More

  ಗುಂಡಿಕ್ಕಿ ಸೆಂಟ್ರಿಂಗ್ ಕೆಲಸಗಾರನ ಹತ್ಯೆ: ಪಟಾಕಿ ಎಂದು ಭಾವಿಸಿ ಸುಮ್ಮನಿದ್ದ ಸ್ಥಳೀಯರು

  ಬ್ರಹ್ಮಾವರ: ಬಾರಕೂರು ಹನೆಹಳ್ಳಿ ಗ್ರಾಮದ ಮೂಡುತೋಟ ಎಂಬಲ್ಲಿ ಶನಿವಾರ ರಾತ್ರಿ ಯುವಕನೋರ್ವನನ್ನು ಗುಂಡಿಕ್ಕಿ ಕೊಲೆಮಾಡಿರುವುದು ಭಾನುವಾರ ಬೆಳಕಿಗೆ ಬಂದಿದೆ. ಕೃಷ್ಣ(38) ಕೊಲೆಗೀಡಾದವ.

  ಒಂಟಿಯಾಗಿ ವಾಸಿಸುತ್ತಿದ್ದ

  ಮೂಡುತೋಟದ ಮನೆಯಲ್ಲಿ ಒಂಟಿಯಾಗಿ ವಾಸವಿರುವ ಈತನ ತಂದೆ-ತಾಯಿ ತೀರಿಹೋಗಿದ್ದಾರೆ. ಕೆಲವು ವರ್ಷದ ಹಿಂದೆ ಚಿಕ್ಕಮಗಳೂರು ಮೂಲದ ಯುವತಿಯನ್ನು ವಿವಾಹವಾಗಿದ್ದರೂ ಈಗ ಈತ ಮನೆಯಲ್ಲಿ ಒಂಟಿಯಾಗಿ ಇರುತ್ತಿದ್ದ. ಹನೆಹಳ್ಳಿಯಲ್ಲಿ ಬೇರೆಯವರ ಟಿಲ್ಲರ್‌ನಲ್ಲಿ ಉಳುಮೆ ಮಾಡುತ್ತಿದ್ದು ಜತೆಗೆ ಸೆಂಟ್ರಿಂಗ್ ಕೆಲಸ, ಪೈಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದ ಎಂದು ಸ್ಥಳಿಯರು ಹೇಳುತ್ತಾರೆ. ಇಂತಹ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದವರು ಯಾರು ಎನ್ನುವುದು ಪ್ರಶ್ನೆಯಾಗಿದೆ.

  ಪಟಾಕಿ ಎಂದು ಭಾವಿಸಿ ಸುಮ್ಮನಿದ್ದ ಸ್ಥಳೀಯರು

  ಸ್ಥಳೀಯರೊಂದಿಗೆ ಒಡನಾಟ ಇರಿಸದ ಕೃಷ್ಣ ಪ್ರತಿದಿನ ಮನೆಯ ಸಮೀಪದ ಹೋಟೆಲ್ ಒಂದರಲ್ಲಿ ಚಹಾ-ತಿಂಡಿ ತಿನ್ನುತ್ತಿದ್ದು, ರಾತ್ರಿ ಬಾರಕೂರಿನ ಬಾರ್ ಒಂದರಿಂದ ಊಟ ಪಾರ್ಸೆಲ್ ತಂದು ಮನೆಯಲ್ಲಿ ಊಟ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಶನಿವಾರ ಸಂಜೆ ಊಟ ಮಾಡುತ್ತಿರುವಾಗಲೇ ದುಷ್ಕರ್ಮಿಗಳು 4 ಸುತ್ತು ಗುಂಡು ಹಾರಿಸಿ ಕೊಲೆಮಾಡಿ ಪರಾರಿಯಾಗಿದ್ದಾರೆ. ಅಕ್ಕ-ಪಕ್ಕದ ಮನೆಯವರು ರಾತ್ರಿ ಗುಂಡಿನ ಸದ್ದನ್ನು ಗಮನಿಸಿದರೂ ಪಟಾಕಿ ಎಂದು ಭಾವಿಸಿ ಸುಮ್ಮನಾಗಿದ್ದರು.

  ಗುಂಡಿಕ್ಕಿ ಸೆಂಟ್ರಿಂಗ್ ಕೆಲಸಗಾರನ ಹತ್ಯೆ: ಪಟಾಕಿ ಎಂದು ಭಾವಿಸಿ ಸುಮ್ಮನಿದ್ದ ಸ್ಥಳೀಯರು

  ಯಾರೊಂದಿಗೂ ಬೆರೆಯುತ್ತಿರಲಿಲ್ಲ

  ಸ್ಥಳಿಯವಾಗಿ ಕೆಲವು ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದ ಈತ ಹೆಚ್ಚಾಗಿ ಯಾರಲ್ಲೂ ಬೆರೆಯದೆ ಇದ್ದ ಕಾರಣ ಸ್ಥಳೀಯರಿಗೆ ಈತನ ಒಡನಾಟ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಸೆಂಟ್ರಿಂಗ್ ಕೆಲಸ ಮಾಡುವ ವ್ಯಕ್ತಿಗೆ 4 ಸುತ್ತು ಗುಂಡು ಹೊಡೆದು ಸಾಯಿಸಿರುವುದು ಸಾರ್ವಜನಿಕರಿಗೆ ದಿಗ್ಭ್ರಮೆ ಉಂಟುಮಾಡಿದೆ.
  ಭಾನುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದ ಬಳಿಕ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಸ್ಥಳಕ್ಕೆ ಧಾವಿಸಿದ್ದು, ಶ್ವಾನ ದಳ, ಬೆರಳಚ್ಚು ತಜ್ಞರು ಪುರಾವೆ ಸಂಗ್ರಹಿಸುತ್ತಿದ್ದಾರೆ. ಬ್ರಹ್ಮಾವರ ಠಾಣಾಧಿಕಾರಿ ಮಧು ಬಿ.ಇ, ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ತನಿಖೆ ನಡೆಸುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts