More

    ಸಚಿನ್ ವಿಕೆಟ್ ಕಿತ್ತಿದ್ದಕ್ಕೆ ಇಂಗ್ಲೆಂಡ್ ವೇಗಿಗೆ ಬಂದಿತ್ತು ಜೀವ ಬೆದರಿಕೆ!

    ಲಂಡನ್: ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಅವರ ನೂರನೇ ಶತಕದ ದಾಖಲೆಯನ್ನು ನೋಡಲು ಕ್ರಿಕೆಟ್ ಪ್ರೇಮಿಗಳೆಲ್ಲರೂ ನಿರೀಕ್ಷೆಗಿಂತ ಸ್ವಲ್ಪ ಹೆಚ್ಚು ಸಮಯವೇ ಕಾದಿದ್ದರು. 2011ರ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 99ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕ ಪೂರೈಸಿದ ಬಳಿಕ ಸಚಿನ್ ತೆಂಡುಲ್ಕರ್‌ರ ಪ್ರತಿ ಇನಿಂಗ್ಸ್‌ನಲ್ಲೂ ವಿಶ್ವದಾಖಲೆಯ ಶತಕವನ್ನು ನಿರೀಕ್ಷಿಸಲಾಗುತ್ತಿತ್ತು. ಹೀಗಿರುವಾಗ 2011ರಲ್ಲಿ ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್ ಪಂದ್ಯದಲ್ಲಿ ಸಚಿನ್ ಶತಕದ ಸನಿಹ ಬಂದಿದ್ದರು. ಆದರೆ ವೇಗಿ ಟಿಮ್ ಬೆಸ್ನಾನ್ ಎಸೆತದಲ್ಲಿ ವಿವಾದಾತ್ಮಕ ತೀರ್ಪಿಗೆ ಔಟಾಗಿ ಸಚಿನ್ ಶತಕ ವಂಚಿತರಾಗಿದ್ದರು. ಇದರಿಂದ ಸಿಟ್ಟಾದ ಅಭಿಮಾನಿಗಳಿಂದ ಬೆಸ್ನಾನ್ ಮತ್ತು ಸಚಿನ್ ವಿರುದ್ಧ ಔಟ್ ತೀರ್ಪು ನೀಡಿದ್ದ ಅಂಪೈರ್ ರಾಡ್ ಟಕರ್‌ಗೆ ಜೀವ ಬೆದರಿಕೆಗಳು ಬಂದಿದ್ದವಂತೆ!

    ಇದನ್ನೂ ಓದಿ: ಬಿಬಿಸಿಯಲ್ಲಿ ಇನ್ನು ಜೆಫ್ರಿ ಬಾಯ್ಕಟ್ ಕಾಮೆಂಟರಿ ಕೇಳಲ್ಲ!

    ಇಂಗ್ಲೆಂಡ್ ವಿರುದ್ಧ 2011ರ ಆಗಸ್ಟ್‌ನಲ್ಲಿ ನಡೆದ ಟೆಸ್ಟ್ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ಸಚಿನ್ ತೆಂಡುಲ್ಕರ್ 91 ರನ್ ಗಳಿಸಿ ಆಡುತ್ತಿದ್ದಾಗ ಬೆಸ್ನಾನ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ‘ಆ ಎಸೆತ ಲೆಗ್‌ಸ್ಟಂಪ್ ಮಿಸ್ ಮಾಡಿಕೊಳ್ಳುವಂತಿತ್ತು. ಆದರೆ ಅಂಪೈರ್ ಟಕರ್ ಔಟ್ ನೀಡಿದ್ದರು. ಅವರು ಆ ಇನಿಂಗ್ಸ್‌ನಲ್ಲಿ ಶತಕ ಪೂರೈಸುವ ಹಾದಿಯಲ್ಲಿದ್ದರು. ಪಂದ್ಯದ ಬಳಿಕ ನನಗೆ ಮತ್ತು ಅಂಪೈರ್‌ಗೆ ಜೀವ ಬೆದರಿಕೆಗಳು ಬಂದಿದ್ದವು. ನನಗೆ ಟ್ವಿಟರ್‌ನಲ್ಲಿ ಬಂದಿದ್ದರೆ, ಟಕರ್‌ಗೆ ಆಸ್ಟ್ರೇಲಿಯಾದ ಅವರ ಮನೆಯ ವಿಳಾಸಕ್ಕೆ ಪತ್ರಗಳು ಹೋಗಿದ್ದವು. ಔಟ್ ನೀಡಲು ನಿನಗೆಷ್ಟು ಧೈರ್ಯ? ಆ ಎಸೆತ ಲೆಗ್‌ಸ್ಟಂಪ್ ಮಿಸ್ ಆಗುವಂತಿತ್ತು ಎಂದು ಅದರಲ್ಲಿ ಬರೆದಿತ್ತಂತೆ’ ಎಂದು 35 ವರ್ಷದ ಬೆಸ್ನಾನ್ ವಿವರಿಸಿದ್ದಾರೆ. ಆ ಸರಣಿಯನ್ನು ಜಯಿಸಿದ ನಾವು ವಿಶ್ವ ನಂ. 1 ಪಟ್ಟಕ್ಕೇರಿದ್ದೆವು ಎಂದೂ ಅವರು ಹೇಳಿಕೊಂಡಿದ್ದಾರೆ.

    ಸಚಿನ್ ವಿಕೆಟ್ ಕಿತ್ತಿದ್ದಕ್ಕೆ ಇಂಗ್ಲೆಂಡ್ ವೇಗಿಗೆ ಬಂದಿತ್ತು ಜೀವ ಬೆದರಿಕೆ!

    ಇದನ್ನೂ ಓದಿ: ಎಂದೆಂದಿಗೂ ಆನಂದ್‌ ಅಭಿಮಾನಿಯಾಗಿರುವೆ ಎಂದು ಸಹ-ಪ್ರಯಾಣಿಕ ಹೇಳಿದ್ದೇಕೆ?

    ಬೆದರಿಕೆಗೆ ಹೆದರಿದ್ದ ಅಂಪೈರ್ ಟಕರ್ ಭದ್ರತೆಯನ್ನೂ ಪಡೆದುಕೊಂಡಿದ್ದರಂತೆ. ಕೆಲವು ತಿಂಗಳ ಬಳಿಕ ನಾನು ಟಕರ್‌ರನ್ನು ಭೇಟಿಯಾದಾಗ, ‘ಗೆಳೆಯ ನಾನು ಮನೆಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾಯ್ತು’ ಎಂದು ಹೇಳಿದ್ದರಂತೆ. ಸಚಿನ್ 100ನೇ ಶತಕವನ್ನು ನಂತರ ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಮಿಸ್ ಮಾಡಿಕೊಂಡಿದ್ದರು. ಕೊನೆಗೆ 2012ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಸಚಿನ್ ಈ ವಿಶ್ವದಾಖಲೆಯನ್ನು ನಿರ್ಮಿಸಿದ್ದರು. ಇಂಗ್ಲೆಂಡ್ ಪರ 23 ಟೆಸ್ಟ್‌ಗಳಲ್ಲಿ 72 ವಿಕೆಟ್ ಮತ್ತು 85 ಏಕದಿನ ಪಂದ್ಯಗಳಲ್ಲಿ 109 ವಿಕೆಟ್ ಕಬಳಿಸಿರುವ ಟಿಮ್ ಬೆಸ್ನಾನ್, 2015ರಲ್ಲಿ ಕೊನೆಯದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

    ವರ್ಕೌಟ್ ಚಾಲೆಂಜ್‌ನಲ್ಲಿ ರೂಪದರ್ಶಿಗೆ ಸೋತ ಒಲಿಂಪಿಯನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts