More

    ‘ಎದ್ದು ಕಾಣುವ ಅಂಗವೈಕಲ್ಯ’ ಇರುವ ಸರ್ಕಾರಿ ನೌಕರರಿಗೆ ಗ್ರೂಪ್ ಸಿ, ಡಿ ಹುದ್ದೆಗಳ ಮುಂಬಡ್ತಿಯಲ್ಲಿ ಶೇ.4 ಮೀಸಲಾತಿ

    ಬೆಂಗಳೂರು: ಗ್ರೂಪ್ ‘ಸಿ’ ಹಾಗೂ ಗ್ರೂಪ್ ‘ಡಿ’ ವೃಂದಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ’ ಮುಂಬಡ್ತಿಯಲ್ಲಿ ಶೇ.4 ಮೀಸಲಾತಿ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ರಾಜ್ಯ ಸಿವಿಲ್ ಸೇವೆಗಳ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2016ರ ಅಧಿನಿಯಮ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ‘ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ’ ಮುಂಬಡ್ತಿಯಲ್ಲಿ ಮೀಸಲಾತಿ ಆಸ್ಪದವು ಅನ್ವಯವಾಗುತ್ತದೆ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅಂಗವೈಕಲ್ಯವನ್ನುಳ್ಳ ವ್ಯಕ್ತಿಗಳಿಂದ ಭರ್ತಿ ಮಾಡಬಹುದಾದ ಹುದ್ದೆಗಳನ್ನು ಗುರುತಿಸಿ ಹೊರಡಿಸಲಾದ ಅಧಿಸೂಚನೆಯಲ್ಲಿ ಒಳಗೊಂಡ ಹುದ್ದೆಗಳಿಗೆ ಮಾತ್ರ ಮುಂಬಡ್ತಿ ನೀಡಬೇಕು. ಕೇಂದ್ರ ಸರ್ಕಾರ ಹುದ್ದೆಗಳಲ್ಲಿ ಇವರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ನೀಡಲಾಗಿದೆ. ಅದೇರೀತಿ ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಇವರಿಗೆ ಮೀಸಲಾತಿ ಕಲ್ಪಿಸಲಾಗಿದೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: ಈ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಅಂದ್ರು ‘ಕುಂದಾಪುರದ ವಾಜಪೇಯಿ’; ಸತತ 5 ಸಲ ದಾಖಲೆ ಅಂತರದಿಂದ ಗೆದ್ದಿದ್ದರೂ ಈ ನಿರ್ಧಾರ!

    ಮುಂಬಡ್ತಿ ಮೀಸಲಾತಿ ಸೌಲಭ್ಯ ಪಡೆಯುವ ‘ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರು’ ಪ್ರಮಾಣೀಕರಿಸುವ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಅಂಗವೈಕಲ್ಯ ಹೊಂದಿರುವ ಪ್ರಮಾಣ ಪತ್ರವನ್ನು ಪಡೆದು ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಹುದ್ದೆಗಳಿಗೆ ನೇರ ನೇಮಕಾತಿಯ ಪ್ರಮಾಣವನ್ನು ನಿಗದಿಪಡಿಸಿದ್ದಲ್ಲಿ ಹಾಗೂ ಅಂಥ ನೇರ ನೇಮಕಾತಿ ಪ್ರಮಾಣ ಶೇ.75 ಮೀರದಂತೆ ಮುಂಬಡ್ತಿ ಮೀಸಲಾತಿ ಅನ್ವಯವಾಗುತ್ತದೆ. ಮುಂಬಡ್ತಿ ಮೀಸಲಾತಿಯನ್ನು ನೇಮಕಾತಿ ಪ್ರಾಧಿಕಾರವಾರು ಹಾಗೂ ವೃಂದವಾರು ಜಾರಿಗೊಳಿಸತಕ್ಕದ್ದು. ಬ್ಯಾಕ್‌ಲಾಗ್ ಹುದ್ದೆಗಳಲ್ಲಿ ಮುಂಬಡ್ತಿಗೆ ಅರ್ಹರಾದ ಮತ್ತು ಎದ್ದುಕಾಣುವ ಅಂಗವೈಕಲ್ಯ ನೌಕರರ ಲಭ್ಯವಾಗದಿದ್ದರೆ ಮೀಸಲಾತಿ ರಹಿತ ಸರ್ಕಾರಿ ನೌಕರರನ್ನು ಪರಿಗಣಿಸಬಹುದು ಎಂದು ಆದೇಶದಲ್ಲಿ ಸರ್ಕಾರ ವಿವರಿಸಿದೆ.

    ಇದನ್ನೂ ಓದಿ: ಅರ್ಚಕರಿಗೆ ಹೃದಯಾಘಾತ, ಅರ್ಧಕ್ಕೇ ನಿಂತ ಜಾತ್ರೆ; ಕಳಶ ಹೊತ್ತು ಸಾಗುತ್ತಿದ್ದವರು ಕುಸಿದು ಬಿದ್ದು ಸಾವು

    ಮುಂಬಡ್ತಿ ನೀಡುವ ಸಂದರ್ಭದಲ್ಲಿ ಎದ್ದುಕಾಣುವ ಅಂಗವೈಕಲ್ಯ ನೌಕರ ಎಸ್ಸಿ ಮತ್ತು ಎಸ್ಟಿ ನೌಕರರಾಗಿದ್ದರೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಗುರುತಿಸಲಾಗಿರುವ ರೋಸ್ಟರ್ ಬಿಂದುವಿನ ಎದುರು ಪರಿಗಣಿಸತಕ್ಕದ್ದು. ಅದೇರೀತಿ, ಮೀಸಲಾತಿ ರಹಿತ ಸರ್ಕಾರಿ ನೌಕರರು, ಎದ್ದು ಕಾಣುವ ಅಂಗವೈಕಲ್ಯ ವ್ಯಕ್ತಿಯಾಗಿದ್ದಲ್ಲಿ, ಅವರನ್ನು ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ವ್ಯಕ್ತಿಗಳಿಗೆ ಗುರುತಿಸಲಾಗಿರುವ ಬಿಂದುಗಳ ಅಡಿ ಮೀಸಲಾತಿ ನೀಡಬೇಕು. ಎದ್ದು ಕಾಣುವ ಅಂಗವೈಕಲ್ಯ ಸರ್ಕಾರಿ ನೌಕರರು ಮುಂಬಡ್ತಿ ಹೊಂದಿದ್ದಲ್ಲಿ ಅದೇ ದಿನಾಂಕದಿಂದ ಜೇಷ್ಠತೆಗೆ ಅರ್ಹರಾಗುತ್ತಾರೆ. ಸ್ವಾಯುತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ಉದ್ದಿಮೆಗಳು, ಆಯೋಗ, ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ.

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts