More

    ಕರ್ನಾಟಕ ಕಂಡ ದುರ್ಬಲ ಸಿಎಂ ಸಿದ್ದರಾಮಯ್ಯ; ಆರ್.ಅಶೋಕ್ ಲೇವಡಿ

    ಬೆಂಗಳೂರು: ಶಿವಮೊಗ್ಗದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆಡಿದ ಮಾತುಗಳು ಕರ್ನಾಟಕ ಚುನಾವಣಾ ರಾಜಕಾರಣದಲ್ಲಿ ಅನುರಣಿಸುತ್ತಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ವಾಕ್ಸಮರ, ಉಭಯ ಪಕ್ಷಗಳು ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳಲ್ಲಿ ಏಟು-ಎದಿರೇಟು ನೀಡುವ ಸಂದೇಶಗಳ ಸರಣಿ ಮುಂದುವರಿದಿದೆ. ಈ ಸಾಲಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಬುಧವಾರ ಸೇರಿಕೊಂಡಿದ್ದಾರೆ.

    ಮೋದಿಯವರು ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಿ, ಕರ್ನಾಟಕದಲ್ಲಿ ಭವಿಷ್ಯದ ಸಿಎಂ, ಸೂಪರ್ ಸಿಎಂ, ಛಾಯಾ ಸಿಎಂ ಇದ್ದಾರೆ ಎಂದು ಕುಟುಕಿದ್ದರು. ಪ್ರತಿಯಾಗಿ ಸಿಎಂ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ಬಂಡಾಯ ಸಾರಿರುವ ಸ್ವಪಕ್ಷದ ಕೆ.ಎಸ್.ಈಶ್ವರಪ್ಪ ವಿರುದ್ಧ ಕೈಗೊಳ್ಳಲಾಗದಷ್ಟು ದುರ್ಬಲ ಪಿಎಂ ಎಂದಿದ್ದರು. ಇದಕ್ಕೆ ಆರ್‌.ಅಶೋಕ್ ತಿರುಗೇಟು ನೀಡಿ, ಕರ್ನಾಟಕ ಕಂಡ ಅತ್ಯಂತ ಅಸಹಾಯಕ, ದುರ್ಬಲ ಸಿಎಂ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಆರ್.ಅಶೋಕ್ ಅವರು ಈ ಕುರಿತು ಸರಣಿ ಸಂದೇಶ ಹಂಚಿಕೊಂಡಿದ್ದಾರೆ. ಬಿ.ಕೆ.ಹರಿಪ್ರಸಾದ್ ಅವರು ತಮ್ಮ ಮೇಲೆ ಪದೇ ಪದೇ ವಾಗ್ದಾಳಿ ನಡೆಸಿದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗದಷ್ಟು, ಕನಿಷ್ಠ ಪಕ್ಷ ಪ್ರತ್ಯುತ್ತರ ಕೂಡ ನೀಡಲಾಗದಷ್ಟು ಅಸಹಾಯಕರು ಸಿದ್ದರಾಮಯ್ಯ ಎಂದು ಕಿಚಾಯಿಸಿದ್ದಾರೆ.

    ಬಂಡಾಯ ಬಾವುಟ

    ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಣ ಅವಕಾಶ ಸಿಕ್ಕಾಗಲೆಲ್ಲಾ ಬಂಡಾಯದ ಬಾವುಟ ಹಾರಿಸಿ ತಮ್ಮ ಕುರ್ಚಿಯ ಎಕ್ಸ್ ಪೈರಿ ಡೇಟ್ ಮುಗಿಯುತ್ತದೆ ಎಂದು ಕಾಲೆಳೆಯುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಸಿದ್ದರಾಮಯ್ಯನವರದಾಗಿದೆ.

    ಪ್ರಧಾನಿ ಮೋದಿ ಅವರೇ ಮತ್ತೊಮ್ಮೆ ಮುಂದಿನ ಐದು ವರ್ಷ ಈ ದೇಶದ ಸ್ಟ್ರಾಂಗ್ ಪ್ರಧಾನಿ ಆಗಿ ಮುಂದುವರೆಯುತ್ತಾರೆ ಎಂದು ವಿಶ್ವಾಸದಿಂದ ಹೇಳುವ ಧೈರ್ಯ ನನಗಿದೆ.  ನಿಮಗೆ ತಾಕತ್ತಿದ್ದರೆ, ನೀವು ಹೇಳಿಕೊಳ್ಳುವಂತೆ ತಾವು ಸ್ಟ್ರಾಂಗ್ ಮುಖ್ಯಮಂತ್ರಿಯೇ ಆಗಿದ್ದರೆ, “ನಾನೇ ಐದು ವರ್ಷ ಮುಖ್ಯಮಂತ್ರಿ” ಎಂದು ಒಮ್ಮೆ ಹೇಳಿ ನೋಡೋಣ ಎಂದು ಆರ್‌.ಅಶೋಕ್ ಕೆಣಕಿದ್ದಾರೆ.

    ನಿಮಗೆ ಖಂಡಿತ ಹೇಳಲು ಆಗಲ್ಲ. ಅದಕ್ಕೆ ತಮ್ಮನ್ನು ಈ ರಾಜ್ಯ ಕಂಡ ಅತ್ಯಂತ ವೀಕ್ ಮುಖ್ಯಮಂತ್ರಿ ಎಂದು ಜನ ಮಾತಾಡಿಕೊಳ್ಳುವುದು ಎಂದು ಸಿದ್ದರಾಮಯ್ಯ ಅವರನ್ನು ಆರ್.ಅಶೋಕ್ ತಿವಿದಿದ್ದರೆ, ಬಹಿರಂಗ ಪತ್ರ ಬರೆದ ಶಾಸಕರ ವಿರುದ್ದ ಕ್ರಮಕೈಗೊಳ್ಳಲು ಸಿದ್ದರಾಮಯ್ಯಗೆ ಸಾಧ್ಯವಾಗಲಿಲ್ಲ. ಸ್ಟ್ರಾಂಗ್ ಸಿಎಂ ಎಂದಿರುವುದು ಸ್ವಕುಚಮರ್ಧನವೆಂದು ರಾಜ್ಯ ಬಿಜೆಪಿ ಅಣಕವಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts