತಿ: ದೇಶದಲ್ಲಿ ದಶಕಗಳ ಹಿಂದೆ ಸರ್ಕಾರಿ ಯೋಜನೆಗಳು ಘೋಷಣೆ ಬಳಿಕ ಅನುಷ್ಠಾನ ಕಾರ್ಯ ಆಮೆ ವೇಗದಲ್ಲಿ ಸಾಗುತ್ತಿದ್ದವು. ಪ್ರಸ್ತುತ ಎಲ್ಲ ಅಭಿವೃದ್ಧಿ ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಂಡು ಜನರ ಸೇವೆ ಲಭ್ಯವಾಗುತ್ತಿವೆ. ಇದು ಪ್ರಧಾನಿಯವರ ದೂರದೃಷ್ಟಿ ಹಾಗೂ ಅಭಿವೃದ್ಧಿ ಭಾರತ ಸಾಕಾರಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇಟ್ಟಿರುವ ದೃಢ ಹೆಜ್ಜೆಯಾಗಿದೆ. ಕೆಐಎ 2ನೇ ಟರ್ಮಿನಲ್ 2019ರಲ್ಲಿ ಶಂಕುಸ್ಥಾಪನೆ ಕಂಡು 2023ರಲ್ಲೇ ಮುಕ್ತಾಯ ಕಂಡಿತು. ಎಚ್‌ಎಎಲ್ ಹೆಲಿಕಾಪ್ಟರ್ ಘಟಕ ಕೂಡ ದಾಖಲೆ ಅವಧಿಯಲ್ಲಿ ಪೂರ್ಣಗೊಂಡಿತು ಎಂದರು.

    ಬೆಂಗಳೂರಿನಲ್ಲಿ ಎನ್‌ಆರ್‌ಎಫ್ ಸ್ಥಾಪನೆಗೆ ಮನವಿ: ಭವಿಷ್ಯದಲ್ಲಿ ದೇಶವು 5 ಟ್ರಿಲಿಯನ್ ಮೊತ್ತದ ಆರ್ಥಿಕತೆ ಗುರಿ ತಲುಪಲು ಬೆಂಗಳೂರು ಒಂದರಿಂದಲೇ 1 ಟ್ರಿಲಿಯನ್ ಕೊಡುಗೆ ಸಾಮರ್ಥ್ಯ ಇದೆ. ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ಎನ್‌ಆರ್‌ಎಫ್) ಸ್ಥಾಪನೆಗೆ 2,000 ಕೋಟಿ ರೂ. ನೆರವು ಘೋಷಿಸಲಾಗಿದೆ. ಇಂತಹ ಪ್ರತಿಷ್ಠಿತ ಕೇಂದ್ರವನ್ನು ಬೆಂಗಳೂರಿನಲ್ಲೇ ಸ್ಥಾಪಿಸಬೇಕು ಎಂದು ತೇಜಸ್ವಿಸೂರ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಇದೇ ವೇಳೆ ಲೆಕ್ಕಪರಿಶೋಧಕರಾದ ಗುರುಪ್ರಸಾದ್ ಹಾಗೂ ವಿಜಯರಾಜು ಅವರು ಕೇಂದ್ರ ಬಜೆಟ್ ಕುರಿತು ವಿವರಣೆ ನೀಡಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

    ಪ್ರತಿಪಕ್ಷಕ್ಕೆ ‘ರಾಜಕೀಯ ನಿರುದ್ಯೋಗ’ದ ದಾರಿದ್ರ್ಯ: ‘ಸಂಸದ್ ದನಿ’ ಸಂವಾದದಲ್ಲಿ ತೇಜಸ್ವಿಸೂರ್ಯ ಕುಟುಕು

    ಆರ್ಥಿಕತೆ ವೃದ್ಧಿಯಿಂದ ಭಾರತ ಸದೃಢ: ಪ್ರಸ್ತುತ ದೇಶವು ಪ್ರಗತಿಪಥದಲ್ಲಿ ಸಾಗುತ್ತಿದೆ. ಅಮೆರಿಕ, ಚೀನಾ ದೇಶಗಳಿಗಿಂತ ಹೆಚ್ಚು ಆರ್ಥಿಕ ಸುಭದ್ರತೆಯನ್ನು ಹೊಂದಿದೆ. ಕೋವಿಡ್ ಹಾಗೂ ಇತರ ಕಾರಣದಿಂದ ದಿವಾಳಿ ಅಂಚಿಗೆ ತಲುಪಿಸುವ ಶ್ರೀಲಂಕಾ ಸಹಿತ ಇತರ ರಾಷ್ಟ್ರಗಳಿಗೆ ಸ್ವಯಂ ಮುಂದಾಗಿ ನೆರವು ನೀಡಿದೆ. ಪ್ರಧಾನಿ ಮೋದಿಯವರು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಧೋರಣೆಯನ್ನು ಜನರು ಕೂಡ ಇಷ್ಟ ಪಟ್ಟಿದ್ದಾರೆ. ಹಾಲಿ ಬಜೆಟ್‌ನಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಕೊಡುಗೆ ದೊರೆತಿದೆ ಎಂದು ಸಚಿವ ಆರ್.ಅಶೋಕ್ ಸಮರ್ಥಿಸಿಕೊಂಡರು.

    ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ನಯಾಪೈಸೆ ನೆರವು ಸಿಗುತ್ತಿಲ್ಲ ಎಂಬುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವೃಥಾ ಟೀಕೆ ಮಾಡುತ್ತಿದ್ದಾರೆ. ಪ್ರಕೃತಿ ವಿಕೋಪ ಪರಿಹಾರ ಅಡಿಯಲ್ಲಿ ಯುಪಿಎ ಅವಧಿಯಲ್ಲಿ 3,000 ಕೋಟಿ ರೂ. ಬಿಡುಗಡೆ ಆಗಿದ್ದರೆ, ಎನ್‌ಡಿಎ ಅವಧಿಯಲ್ಲಿ 9,000 ಕೋಟಿ ರೂ. ಬಂದಿದೆ. ರೈತರಿಗೆ ಬೆಳೆ ಪರಿಹಾರ ಬಾಬ್ತಿನಡಿ 15,000 ಕೋಟಿ ರೂ. ನೆರವು ದೊರೆತಿದೆ. ಈ ಮಾಹಿತಿಯನ್ನು ಒಪ್ಪದ ಪ್ರತಿಪಕ್ಷಗಳು ಕೇವಲ ಟೀಕೆಯಲ್ಲೇ ಮುಳುಗಿವೆ ಎಂದು ಸಚಿವ ಅಶೋಕ್ ತಿಳಿಸಿದರು.

    ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನು ಕೊಡುಗೆ ಸಿಕ್ಕಿದೆ ಎಂಬುದನ್ನು ಜನರಿಗೆ ತಿಳಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಸರ್ಕಾರ ಅಭಿವೃದ್ಧಿ ಪಥದಲ್ಲಿ ಸಾಗಿದ್ದು, ಮೂಲಸೌಕರ್ಯ ಯೋಜನೆಗಳು ವೇಗ ಕಂಡುಕೊಳ್ಳುತ್ತಿವೆ. ಮೈಸೂರು ಎಕ್ಸ್‌ಪ್ರೆಸ್ ವೇ ಹಾದುಹೋಗುವ ಜಾಗದಲ್ಲಿ ಒಂದೆಡೆ ಹೆದ್ದಾರಿ ಮತ್ತೊಂದೆಡೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಾಗುತ್ತಿರುವ ದೃಶ್ಯದ ಮುಖ್ಯಮಂತ್ರಿ ಟ್ವೀಟ್‌ಗೆ ಪ್ರಧಾನಿ ಮರುಟ್ವೀಟ್ ಮಾಡಿರುವುದು ಅಭಿವೃದ್ಧಿಯ ಫಲವನ್ನು ಪ್ರತಿಫಲಿಸಿದೆ .
    | ಕೆ.ಎನ್.ಚನ್ನೇಗೌಡ, ವಿಜಯವಾಣಿ ಸಂಪಾದಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts