More

    ಈವರೆಗೂ ಐದು ಮಂದಿಯನ್ನು ಕೊಂದಿದ್ದೇವೆ… ಮಾಜಿ ಬಿಜೆಪಿ ಶಾಸಕನ ಸ್ಫೋಟಕ ವಿಡಿಯೋ ವೈರಲ್​

    ಜೈಪುರ: ಗೋಹತ್ಯೆಯಲ್ಲಿ ತೊಡಗಿರುವವರನ್ನು ಕೊಲ್ಲುವಂತೆ ಒಂದು ಗುಂಪಿನ ಜನರ ಮುಂದೆ ರಾಜಸ್ಥಾನದ ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಜ್ಞಾನ್ ದೇವ್ ಅಹುಜಾ, ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ವೈರಲ್​ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

    ವಿಡಿಯೋದಲ್ಲಿ ಮಾತನಾಡಿರುವ ಅಹುಜಾ, ಅದು ಲಾಲವಾಂಡಿಯಲ್ಲಿರಲಿ ಅಥವಾ ಬೆಹ್ರೋರ್‌ನಲ್ಲಿರಲಿ ನಾವು ಇಲ್ಲಿಯವರೆಗೆ 5 ಮಂದಿಯನ್ನು ಕೊಂದಿದ್ದೇವೆ ಎನ್ನುವ ಮೂಲಕ ರಕ್ಬರ್ ಖಾನ್ ಮತ್ತು ಪೆಹ್ಲು ಖಾನ್ ಹತ್ಯೆಯ ಬಗ್ಗೆ ನೇರವಾಗಿ ಉಲ್ಲೇಖಿಸಿದ್ದಾರೆ. ಈ ಎರಡು ಹತ್ಯೆಗಳು ಒಂದು 2017ರಲ್ಲಿ, ಇನ್ನೊಂದು 2018ರಲ್ಲಿ ರಾಮಗಢದಲ್ಲಿ ನಡೆಯಿತು. ಈ ವೇಳೆ ಅಹುಜಾ ಅವರೇ ಆ ಕ್ಷೇತ್ರದ ಶಾಸಕರಾಗಿದ್ದರು ಮತ್ತು ಬಿಜೆಪಿ ಆಗ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಉಳಿದ ಯಾವ ಮೂವರು ಹತ್ಯೆಗಳ ಬಗ್ಗೆ ಅಹುಜಾ ಉಲ್ಲೇಖಿಸಿದರು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

    ಹತ್ಯೆ ಮಾಡಲು ಕಾರ್ಯಕರ್ತರಿಗೆ ಫ್ರೀ ಹ್ಯಾಂಡ್​ ಕೊಟ್ಟಿದ್ದೇನೆ. ಬಂಧನವಾದರೆ, ಅವರನ್ನು ಖುಲಾಸೆಗೊಳಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸುತ್ತೇವೆ ಎಂದು ಹೇಳಿರುವುದು ವಿಡಿಯೋದಲ್ಲಿದೆ. ಈ ವಾರದ ಆರಂಭದಲ್ಲಿ ಮಾತನಾಡಿರುವ ವಿಡಿಯೋ ಎಂದು ಹೇಳಲಾಗಿದೆ. ಪೆಹ್ಲು ಖಾನ್​ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು 2019ರಲ್ಲಿ ಖುಲಾಸೆಗೊಳಿಸಲಾಗಿದೆ. ಆದರೆ, ಪ್ರಸ್ತುತ ಕಾಂಗ್ರೆಸ್​ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣ ಹೈಕೋರ್ಟ್​ನಲ್ಲಿ ಬಾಕಿ ಉಳಿದಿದೆ. ರಕ್ಬರ್​ ಖಾನ್​ ಹತ್ಯೆ ಪ್ರಕರಣವು ಇನ್ನು ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

    ಶನಿವಾರ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಭಾರತೀಯ ದಂಡಸಂಹಿತೆಯ (ಐಪಿಸಿ) 153ಎ ಸೆಕ್ಷನ್​ ಅಡಿಯಲ್ಲಿ ಕೋಮು ಸೌಹಾರ್ದತೆಯನ್ನು ಹರಡಿದ ಆರೋಪದ ಮೇಲೆ ಬಿಜೆಪಿ ನಾಯಕ ಅಹುಜಾ ವಿರುದ್ಧ ಪ್ರಕರಣ ದಾಖಲಾಗಿದೆ. ಕೊಲೆಗಾರರನ್ನು ಅಹುಜಾ ದೇಶಭಕ್ತರು ಮತ್ತು ಛತ್ರಪತಿ ಶಿವಾಜಿ ಹಾಗೂ ಗುರು ಗೋಬಿಂದ್ ಸಿಂಗ್ ಅವರ ನಿಜವಾದ ವಂಶಸ್ಥರು ಎಂದು ಹೇಳಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ಅಹುಜಾ ನೀಡಿದ್ದಾರೆ.

    ಈ ಬಗ್ಗೆ ಬಿಜೆಪಿ ಅಲ್ವಾರ್​ ಘಟಕ ಪ್ರತಿಕ್ರಿಯೆ ನೀಡಿದ್ದು, ಅಹುಜಾ ಅವರ ಮಾತುಗಳು ಅವರದ್ದೇಯಾದ ದೃಷ್ಟಿಕೋನವಾಗಿದೆ. ಇದಕ್ಕೆ ನಮ್ಮ ಪಕ್ಷ ಬೆಂಬಲವಾಗಿ ನಿಲ್ಲುವುದಿಲ್ಲ ಎಂದಿದೆ. ಆದರೆ, ಅಹುಜಾ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದು, ಗೋವು ಕಳ್ಳಸಾಗಾಣೆ ಮತ್ತು ಗೋಹತ್ಯೆ ಮಾಡುವವರನ್ನು ಸುಮ್ಮನೇ ಬಿಡುವುದಿಲ್ಲ ಎಂದರು. ಅಲ್ಲದೆ, ಇದೇ ಸಂದರ್ಭದಲ್ಲಿ ತಮ್ಮ ಹೇಳಿಕೆ ತಿರುಚಿದ ಅಹುಜಾ, ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಐವರು ಮಿಯೋ ಮುಸ್ಲಿಮರನ್ನು ನಮ್ಮ ಕಾರ್ಯಕರ್ತರು ಥಳಿಸಿದ್ದಾರೆ ಎಂದರು. ಇದಕ್ಕೂ ಮುನ್ನ ವೈರಲ್​ ವಿಡಿಯೋದಲ್ಲಿ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದರು.

    ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ, ಬಿಜೆಪಿಯ ಧಾರ್ಮಿಕ ಭಯೋತ್ಪಾದನೆ ಮತ್ತು ಮತಾಂಧತೆಗೆ ಇದಕ್ಕಿಂತ ಹೆಚ್ಚಿನ ಪುರಾವೆ ಏನು ಬೇಕು? ಬಿಜೆಪಿಯ ನಿಜವಾದ ಮುಖ ಬಯಲಾಗಿದೆ ಎಂದು ಹೇಳಿದ್ದಾರೆ.

    ಅಂದಹಾಗೆ 55 ವರ್ಷದ ಪೆಹ್ಲು ಖಾನ್, ಏಪ್ರಿಲ್ 2017ರಲ್ಲಿ ಬೆಹ್ರೋರ್‌ನಲ್ಲಿ ಕೊಲ್ಲಲ್ಪಟ್ಟರು. ರಕ್ಬರ್ ಖಾನ್ 2018ರ ಜುಲೈ 28ರಂದು ಲಾಲವಾಂಡಿ ಗ್ರಾಮದಲ್ಲಿ ಹತ್ಯೆಯಾದರು. ಇಬ್ಬರೂ ನೆರೆಯ ಹರಿಯಾಣದವರು ಮತ್ತು ಹೆಚ್ಚಾಗಿ ಡೈರಿ ವ್ಯಾಪಾರದಲ್ಲಿ ತೊಡಗಿರುವ ಮಿಯೋ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಇಬ್ಬರು ಜಾನುವಾರುಗಳನ್ನು ಸಾಗಿಸುತ್ತಿದ್ದಾಗ, ಗೋರಕ್ಷರು ಎಂದು ಹೇಳಿಕೊಂಡು ಕೆಲವರು ಗುಂಪು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಈ ಫೋಟೋದಲ್ಲಿರೋ ಬಾಲಕಿ ಯಾರೆಂದು ಗುರುತಿಸುವಿರಾ? ಇಂದು ದಕ್ಷಿಣ ಭಾರತದ ಸ್ಟಾರ್​ ನಟಿ ಈಕೆ…

    ಇಬ್ಬನಿ ತಬ್ಬಿದ ಅಂಕಿತಾ; ಬೇಸಿಗೆಯ ಘಮ ಚಳಿಗಾಲದ ಹಿತ ಮಳೆಗಾಲದ ಮಾಧುರ್ಯ

    ಚಿಕ್ಕಬಳ್ಳಾಪುರದಲ್ಲಿ ಯಾರ ದೊಡ್ಡಸ್ತಿಕೆ?: ಕಾಂಗ್ರೆಸ್​ಗೆ ಭದ್ರಕೋಟೆ ಸುಭದ್ರತೆ ತವಕ, ಕಮಲಕ್ಕೆ ಕ್ಷೇತ್ರ ವಿಸ್ತಾರದ ಹಂಬಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts