ಪರ್ಸ್ ಎಗರಿಸಿ ಲಕ್ಷಾಂತರ ರೂ. ದರೋಡೆ

robbery
Published on

ಪಡುಬಿದ್ರಿ: ಬೈಕ್‌ನಲ್ಲಿ ಬಂದ ಅಪರಿಚಿತನೊಬ್ಬ ಸೇಲ್ಸ್‌ಮನ್ ಒಬ್ಬರ ಪರ್ಸನ್ನು ಎಗರಿಸಿ ಲಕ್ಷಾಂತರ ರೂ.ದರೋಡೆ ಮಾಡಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಹೊಸ ಮಾರಿಗುಡಿ ಬಳಿಯ ಅಂಡರ್‌ಪಾಸ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.

ನಿಟ್ಟೂರಿನ ಟ್ರೇಡರ್ಸ್‌ವೊಂದರಲ್ಲಿ ಸೇಲ್ಸ್‌ಮನ್ ಆಗಿದ್ದ ಉಮೇಶ್ ಎಂಬವರು ನಿಟ್ಟೂರಿನಿಂದ ಬೈಕಂಪಾಡಿಯ ಅಂಗಡಿಗಳಿಗೆ ಲೈನ್‌ಸೇಲ್ಸ್ ನಡೆಸುತ್ತಿದ್ದರು. ಶನಿವಾರ ಬೆಳಗ್ಗೆ ವಾಹನದಲ್ಲಿ ಸಾಮಗ್ರಿ ತುಂಬಿಕೊಂಡು ಕಾಪು, ಉಚ್ಚಿಲ ಸಹಿತ ವಿವಿಧೆಡೆ ಸೇಲ್ಸ್ ನಡೆಸಿದ್ದು, ವಾಪಸು ನಿಟ್ಟೂರಿನ ಕಡೆ ಹೊರಟಿದ್ದರು. ಈ ನಡುವೆ ಕಾಪುವಿನ ಜನರಲ್ ಸ್ಟೋರ್ಸ್‌ಗೆ ಗೋಧಿ ಕಡಿ ಪೂರೈಸಿ ಹಣ ಪಡೆದುಕೊಂಡ ಬಳಿಕ ರಾತ್ರಿ 8.25ರ ಸುಮಾರಿಗೆ ಹೊಸ ಮಾರಿಗುಡಿಯ ಅಂಡರ್‌ಪಾಸ್ ಕೆಳಗಡೆ ತಲುಪುವಾಗ ಮಂಗಳೂರು ಕಡೆಯಿಂದ ಬಂದ ಅಪರಿಚಿತ ಬೈಕ್ ಸವಾರನೊಬ್ಬ ಉಮೇಶ್ ಅವರ ಗಾಡಿಯನ್ನು ತಡೆದು ಹಣ ತುಂಬಿದ್ದ ಬ್ಯಾಗನ್ನು ಎಗರಿಸಿ ಪರಾರಿಯಾಗಿದ್ದಾನೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬ್ಯಾಗಿನಲ್ಲಿ ಲಕ್ಷಾಂತರ ರೂ. ಇದ್ದಿದ್ದಾಗಿ ದೂರಿನಲ್ಲಿ ಉಮೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net