More

    ಕೈಸೇರದ ರಬ್ಬರ್ ಬೆಂಬಲ ಬೆಲೆ

    -ಪುರುಷೋತ್ತಮ ಪೆರ್ಲ ಕಾಸರಗೋಡು

    ರಬ್ಬರ್ ಧಾರಣೆ ಕುಸಿತದ ಹಾದಿಯಲ್ಲಿರುವ ಸಂದರ್ಭ ಕೇರಳ ಸರ್ಕಾರ ಜಾರಿಗೆ ತಂದಿರುವ ಬೆಂಬಲ ಬೆಲೆ ಯೋಜನೆ ಕೃಷಿಕರ ಪಾಲಿಗೆ ಆಶಾದಾಯಕವಾಗಿ ಕಂಡುಬಂದಿದ್ದರೂ, ಪ್ರಸಕ್ತ ಬೆಂಬಲ ಬೆಲೆ(ರಬ್ಬರ್ ಪ್ರಾಡಕ್ಟ್ ಇನ್ಸೆಂಟಿವ್)ಯ ಮೊತ್ತ ಸಕಾಲದಲ್ಲಿ ಕೈಸೇರದ ಹಿನ್ನೆಲೆಯಲ್ಲಿ ರಬ್ಬರ್ ಕೃಷಿಕರು ಸಂಕಷ್ಟದಲ್ಲಿದ್ದಾರೆ.

    ಬೆಂಬಲ ಬೆಲೆ ಮತ್ತು ಮಾರುಕಟ್ಟೆ ಧಾರಣೆ ನಡುವಿನ ಅಂತರದ ಮೊತ್ತವನ್ನು ಕೃಷಿಕರಿಗೆ ಒದಗಿಸುವುದು ರಬ್ಬರ್ ಪ್ರಾಡಕ್ಟ್ ಇನ್ಸೆಂಟಿವ್ ಯೋಜನೆ ಉದ್ದೇಶ. ಕೇರಳ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ರಬ್ಬರ್ ಬೆಂಬಲ ಬೆಲೆಯ ಮೊತ್ತವನ್ನು ಕಿಲೋ ಒಂದಕ್ಕೆ 10 ರೂ. ಏರಿಕೆ ಮಾಡಿ, 180 ರೂ. ನಿಗದಿಪಡಿಸಿದ್ದರೂ ಈ ಮೊತ್ತ ಇನ್ನೂ ಜಾರಿಯಾಗಿಲ್ಲ. ಪ್ರಸಕ್ತ 170 ರೂ. ಬೆಂಬಲ ಬೆಲೆ ಜಾರಿಯಲ್ಲಿದ್ದು, ಮಾರುಕಟ್ಟೆ ಧಾರಣೆ 161ರಿಂದ 165ರಷ್ಟಿದೆ. ಬೆಂಬಲ ಬೆಲೆ ಯೋಜನೆಯನ್ವಯ 170 ರೂ.ಗೆ ಹೊಂದಿಸಿ ಬಾಕಿ ಮೊತ್ತ ಕೃಷಿಕರ ಖಾತೆಗೆ ನೀಡಲಾಗುತ್ತದೆ. ಇದಕ್ಕೆ ರಬ್ಬರ್ ಸೊಸೈಟಿಯಿಂದ ಸೂಕ್ತ ರಶೀದಿ ಪಡೆದು, ಅವೆಲ್ಲವನ್ನೂ ರಬ್ಬರ್ ಬೋರ್ಡ್‌ಗೆ ಸಲ್ಲಿಸಬೇಕು.

    ಹೆಚ್ಚುತ್ತಿರುವ ಟ್ಯಾಪಿಂಗ್ ವೆಚ್ಚ

    ಒಂದು ಮರ ಟ್ಯಾಪಿಂಗ್ ನಡೆಸಿ ಹಾಲು ಸಂಗ್ರಹಿಸಲು 3 ರೂ. ಕೂಲಿ ನೀಡಬೇಕು. ಇದರ ಹೊರತಾಗಿ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್, ಶೀಟ್ ತಯಾರಿ, ಗೊಬ್ಬರ ಸೇರಿದಂತೆ ಮರಗಳ ನಿರ್ವಹಣೆಗೆ ಖರ್ಚು ತಗಲುತ್ತದೆ. ಕನಿಷ್ಠ 100 ಮರ ಟ್ಯಾಪಿಂಗ್ ನಡೆಸಿದರೆ, 300 ರೂ. ಟ್ಯಾಪಿಂಗ್ ಕೂಲಿ ನೀಡಬೇಕು. ಈ ಮರಗಳಿಂದ ಗರಿಷ್ಠ 6-7 ಕಿ.ಗ್ರಾಂ ರಬ್ಬರ್ ಶೀಟ್ ಲಭಿಸುತ್ತದೆ. 100 ಮರದಿಂದ 10 ಕೆ.ಜಿ ರಬ್ಬರ್ ಹಾಳೆ ಲಭಿಸಬೇಕು. ಆದರೆ ಗರಿಷ್ಠ ಹಾಲು ಲಭ್ಯವಾಗುವ ಕಾಲಾವಧಿಯಲ್ಲಷ್ಟೇ 7 ಕೆ.ಜಿ. ರಬ್ಬರ್ ಶೀಟ್ ಲಭಿಸುತ್ತದೆ. ಈ ಹಾದಿಯಲ್ಲಿ ಮುಂದುವರಿದರೆ, ರಬ್ಬರ್ ಟ್ಯಾಪಿಂಗ್ ನಡೆಸುವವರಿಗೆ ಹಣ ಬೇರೆಲ್ಲಿಂದಲೋ ತಂದುಕೊಡಬೇಕಾದ ಸ್ಥಿತಿಯಿದೆ ಎಂದು ರಬ್ಬರ್ ಕೃಷಿಕರು ಅಳಲು ವ್ಯಕ್ತಪಡಿಸುತ್ತಾರೆ.

    ಸಾಲುತ್ತಿಲ್ಲ ಬೆಂಬಲ ಬೆಲೆ

    ಪ್ರಸ್ತುತ ಬೆಂಬಲ ಬೆಲೆ 180ರಿಂದ 250 ರೂ. ಲಭಿಸಿದರೂ ಕಡಿಮೆಯೇ. ಈ ಹಿಂದೆ ನೀಡಲು ಬಾಕಿಯಿರುವ ಬೆಂಬಲ ಬೆಲೆಯೂ ಕೆಲವು ಕೃಷಿಕರಿಗೆ ಇನ್ನೂ ಲಭಿಸಿಲ್ಲ. ಬೆಂಬಲ ಬೆಲೆ ಮೊತ್ತದ ಬಿಲ್ ಕಂಪ್ಯೂಟರ್ ಮೂಲಕ ಅಪ್ಲೋಡ್ ಮಾಡಿದರೆ, ಅದನ್ನು ಸ್ವೀಕರಿಸದ ಸ್ಥಿತಿಯಿದೆ. ಇದರಿಂದ ಬೆಂಬಲ ಬೆಲೆ ಯೋಜನೆ ಕೃಷಿಕರ ಪಾಲಿಗೆ ಅಷ್ಟೊಂದು ಆಶಾದಾಯಕವಾಗಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.

    ರಬ್ಬರ್ ಬೋರ್ಡ್ ಅಧಿಕಾರಿಗಳ ಪ್ರಕಾರ, ವೆಬ್‌ಸೈಟ್ ನಿರ್ವಹಿಸುತ್ತಿರುವ ನ್ಯಾಶನಲ್ ಇನ್ಫಾರ್ಮೇಟಿಕ್ ಸೆಂಟರ್‌ನ ತಕರಾರಿನಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ ಎನ್ನುತ್ತಾರೆ. ದಶಕದ ಹಿಂದೆ ಕಿಲೋ ಒಂದಕ್ಕೆ 240ರಿಂದ 260 ರೂ.ವರೆಗೆ ರಬ್ಬರ್ ಧಾರಣೆಯಿದ್ದರೆ, ಈಗ ಆ ಮೊತ್ತ 160ರಿಂದ 170 ರೂ.ಗೆ ಕುಸಿದಿದೆ.

    ಆದಾಯಕ್ಕೆ ಕುತ್ತು

    ಸರ್ಕಾರ ಬೆಂಬಲ ಬೆಲೆಯನ್ನು ಕನಿಷ್ಠ 200 ರೂ. ಆಗಿ ನಿಗದಿಪಡಿಸಬೇಕು ಎಂದು ರಬ್ಬರ್ ಕೃಷಿಕರು ಆಗ್ರಹಿಸಿದ್ದಾರೆ. ರಬ್ಬರ್ ಶೀಟ್ ತಯಾರಿಸಲು ತಗಲುವ ವೆಚ್ಚ ಹಾಗೂ ಶ್ರಮ ಗಮನದಲ್ಲಿರಿಸಿ ಕೆಲವು ಕೃಷಿಕರು ಶೀಟ್ ತಯಾರಿಸುವುದನ್ನು ಕೈಬಿಟ್ಟು, ಗೆರಟೆಯಲ್ಲಿ ರಬ್ಬರ್ ಹಾಲನ್ನು ಒಣಗಿಸಿ ಬಾಲ್‌ಗಳನ್ನಾಗಿಸಿ ನೀಡುತ್ತಿದ್ದಾರೆ. ರಬ್ಬರ್‌ಶೀಟ್‌ಗಿಂತ ಇದರ ಬೆಲೆ ಅರ್ಧಕ್ಕೂ ಕಡಿಮೆಯಿದ್ದು, ಆದಾಯಕ್ಕೂ ಕುತ್ತುಂಟಾಗುತ್ತಿದೆ.

    ರಬ್ಬರ್ ಪ್ರಾಡಕ್ಟ್ ಇನ್ಸೆಂಟಿವ್ 50 ರೂ. ಘೋಷಿಸಿದರೂ ಸಕಾಲದಲ್ಲಿ ಲಭ್ಯವಾಗದಿದ್ದಲ್ಲಿ, ಯೋಜನೆ ಪ್ರಯೋಜನಕ್ಕೆ ಬಾರದು. ಕೇರಳ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರೂ, ಈ ಮೊತ್ತ ಸಕಾಲಿಕವಾಗಿ ಕೃಷಿಕರ ಕೈಗೆ ಲಭಿಸದೆ ಕೆಲವು ತಿಂಗಳವರೆಗಿನ ಮೊತ್ತ ಲಭಿಸಲು ಬಾಕಿಯಿದೆ.
    -ಸುಮೇಶ್, ರಬ್ಬರ್ ಕೃಷಿಕ

    ರಬ್ಬರ್ ಬೆಂಬಲ ಬೆಲೆಯ ಮೊತ್ತ ಮಂಜೂರುಗೊಳಿಸುವಲ್ಲಿ ಬೋರ್ಡ್‌ಗೆ ಯಾವುದೇ ಅಧಿಕಾರವಿಲ್ಲ. ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗೆ ಅನುಸಾರವಾಗಿ ಕೃಷಿಕರು ನೀಡುವ ಬಿಲ್‌ಗಳನ್ನು ಕ್ರೋಡೀಕರಿಸಿ ಆನ್‌ಲೈನ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ರಬ್ಬರ್ ಬೆಂಬಲ ಬೆಲೆ ಬಜೆಟ್‌ನಲ್ಲಿ ಹೆಚ್ಚಿಸಲಾಗಿರುವ 10 ರೂ. ಮೊತ್ತ ಇನ್ನಷ್ಟೇ ಜಾರಿಗೆ ಬರಬೇಕಾಗಿದೆ.
    -ಪವಿತ್ರನ್ ನಂಬಿಯಾರ್, ಕ್ಷೇತ್ರಾಧಿಕಾರಿ,
    ರಬ್ಬರ್ ಬೋರ್ಡ್, ಕಾಸರಗೋಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts