More

    ವೈದ್ಯರಿಗೆ ಪಿಸ್ತೂಲ್ ತೋರಿಸಿ ರಾಬರಿ

    ಬೆಂಗಳೂರು: ವೈದ್ಯರ ಮನೆಗೆ ನುಗ್ಗಿದ್ದ ಮೂವರು ಮುಸುಕುಧಾರಿಗಳು ಪಿಸ್ತೂಲ್ ತೋರಿಸಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದಾರೆ.
    ಸಹಕಾರನಗರದ ಕಾವೇರಿ ಸ್ಕೂಲ್ ಹಿಂಭಾಗದ ಡಾ. ಉಮಾಶಂಕರ್ ಮನೆಯಲ್ಲಿ ಬುಧವಾರ ರಾತ್ರಿ 8.20ರಲ್ಲಿ ಘಟನೆ ನಡೆದಿದೆ. ಈ ಕುರಿತು ವೈದ್ಯರು ಕೊಟ್ಟ ದೂರಿನ ಮೇರೆಗೆ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಡಾ. ಉಮಾಶಂಕರ್ ರಾತ್ರಿ 8.20ರಲ್ಲಿ ಮನೆ ಸಮೀಪದ ಅಂಗಡಿಗೆ ತರಕಾರಿ ತರಲು ಹೋಗಿದ್ದರು. ಹತ್ತಿರದ ಅಂಗಡಿ ಎಂಬ ಕಾರಣಕ್ಕೆ ಗೇಟ್, ಡೋರ್ ಲಾಕ್ ಮಾಡಿರಲಿಲ್ಲ. ಇದೇ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಮೂವರು ಮುಸುಕುಧಾರಿಗಳು ಮನೆಗೆ ನುಗ್ಗಿ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಅಷ್ಟೊತ್ತಿಗೆ ಉಮಾಶಂಕರ್ ಮನೆಗೆ ಮರಳಿದ್ದರು. ಹಾಲ್‌ನಲ್ಲಿ ಒಬ್ಬ ಯುವಕ ಕಂಡಿದ್ದ. ಭಯದಲ್ಲಿ ವೈದ್ಯರು, ‘ಯಾರಪ್ಪ ನೀನು’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಜೋರಾಗಿ ‘ಭಯ್ಯ ಭಯ್ಯ’ ಎಂದು ಯುವಕ ಕೂಗಿಕೊಂಡಿದ್ದ.

    ಅನುಮಾನಗೊಂಡ ಉಮಾಶಂಕರ್, ತಕ್ಷಣ ಹೊರಗಡೆ ಹೋಗಿ ಡೋರ್ ಲಾಕ್ ಮಾಡಲೆತ್ನಿಸಿದ್ದರು. ಮನೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ಬಂದು ವೈದ್ಯರಿಗೆ ಪಿಸ್ತೂಲ್ ತೋರಿಸಿ ‘ಬಾಗಿಲು ಲಾಕ್ ಮಾಡಬೇಡ. ಮಾಡಿದರೆ ಶೂಟ್ ಮಾಡ್ತೀನಿ’ ಹಿಂದಿಯಲ್ಲಿ ಬೆದರಿದ್ದ. ಪ್ರಾಣಭಯದಿಂದ ಸುಮ್ಮನಾದ ವೈದ್ಯರನ್ನು ಆರೋಪಿಗಳು ಎಳೆದೊಯ್ದು ರೂಮ್‌ನಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾರೆ.

    ಸ್ವಲ್ಪ ಹೊತ್ತಿನ ಬಳಿಕ ಉಮಾಶಂಕರ್ ಡೋರ್ ಲಾಕ್ ಓಪನ್ ಮಾಡಿಕೊಂಡು ಹೊರಗೆ ಬಂದು ನೋಡಿದಾಗ ಲಾಕರ್‌ಗಳನ್ನು ಒಡೆದು 500 ಗ್ರಾಂ ಚಿನ್ನಾಭರಣ, ವಿವಿಧ ಕಂಪನಿಯ 6 ದುಬಾರಿ ವಾಚ್ ಮತ್ತು 20 ಲಕ್ಷ ರೂ. ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.

    ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. 20 ಲಕ್ಷ ರೂ. ನಗದು ಇರುವ ಬಗ್ಗೆ ಪ್ರಶ್ನಿಸಿದಾಗ ಮಗಳ ಶೈಕ್ಷಣಿಕ ಉದ್ದೇಶಕ್ಕೆ ಸಂಗ್ರಹಿಸಿದ್ದಾಗಿ ಹೇಳಿಕೆ ನೀಡಿರುವುದಾಗಿ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts