More

    400 ವರ್ಷಗಳ ಬಳಿಕ ದೈವ ನೇಮ: ಕಟೀಲು ಕೊಂಡೇಲದಲ್ಲಿ ಶಿಲಾಮೂರ್ತಿ ಪತ್ತೆ

    ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

    ದೈವಶಕ್ತಿಗಳನ್ನು ನಂಬುವ ದೈವಭಕ್ತರ ಅತಿ ಕುತೂಹಲಕ್ಕೆ ಗ್ರಾಸವಾದ ಅಪೂರ್ವ ಸಂದರ್ಭವೊಂದು ನಾಲ್ಕು ಶತಮಾನಗಳ ಬಳಿಕ ಅಂದರೆ ಬರೋಬ್ಬರಿ 400 ವರ್ಷಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಕಟೀಲು-ಕೊಂಡೇಲ ಎಂಬಲ್ಲಿ ಸಾಕ್ಷಾತ್ಕಾರಗೊಳ್ಳಲಿದೆ.

    ಕಾರಣಿಕದ ಶ್ರೀ ಕೊಂಡೇಲ್ತಾಯ ದೈವದ ನೇಮ ಕಂಡು ಕಣ್ತುಂಬಿಸಿಕೊಳ್ಳುವ ಕುತೂಹಲ ವಿಶ್ವದೆಲ್ಲೆಡೆಯ ತುಳುವ ದೈವಭಕ್ತರಲ್ಲಿದೆ.
    ಶ್ರೀ ಕೊಂಡೇಲ್ತಾಯ ದೈವದ ಅಸ್ತಿತ್ವದ ಹಿನ್ನೆಲೆಯ ಪುರಾವೆ ಮನುಷ್ಯರೂಪದ ಶಿಲಾಮೂರ್ತಿಯೊಂದು ದೈವಸ್ಥಾನದ ಬಗೆಗಿನ ದೈವಜ್ಞರಿಂದ ನಡೆಸಲಾದ ಪ್ರಶ್ನಾಚಿಂತನೆಯ ಬಳಿಕ ಜೀರ್ಣೋದ್ದಾರದ ವೇಳೆ ಪತ್ತೆಯಾಗಿದೆ.

    ಸಮೀಪದ ಕೊಡೆತ್ತೂರು ಕುಂಜರಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವದ ವೇಳೆ ಈಗಲೂ ಕಟ್ಟುಕಟ್ಟಳೆಯ (ಸಾಂಕೇತಿಕ) ಕೊಂಡೇಲ್ತಾಯ ದೈವದ ನೇಮ ಜರುಗುತ್ತಿದೆ.

    ಪೂರ್ಣಪ್ರಮಾಣದಲ್ಲಿ ಶ್ರೀ ಕೊಂಡೇಲ್ತಾಯ ದೈವದ ನೇಮ ಕಂಡವರಾಗಲಿ ಯಾವುದೇ ಸಾಕ್ಷಿಗಳಾಗಲಿ ಇಲ್ಲವಾದರೂ ಕುಂಜರಾಯ ಕ್ಷೇತ್ರಕ್ಕೆ ಶ್ರೀ ಕೊಂಡೇಲ ದೈವಸ್ಥಾನದಿಂದಲೇ ಕೊಂಡೇಲ್ತಾಯ ದೈವದ ಭಂಡಾರ ಹೋಗಿ ನೇಮ ನಡೆಯಬೇಕೆಂಬ ಕಟ್ಟಳೆ ಮುಂಬರುವ ವರ್ಷಗಳಲ್ಲಿ ಸಾಕಾರವಾಗಲಿದೆ.

    90 ದಿನಗಳಲ್ಲಿ ಜೀರ್ಣೋದ್ಧಾರ ಸಾಕಾರ

    ಸುಮಾರು 100 ವರ್ಷಗಳಿಂದ ಸ್ಥಳೀಯ ಹಿರಿಯರಾದ ವಾಮಯ್ಯ ಶೆಟ್ಟಿ ಎಂಬುವರು ದೇವಸ್ಥಾನಕ್ಕೆ ಸಂಬಂಧಿಸಿ ಧಾರ್ಮಿಕ ಪ್ರಕ್ರಿಯೆಗಳ ನೇತೃತ್ವ ವಹಿಸಿದ್ದು ನಂತರದಲ್ಲಿ ಗ್ರಾಮಸ್ಥರನ್ನು ಸೇರಿಸಿಕೊಂಡು ದೊಡ್ಡಯ್ಯ ಶೆಟ್ಟಿ ಚೌತಿಹಬ್ಬ, ಸಂಕ್ರಮಣ ಮುಂತಾದ ಪರ್ವಗಳನ್ನು ನಡೆಸಿಕೊಂಡು ಬಂದಿದ್ದು ಪ್ರಸ್ತುತ ಕಳೆದ ಏಳು ವರ್ಷಗಳಿಂದ ಲೋಕಯ್ಯ ಸಾಲ್ಯಾನ್ ಕೊಂಡೇಲ ಆಡಳಿತ ಸಮಿತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮಸ್ಥರ ಊರಪರವೂರ ಭಕ್ತರ ಸಹಕಾರದೊಂದಿಗೆ ಪ್ರಸ್ತುತ 2023 ನ.19ರಂದು ಜೀರ್ಣೋದ್ಧಾರ ಸಂಕಲ್ಪದೊಂದಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಸರಿಯಾಗಿ 90 ದಿನಗಳಲ್ಲಿ ಶ್ರೀ ಕೊಂಡೆಲ್ತಾಯ, ಶ್ರೀ ರಕ್ತೇಶ್ವರಿ, ಶ್ರೀಪಂಜುರ್ಲಿ ದೈವಗಳ ದೇವಸ್ಥಾನಗಳು ನವನಿರ್ಮಾಣಗೊಂಡು ಫೆ.19ರಿಂದ ಧಾರ್ಮಿಕ ಸಾಂಪ್ರದಾಯಿಕ ವಿಧಿಗಳೊಂದಿಗೆ ಪ್ರತಿಷ್ಠಾಪನೆ, ಕಲಶಾಭಿಷೇಕ ನಡೆದು ಫೆ.21ರಂದು ದೈವಗಳ ನೇಮೋತ್ಸವ ಸಂಪನ್ನಗೊಳ್ಳಲಿದೆ.

    ಮಾನವರೂಪದ ಕಲ್ಲು – ಸಿರಿಗೋಳಿ ಮರ ವಿಶೇಷ

    ಕೊಂಡೇಲ್ತಾಯ ದೈವ ಲೀನವಾಗಿರುವ ಐತಿಹ್ಯವುಳ್ಳ ಮಾನವರೂಪದ ಶಿಲೆ ಹಾಗೂ ವಿಶೇಷ ಗುಣವುಳ್ಳ ಸಿರಿಗೋಳಿ ಮರ ಇವೆರಡೂ ದೈವದ ಗುಡಿಯ ಅಕ್ಕಪಕ್ಕದಲ್ಲಿಯೇ ಇದ್ದು ಕ್ಷೇತ್ರಕ್ಕೆ ಆಗಮಿಸುವ ಕ್ತರಿಗೆ ಕತೆ ಹೇಳುವ ಸಾಕ್ಷಿಗಳಾಗಿ ಗೋಚರಿಸುತ್ತಿದೆ. ಇಲ್ಲಿಯ ಗದ್ದೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಾಗೆಲ್ಲ ಸಂಬಂಧಪಟ್ಟ ಎಲ್ಲ ಸ್ಥಳಗಳಲ್ಲಿ ನಾಗರಹಾವು ಬಂದು ಎಚ್ಚರಿಸುತ್ತದೆ ಎಂಬುದು ಈಗಲೂ ಇಲ್ಲಿನ ಹಿರಿಯರು ನಂಬುತ್ತಾರೆ. ಅಷ್ಟೇ ಅಲ್ಲದೆ ಇದೇ ಸಿರಿಗೋಳಿ ಮರದ ಎಲೆಯಲ್ಲಿ ಗಂಧಪ್ರಸಾದ ಪಡೆದವನ ಕಷ್ಟಕಾರ್ಪಣ್ಯ ಪರಿಹಾರವಾಗುತ್ತವೆ ಎಂಬ ಪ್ರತೀತಿಯೂ ಇದೆ.

    ಊರ ಪರವೂರ ದಾನಿಗಳ ಸಹಕಾರದಿಂದ ದೈವಸ್ಥಾನದ ಕೆಲಸ ಕಾರ್ಯಗಳು ಮುಕ್ತಾಯದ ಹಂತದಲ್ಲಿದ್ದು, ಕೊಂಡೇಲ್ತಾಯ ಸಹಿತ ದೈವಗಳ ಮುಗ ಮೂರ್ತಿ ಭಂಡಾರ ಸಾಹಿತ್ಯ ಪರಿಕರ ಎಲ್ಲವನ್ನು ಹೊಸದಾಗಿ ಸಿದ್ಧಪಡಿಸಲಾಗುತ್ತಿದೆ.

    -ಲೋಕಯ್ಯ ಸಾಲ್ಯಾನ್
    ಅಧ್ಯಕ್ಷರು ಆಡಳಿತ ಸಮಿತಿ, ಶ್ರೀ ಕೊಂಡೇಲ್ತಾಯ ದೈವಸ್ಥಾನ, ಕೊಂಡೇಲ-ಕಟೀಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts