More

    ಹೆರ್ಗ ಬಡವರ ‘ಸ್ವರ್ಗ’ದಲ್ಲಿ ಸೌಲಭ್ಯವಿಲ್ಲವೆಂದು ಫಲಾನುಭವಿಗಳ ದೂರು

    ಪ್ರಶಾಂತ ಭಾಗ್ವತ ಉಡುಪಿ
    ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸರ್ವರಿಗೂ ಸೂರು ಅಭಿಯಾನದಡಿ ರಾಜ್ಯಾದ್ಯಂತ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 1,80,253 ಮನೆಗಳನ್ನು ಸಮುಚ್ಚಯ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಪೈಕಿ 36,789 ಮನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.2ರಂದು ವರ್ಚುಯಲ್ ಮೂಲಕ ಉದ್ಘಾಟಿಸಿದ್ದಾರೆ.

    ಉಡುಪಿ ಜಿಲ್ಲೆಯಲ್ಲೂ 24 ಮನೆಗಳಿರುವ 10 ಸಮುಚ್ಚಯವನ್ನು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಹಸ್ತಾಂತರಿಸಿದ್ದಾರೆ. ಜೀವನಕ್ಕೆ ಆಸರೆಯಾಗಿ ಸೂರು ಲಭಿಸಿದ್ದೇನೋ ನಿಜ. ಆದರೆ, ಸಮುಚ್ಚಯದಲ್ಲಿ ಸೌಲಭ್ಯಗಳೇ ಇಲ್ಲದಿದ್ದರೆ ಹೇಗೆ ಎಂಬ ದೂರು ಜಿಲ್ಲಾಡಳಿತದ ಕದ ತಟ್ಟಿದೆ.

    240 ಮನೆಗಳು

    ಉಡುಪಿ ನಗರಸಭೆ ವ್ಯಾಪ್ತಿಯ ಸರಳಬೆಟ್ಟು ವಾರ್ಡ್‌ನ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್‌ನ 8.22 ಎಕರೆ ಪ್ರದೇಶದಲ್ಲಿ 240 ಮನೆಯಿರುವ ಸಮುಚ್ಚಯ ನಿರ್ಮಿಸಲಾಗಿದೆ. ತಲಾ 394 ಚದರ್ ಅಡಿಯ ಈ ಮನೆ ಒಂದು ಹಾಲ್, ಒಂದು ಬೆಡ್ ರೂಮ್, ಚಿಕ್ಕದಾದ ಅಡುಗೆ ಕೋಣೆ ಹಾಗೂ ಬಾಲ್ಕನಿ ಹೊಂದಿದೆ. ಮನೆ ಚಿಕ್ಕದಾಗಿದ್ದರೂ ಚಂದವಾಗಿದೆ.

    7.42 ಲಕ್ಷ ರೂ. ಬೆಲೆ

    ಸರ್ಕಾರದಿಂದ ನಿರ್ಮಿಸಿಕೊಡುವ ಈ ಮನೆಗೆ ಒಟ್ಟು 7,42,994 ರೂ. ವೆಚ್ಚವಾಗಿದೆ. ಇಷ್ಟೂ ಹಣವನ್ನು ಲಾನುಭವಿ ಭರಿಸಬೇಕಿಲ್ಲ. ವಸತಿ ಅನುದಾನವಾಗಿ ಎಸ್ಸಿ-ಎಸ್ಟಿಗಳಿಗೆ ಕೇಂದ್ರ ಸರ್ಕಾರದಿಂದ 2 ಲಕ್ಷ ರೂ., ರಾಜ್ಯ ಸರ್ಕಾರದಿಂದ 1.50 ಲಕ್ಷ ರೂ. ಹಾಗೂ ನಗರಸಭೆಯಿಂದ 74,299 ರೂ. ಪ್ರತ್ಯೇಕವಾಗಿ ನೀಡಲಾಗುತ್ತಿದೆ. ಲಾನುಭವಿ ಕೇವಲ 60 ಸಾವಿರ ರೂ. ತೊಡಗಿಸಬೇಕಿದ್ದು, ಬಾಕಿ 2,58,695 ರೂ.ವನ್ನು ಬ್ಯಾಂಕ್‌ನಲ್ಲಿ ಸಾಲ ಮಾಡಬೇಕಿದೆ. ಇತರ ಸಮುದಾಯದವರಿಗೂ ಮನೆ ಹೊಂದಲು ಇದೇ ಮಾನದಂಡವಿದ್ದು, ಕೇಂದ್ರದಿಂದ 2 ಲಕ್ಷ ರೂ., ರಾಜ್ಯ ಸರ್ಕಾರದಿಂದ 1.20 ಲಕ್ಷ ರೂ. ಲಭಿಸಲಿದೆ. ಹೀಗಾಗಿ ಇವರು 90 ಸಾವಿರ ರೂ. ತೊಡಗಿಸಿ, 3.08,695 ರೂ.ಬ್ಯಾಂಕ್ ಸಾಲ ಮಾಡಬೇಕಿದೆ.

    ಫಲಾನುಭವಿಗಳಿಗೆ ಸಂತಸ

    ಅನೇಕ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಜೀವನ ನಡೆಸಿ, ಬಡತನದ ಬಾಣಲೆಯಲ್ಲಿ ಬೆಂದು, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ನೂರಾರು ಜನರಿಗೆ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ಮನೆ ಹೊಂದಿದ ನೆಮ್ಮದಿ ನೀಡಿದೆ. ಇದೀಗ ವಸತಿ ಸಮುಚ್ಚಯವೂ ಅಗತ್ಯ ಸೌಲಭ್ಯಗಳಿಗಾಗಿ ತಲೆಯೆತ್ತಿ ಜಿಲ್ಲಾಡಳಿತದತ್ತ ನೋಡುತ್ತಿದೆ.

    ಹೋರಾಟ ಸಮಿತಿಯಿಂದ ವಿವಿಧ ಬೇಡಿಕೆ ಸಲ್ಲಿಕೆ

    ಉಡುಪಿ ನಗರಸಭಾ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಯು ಹೆರ್ಗ ವಸತಿ ಸಮುಚ್ಚಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವೆ, ಉಡುಪಿಯ ಶಾಸಕ ಹಾಗೂ ಜಿಲ್ಲಾಧಿಕಾರಿಗೆ ಮನವಿ ನೀಡಿದೆ. ಸಮುಚ್ಚಯಕ್ಕೆ ಸಂಪರ್ಕ ರಸ್ತೆ, ಹೆರ್ಗ-ಸರಳಬೆಟ್ಟು ಕಚ್ಚಾ ರಸ್ತೆಗೆ ಚರಂಡಿ ಹಾಗೂ ಕಾಲುಸಂಕ ನಿರ್ಮಾಣ, ವಿದ್ಯುತ್ ದಾರಿದೀಪ, ಆಟದ ಮೈದಾನ, ವಾಯುವಿಹಾರ ಪಾರ್ಕ್, ಅಂಗನವಾಡಿ ಕೇಂದ್ರ, ಸಮುದಾಯ ಭವನ, ಕುಡಿಯುವ ನೀರಿನ ನಳ ಸಂಪರ್ಕ, ದಿನಬಳಕೆ ಆಹಾರ ವಸ್ತುಗಳ ಕೇಂದ್ರ ಹಾಗೂ ಸಹಕಾರ ಸಂಘ ಸ್ಥಾಪಿಸುವಂತೆ ವಿವಿಧ ಬೇಡಿಕೆ ಸಲ್ಲಿಸಿದ್ದಾಗಿ ಸಮಿತಿಯ ಸಂಚಾಲಕ ಚನ್ನಪ್ಪ ವೀರೇಶನವರ್ ಮಾಹಿತಿ ನೀಡಿದ್ದಾರೆ.

    ನಮಗಂತೂ ಬಹಳ ಸಂತಸವಾಗಿದೆ. ಸ್ವಂತ ಮನೆ ಇಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು. ದುಡಿದ ಹಣದಲ್ಲಿ ಮನೆ ಬಾಡಿಗೆಗೂ ಹಣ ಸುರಿಯಬೇಕಿತ್ತು. ನಮ್ಮಂತಹ ಬಡವರಿಗೆ ಮನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವೆಂದೂ ಋಣಿಯಾಗಿರುತ್ತೇವೆ.
    -ಸುಶೀಲಾ ಗಾಣಿಗ ಫಲಾನುಭವಿ, ಹೆರ್ಗ

    ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹೆರ್ಗದಲ್ಲಿ 240 ಮನೆಗಳ ಸುಂದರ ಸಮುಚ್ಚಯ ನಿರ್ಮಿಸಿ, ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದೇವೆ. ಎಲ್ಲರೂ ಮನೆಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಯಾರಿಗೂ ಮಾರಾಟ ಮಾಡಬಾರದು. ಹಂತಹಂತವಾಗಿ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು.
    -ಡಾ.ಕೆ.ವಿದ್ಯಾಕುಮಾರಿ ಡಿಸಿ, ಉಡುಪಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts