

ಬೆಂಗಳೂರು: 'ಲವ್ ಮಾಕ್ಟೇಲ್' ಚಿತ್ರದ ಒಂದು ಹೈಲೈಟ್ ಎಂದರೆ, ಅದರ ಹಾಡುಗಳು. ರಘು ದೀಕ್ಷಿತ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಹಾಡುಗಳು ಯಶಸ್ವಿಯಾಗಿದ್ದವು. ಅದೇ ಕಾರಣಕ್ಕೆ ರಘು ದೀಕ್ಷಿತ್ ಅವರೇ 'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಸಂಗೀತ ಸಂಯೋಜಿಸಬೇಕು ಎಂದು ಹೇಳಿ, ಅವರಿಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿದ್ದರು ನಟ-ನಿರ್ದೇಶಕ-ನಿರ್ಮಾಪಕ ಕೃಷ್ಣ.
ಇದೀಗ 'ಲವ್ ಮಾಕ್ಟೇಲ್' ಚಿತ್ರತಂಡದಿಂದ ರಘು ದೀಕ್ಷಿತ್ ಹೊರ ನಡೆದಿದ್ದಾರೆ ಎಂಬ ಸುದ್ದಿಯೊಂದು ಬಂದಿದೆ. ಅದಕ್ಕೆ ಕಾರಣ ಹಣಕಾಸಿನ ಸಮಸ್ಯೆ ಎಂಬುದು ವಿಶೇಷ.
ಈ ಕುರಿತು ಮಾತನಾಡಿರುವ ಕೃಷ್ಣ, 'ರಘು ಅವರು ಈ ಚಿತ್ರಕ್ಕೂ ಸಂಗೀತ ಸಂಯೋಜಿಸಬೇಕಿತ್ತು. ಆದರೆ, ಹಣಕಾಸಿನ ವಿಷಯದಲ್ಲಿ ಒಮ್ಮತ ಮೂಡದಿದ್ದರಿಂದ ಅವರು ಚಿತ್ರದಿಂದ ಹೊರನಡೆದಿದ್ದಾರೆ. ಅವರ ಬದಲು ಸೂಕ್ತ ಸಂಗೀತ ನಿರ್ದೇಶಕರೊಬ್ಬರ ಹುಡುಕಾಟ ನಡೆದಿದ್ದು, ಇನ್ನಷ್ಟೇ ಆಯ್ಕೆಯಾಗಬೇಕಿದೆ' ಎನ್ನುತ್ತಾರೆ.
'ಲವ್ ಮಾಕ್ಟೇಲ್' ಚಿತ್ರದಲ್ಲಿ ಲಿಪ್ ಸಿಂಕ್ ಹಾಡುಗಳಿರಲಿಲ್ಲ. ಬರೀ ಮಾಂಟೇಜ್ ಹಾಡುಗಳಿದ್ದವು. ಅದೇ ಕಾರಣಕ್ಕೆ ಚಿತ್ರೀಕರಣ ಮೊದಲು, ಸನ್ನಿವೇಶದ ಮೂಡ್ಗೆ ತಕ್ಕ ಹಾಗೆ ಕೊನೆಯಲ್ಲಿ ಹಾಡುಗಳನ್ನು ಸಂಯೋಜಿಸಲಾಗಿತ್ತು. ಈ ಬಾರಿ ಸಹ ಅದೇ ಮುಂದುವರೆಯಲಿದೆಯಂತೆ. ಮೊದಲು ಚಿತ್ರೀಕರಣವೆಲ್ಲಾ ಮುಗಿದ ನಂತರ, ಆ ನಂತರ ಎಡಿಟ್ ಮಾಡಿಸಿ, ಅವಶ್ಯಕತೆ ಇದ್ದ ಕಡೆ ಹಾಡುಗಳನ್ನು ಸೇರಿಸಲಾಗುತ್ತದೆ ಎನ್ನುತ್ತಾರೆ ಕೃಷ್ಣ.
ಸದ್ಯ ಶೇ 70ರಷ್ಟು ಮಾತ್ರ ಚಿತ್ರೀಕರಣ ಮುಗಿದಿದ್ದು, ಕೃಷ್ಣ ಬೇರೆ ಚಿತ್ರಗಳಲ್ಲಿ ಬ್ಯುಸಿ ಇರುವುದರಿಂದ ಡೇಟ್ಸ್ ಹೊಂದಿಸಿಕೊಂಡು ಚಿತ್ರೀಕರಣ ಮುಗಿಸುವುದಾಗಿ ಹೇಳುತ್ತಾರೆ. ಇದಲ್ಲದೆ, 'ಶ್ರೀಕೃಷ್ಣ ಅಟ್ ಜಿಮೇಲ್ ಡಾಟ್ಕಾಮ್' ಮತ್ತು 'ವರ್ಜಿನ್' ಚಿತ್ರಗಳ ತಮ್ಮ ಬಹುತೇಕ ಚಿತ್ರೀಕರಣ ಮುಗಿಸಿರುವ ಅವರು, ಅವನ್ನೆಲ್ಲಾ ಮುಗಿಸಿದ ಮೇಲೆ, 'ಲವ್ ಮಾಕ್ಟೇಲ್ 2' ಚಿತ್ರವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳುತ್ತಾರೆ.