–ಪ್ರವೀಣ್‌ರಾಜ್ ಕೊಲ ಕಡಬ
ಕಡಬ, ಸುಳ್ಯ ತಾಲೂಕಿನಲ್ಲಿ ಫಸಲುಭರಿತ ತೆಂಗಿನಮರದ ಗರಿಗಳು ಒಣಗಿ ಮರಗಳು ಸಾಯುತ್ತಿದ್ದು, ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಮರಗಳಿಗೆ ಗಾಳಿಯಿಂದ ಹಬ್ಬುವ ಸುಳಿ ಕೊಳೆರೋಗ ಬಾಧಿಸುತ್ತಿರುವ ಶಂಕೆ ವ್ಯಕ್ತವಾಗಿದೆ.
ಈಗಾಗಲೇ ಹಲವು ಮರಗಳು ಈ ರೀತಿಯಾಗಿ ಸತ್ತಿದೆ. ನಿಯಂತ್ರಣಕ್ಕೆ ಪ್ರಯತ್ನಿಸಿರೂ ಅದಾಗಲೇ ರೋಗ ಮರಗಳನ್ನು ಆವರಿಸಿದ್ದರಿಂದ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಎಷ್ಟೋ ವರ್ಷಗಳಿಂದ ಬೆಳೆಸಿದ ಫಸಲುಭರಿತ ಮರಗಳು ಈ ರೀತಿಯಾಗಿ ಸಾಯುತ್ತಿರುವುದು ಕೃಷಿಕರಲ್ಲಿ ಆತಂಕ ಸೃಷ್ಟಿಸಿದೆ. ನಿಯಂತ್ರಣ ಕೃಷಿಕರಿಗೆ ಸವಾಲಾಗಿದ್ದು, ಎಷ್ಟೇ ಎಚ್ಚರ ವಹಿಸಿದರೂ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕೃಷಿಕರು.
ಹೇಗಿದೆ ರೋಗ ಲಕ್ಷಣ?
ಸಮೃದ್ಧವಾಗಿ ಬೆಳೆದು ಫಸಲು ನೀಡುತ್ತಿರುವ ಸುಮಾರು 10-20 ವರ್ಷ ಮೇಲ್ಪಟ್ಟ ತೆಂಗಿನಮರಗಳಲ್ಲೂ ಈ ರೀತಿ ರೋಗ ಬಾಧೆ ಕಾಣಿಸಿಕೊಂಡಿದೆ. ತೆಂಗಿನಮರದ ಸಿರಿ(ಚಿಗುರು) ಒಣಗಿ, ಹೊಸ ಚಿಗುರು ಬರುವುದು ನಿಲ್ಲುತ್ತದೆ. ಬಳಿಕ ಎಳೆಕಾಯಿಗಳು ಉದುರಲು ಆರಂಭವಾಗುತ್ತದೆ. ಬಲಿತಕಾಯಿಗಳು ಬೆಳವಣಿಗೆ ಕಾಣದೆ ಒಣಗುತ್ತವೆ. ಮೇಲ್ನೋಟಕ್ಕೆ ಈ ರೀತಿಯ ರೋಗ ಬಾಧಿಸಿರುವುದು ಒಮ್ಮೆಲೇ ಗಮನಕ್ಕೆ ಬರುವುದಿಲ್ಲ.
ಈ ಹಿಂದೆ ಕಾಣಿಸಿಕೊಂಡಿತ್ತು
ಮರಗಳು ಸಾಯುತ್ತಿರುವ ಲಕ್ಷಣಗಳನ್ನು ಗಮನಿಸಿದರೆ, ಮೇಲ್ನೋಟಕ್ಕೆ ಇದು ಸುಳಿ ಕೊಳೆರೋಗ ಆಗಿರಬಹುದು. ಗಾಳಿಯಿಂದ ಇದು ಹಬ್ಬುತ್ತದೆ. ತೆಂಗಿನಮರ ಹತ್ತಿ ಅಲ್ಲಿನ ಭಾಗವನ್ನು ತೆಗೆದು ಪರಿಶೀಲಿಸಿದರೆ ಸ್ಪಷ್ಟತೆ ಸಿಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ಹೆಚ್ಚಾದ ಸಂದರ್ಭ ಈ ಸುಳಿ ಕೊಳೆರೋಗ ತೆಂಗಿಗೆ ಬಾಧಿಸುತ್ತದೆ. ಕೆಲವರ್ಷದ ಹಿಂದೆ ದಕ್ಷಿಣ ಕನ್ನಡ ಹಾಗೂ ರಾಜ್ಯದ ಕೆಲವೆಡೆ ಇದು ಕಾಣಿಸಿಕೊಂಡಿತ್ತು. ಇದರ ಜತೆಗೆ ಹುಳ(ಕೀಟ) ಬಾಧೆಯಿಂದಲೂ ಈ ರೀತಿ ಆಗುವ ಸಂಭವವಿರುತ್ತದೆ. ಹುಳ ಬಾಧೆ ತೆಂಗುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದು, ಇದನ್ನು ಕೃಷಿಕರೇ ಎಚ್ಚರ ವಹಿಸಿ ನಿಯಂತ್ರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ನಿಯಂತ್ರಣ ಸಾಧ್ಯ
ಪ್ರಸ್ತುತ ಕಾಣಿಸಿಕೊಂಡಿರುವುದು ಸುಳಿಕೊಳೆ ರೋಗ ಎಂದಾದರೆ ನಿಯಂತ್ರಣ ಸಾಧ್ಯವಿದೆ. ಸಾಮಾನ್ಯವಾಗಿ ಈ ರೋಗ ಜುಲೈ-ಡಿಸೆಂಬರ್‌ನಲ್ಲಿ ಅಧಿಕವಾಗಿರುತ್ತದೆ. ಈ ರೋಗ ನಡುಸುಳಿಯ ಬುಡ ಮತ್ತು ಒಳಸುಳಿಯಲ್ಲಿನ ಎಳೆಯ ಬುಡದಲ್ಲಿ ಕಾಣಿಸಿಕೊಳ್ಳುತ್ತದೆ. ಹೊಸದಾಗಿ ಚಿಗುರು ಬರುತ್ತಿರುವ ಗರಿಯು ಬಾಡಿ ಬಾಗಿರುವುದನ್ನು ದೂರದಿಂದಲೇ ಗುರುತಿಸಬಹುದು. ಎರಡನೇ ಹಂತವಾಗಿ ತುದಿ ಗರಿಯು ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಸಂದರ್ಭದಲ್ಲಿ ಗರಿಗಳೂ ಕೊಳೆಯುತ್ತವೆ. ರೋಗ ತೀವ್ರಗೊಂಡಲ್ಲಿ ಗಿಡ ಸಂಪೂರ್ಣವಾಗಿ ಒಣಗುವ ಸಂಭವವಿರುತ್ತದೆ. ಪರಿಶೀಲಿಸಿ ಔಷಧ ಸಿಂಪಡಣೆ, ಬೇವಿನಹಿಂಡಿ ಹಾಕಬೇಕು. ಈ ರೀತಿ ರೋಗ ಬಾಧಿಸಿರುವ ತೆಂಗುಗಳಿಂದ ಅಕ್ಕಪಕ್ಕದ ಇತರ ತೆಂಗುಗಳಿಗೂ ಹಬ್ಬುವ ಸಾಧ್ಯತೆ ಇರುವುದರಿಂದ ಅಕ್ಕಪಕ್ಕದ ತೆಂಗುಗಳಿಗೆ ಪೂರಕ ಔಷಧ, ಮುಂಜಾಗ್ರತೆ ವಹಿಸಬೇಕು. ತೆಂಗಿನ ಕೊಳೆತ ಸಿರಿಗಳನ್ನು ತೆಗೆದು ಅಲ್ಲಿಗೆ ಬೋರ್ಡ್ ಪೇಸ್ಟ್ ಹಚ್ಚಬೇಕು. ಚಿಗುರಿಗೆ ಯಾವುದೇ ತೊಂದರೆ ಮಾಡದಂತೆ ಎಚ್ಚರ ವಹಿಸಿದಲ್ಲಿ ತೆಂಗನ್ನು ಬದುಕಿಬಹುದು ಎನ್ನುತ್ತಾರೆ ಸಿಪಿಸಿಆರ್‌ಐ ಅಧಿಕಾರಿಗಳು.
ಕೀಟ ಬಾಧೆೆ, ಸುಳಿ ಕೊಳೆರೋಗದಿಂದ ತೆಂಗುಗಳು ಸಾಯುತ್ತವೆ. ಕೀಟಬಾಧೆ ಸಾಮಾನ್ಯ ರೋಗವಾಗಿದ್ದು, ಕೃಷಿಕರು ಎಚ್ಚರ ವಹಿಸಿದಲ್ಲಿ ನಿಯಂತ್ರಣ ಸಾಧ್ಯ. ರೋಗ ಬಾಧಿಸಿದ ಮರಗಳಿಂದ ಇತರೆ ಮರಗಳಿಗೆ ಹರಡದಂತೆ ಮುನ್ನೆಚ್ಚರಿಗೆ ವಹಿಸುವುದು ಅಗತ್ಯ.
-ದಿವಾಕರ್, ವಿಜ್ಞಾನಿ, ಸಿಪಿಸಿಆರ್‌ಐ ಕಿದು ನೆಟ್ಟಣ
ತೆಂಗಿನಗಿಡದ ಗರಿಗಳು ಒಣಗಿ ಕೊನೆಗೆ ಗಿಡ ಸಾಯುವ ಅಪರೂಪದ ರೋಗ ಬಾಧಿಸುತ್ತಿದೆ. ಇದರಿಂದ ರೈತರು ತೆಂಗಿನ ಕೃಷಿಯಿಂದ ವಿಮುಖರಾಗುವ ಸಾಧ್ಯತೆಯಿದೆ. ಆರಂಭದಲ್ಲಿ ರೋಗ ಲಕ್ಷಣ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ, ಗಿಡಕ್ಕೆ ರೋಗ ಸಂಪೂರ್ಣ ಆವರಿಸಿಕೊಂಡ ಬಳಿಕ ಅರಿವಿಗೆ ಬರುತ್ತದೆ. ಸಂಬಂಧಪಟ್ಟವರು ತಕ್ಷಣ ಈ ರೋಗ ತಡೆಗೆ ಕ್ರಮ ವಹಿಸಬೇಕು.
-ಹುಕ್ರ ಅಜಿಲ ಕಲ್ನಾರು , ನೂಜಿಬಾಳ್ತಿಲ