More

    ಚಿಕ್ಕಬಳ್ಳಾಪುರದಲ್ಲಿ ಯಾರ ದೊಡ್ಡಸ್ತಿಕೆ?: ಕಾಂಗ್ರೆಸ್​ಗೆ ಭದ್ರಕೋಟೆ ಸುಭದ್ರತೆ ತವಕ, ಕಮಲಕ್ಕೆ ಕ್ಷೇತ್ರ ವಿಸ್ತಾರದ ಹಂಬಲ

    ರೇಷ್ಮೆ, ದ್ರಾಕ್ಷಿ, ಹೂವು, ತರಕಾರಿ, ಹೈನುಗಾರಿಕೆಗೆ ಹೆಸರಾಗಿರುವ ಬಯಲು ಸೀಮೆ ಚಿಕ್ಕಬಳ್ಳಾಪುರ ಜಿಲ್ಲೆ 5 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಾಂಗ್ರೆಸ್ 3, ಜೆಡಿಎಸ್, ಬಿಜೆಪಿಯ ತಲಾ ಒಬ್ಬರು ಶಾಸಕರಿದ್ದಾರೆ. ಮೊದಲಿನಿಂದಲೂ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ. ಇದನ್ನು ಮತ್ತಷ್ಟು ಗಟ್ಟಿಗೊಳಿಸುವುದು ಕೈ ಪಾಳಯದ ಗುರಿ. ಮತ್ತೊಂದೆಡೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬೂತ್ ಮಟ್ಟದ ಸಂಘಟನೆ ಬಿಜೆಪಿ ಮತ್ತು ಜೆಡಿಎಸ್ ಬಲ ಹೆಚ್ಚಿಸಿದೆ. ಮೊದಲು ಕ್ಷೇತ್ರದ ಸಮಸ್ಯೆಗಳು, ಜನಪರ ವಿಚಾರವಾಗಿ ನಿರಂತರ ಹೋರಾಟ ಮತ್ತು ಪಕ್ಷದ ನೊಗ ಹೊತ್ತ ನಾಯಕರು ಚುನಾವಣಾ ಅಭ್ಯರ್ಥಿಗಳಾಗುತ್ತಿದ್ದರು. ಆದರೆ, ಕಳೆದ 2 ಚುನಾವಣೆಗಳಿಂದಲೂ ಕೊಡುಗೈ ದಾನಿಗಳು, ಸಮಾಜಸೇವಕರು ಅಖಾಡಕ್ಕಿಳಿದು, ವೈಯಕ್ತಿಕ ವರ್ಚಸ್ಸಿನಲ್ಲಿ ಜನಪ್ರತಿನಿಧಿಗಳಾಗುತ್ತಿರುವುದು ರಾಜಕೀಯ ಚಿತ್ರಣ ಬದಲಾಯಿಸುತ್ತಿದೆ. ಈ ತಂತ್ರಗಾರಿಕೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮತ್ತು ಚಿಂತಾಮಣಿಯಲ್ಲಿ ವರ್ಕೌಟ್ ಆಗಿದೆ. ಇದೀಗ ಗೌರಿಬಿದನೂರು ಮತ್ತು ಶಿಡ್ಲಘಟ್ಟದಲ್ಲೂ ಸೇವಾ ಚಟುವಟಿಕೆಯಲ್ಲಿ ತೊಡಗಿರುವ ನಾಯಕರಿಗೇನೂ ಕಡಿಮೆ ಇಲ್ಲ. ಈಗಾಗಲೆ ಕಾಂಗ್ರೆಸ್ (ಚಿಕ್ಕಬಳ್ಳಾಪುರ ಹೊರತುಪಡಿಸಿದಂತೆ) ಮತ್ತು ಜೆಡಿಎಸ್ ಅಭ್ಯರ್ಥಿಗಳ ಹೆಸರು ಸ್ಪಷ್ಟವಾಗಿದೆ. ಬಿಜೆಪಿಯಲ್ಲಿ ಬಹುತೇಕ ಕಡೆ ಖಚಿತವಾಗದಿದ್ದರೂ ಸಚಿವ ಡಾ.ಕೆ. ಸುಧಾಕರ್ ಪ್ರಭಾವದಿಂದಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

    | ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

    ಡಾ.ಕೆ.ಸುಧಾಕರ್​ಗೆ ವರ್ಚಸ್ಸಿನ ಬಲ

    ಚಿಕ್ಕಬಳ್ಳಾಪುರದಲ್ಲಿ ಯಾರ ದೊಡ್ಡಸ್ತಿಕೆ?: ಕಾಂಗ್ರೆಸ್​ಗೆ ಭದ್ರಕೋಟೆ ಸುಭದ್ರತೆ ತವಕ, ಕಮಲಕ್ಕೆ ಕ್ಷೇತ್ರ ವಿಸ್ತಾರದ ಹಂಬಲಚಿಕ್ಕಬಳ್ಳಾಪುರದಲ್ಲಿ ವಿಧಾನಸಭಾ ಚುನಾವಣೆ ಇತಿಹಾಸದಲ್ಲೇ ಕಳೆದ ಉಪಚುನಾವಣೆಯಲ್ಲಿ ಮೊದಲ ಬಾರಿಕಮಲ ಅರಳಿದೆ. ಕಾಂಗ್ರೆಸ್​ನಿಂದ ಸತತ 2 ಬಾರಿ ಗೆಲುವು ಸಾಧಿಸಿದ್ದ ಡಾ.ಕೆ.ಸುಧಾಕರ್ ರಾಜೀನಾಮೆ ನೀಡಿ, ಬಿಜೆಪಿ ಅಪ್ಪಿಕೊಂಡು ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ. ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಹೇಗಾದರೂ ಮಾಡಿ ಮತ್ತೆ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಬೇಕೆಂಬುದು ಕೈ ನಾಯಕರ ಹಂಬಲ. ಇದಕ್ಕೆ ಸಚಿವರನ್ನು ಎದುರಿಸಲು ಸ್ಥಳೀಯರ ಬದಲಿಗೆ ಪ್ರಬಲ ನಾಯಕರನ್ನು ಕರೆ ತರಲು ಯತ್ನಿಸುತ್ತಿದ್ದಾರೆ. ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ, ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾರಾಮಯ್ಯಗೆ ಸ್ಪರ್ಧಿಸಲು ಒತ್ತಡ ಹೇರಲಾಗುತ್ತಿದ್ದರೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇದರ ನಡುವೆ ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ಎಂ.ಆಂಜಿನಪ್ಪ, ಯಲುವಹಳ್ಳಿ ಎನ್.ರಮೇಶ್ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಮತ್ತೊಂದೆಡೆ ಸ್ಪರ್ಧೆಗೆ ಇಷ್ಟವಿಲ್ಲದಿದ್ದರೂ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧ ಎನ್ನುತ್ತ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ.

    ಬಾಗೇಪಲ್ಲಿ ಮೇಲೆ ಬಿಜೆಪಿ ಕಣ್ಣು

    ಚಿಕ್ಕಬಳ್ಳಾಪುರದಲ್ಲಿ ಯಾರ ದೊಡ್ಡಸ್ತಿಕೆ?: ಕಾಂಗ್ರೆಸ್​ಗೆ ಭದ್ರಕೋಟೆ ಸುಭದ್ರತೆ ತವಕ, ಕಮಲಕ್ಕೆ ಕ್ಷೇತ್ರ ವಿಸ್ತಾರದ ಹಂಬಲಸಮಾಜ ಸೇವೆಯಿಂದ ಸತತ ಎರಡು ಬಾರಿ ಗೆದ್ದು ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಮಾಜಿ ಶಾಸಕ ಎನ್.ಸಂಪಂಗಿ ಪೈಪೋಟಿಯ ತಲೆನೋವು ನಿವಾರಣೆಯಾಗಬೇಕಾಗಿದೆ. ಸಿಪಿಎಂ ಪ್ರಾಬಲ್ಯದೊಂದಿಗೆ ಗಮನ ಸೆಳೆಯುತ್ತಿರುವ ಕ್ಷೇತ್ರದಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅಗಲಿಕೆ ಬಳಿಕ ದುರ್ಬಲಗೊಂಡಿರುವ ಪಕ್ಷದ ಸಂಘಟನೆಯಲ್ಲಿ ಹಿಡಿತ ಸಾಧಿಸಿ, ಮತ್ತೆ ಗತ ವೈಭವಕ್ಕೆ ತರುವ ಹೊಣೆ ಕೆಂಪು ಸೇನಾನಿಗಳಿಗೆ ಸವಾಲಾಗಿದೆ. ಅಭ್ಯರ್ಥಿಗಳಾಗಿ ವೈದ್ಯ ಅನಿಲ್ ಕುಮಾರ್, ಹೋರಾಟಗಾರ ಪಿ.ಮಂಜುನಾಥ್ ರೆಡ್ಡಿ ಹೆಸರು ಕೇಳಿ ಬರುತ್ತಿದೆ. ಈ ಮಧ್ಯೆ ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು ಬಿದ್ದಿದೆ. ಬೆಂಗಳೂರು ಉಪವರ್ತಲ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರಾಮಲಿಂಗಪ್ಪ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಜೆ.ನಾಗರಾಜ್ ರೆಡ್ಡಿ ಹೆಸರು ಘೊಷಣೆಯಾಗಿದ್ದರೂ ಒಕ್ಕಲಿಗರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಕೋನಪರೆಡ್ಡಿ ಟಿಕೆಟ್​ಗಾಗಿ ಕಸರತ್ತು ನಡೆಸುತ್ತಿದ್ದಾರೆ.

    ಗೌರಿಬಿದನೂರಿನಲ್ಲಿ ಗುದ್ದಾಟ ಜೋರು

    ಚಿಕ್ಕಬಳ್ಳಾಪುರದಲ್ಲಿ ಯಾರ ದೊಡ್ಡಸ್ತಿಕೆ?: ಕಾಂಗ್ರೆಸ್​ಗೆ ಭದ್ರಕೋಟೆ ಸುಭದ್ರತೆ ತವಕ, ಕಮಲಕ್ಕೆ ಕ್ಷೇತ್ರ ವಿಸ್ತಾರದ ಹಂಬಲಕಾಂಗ್ರೆಸ್​ನ ಭದ್ರಕೋಟೆ ಗೌರಿಬಿದನೂರು ಕ್ಷೇತ್ರದಲ್ಲಿ 5 ಬಾರಿ ಸತತ ಗೆಲುವು ಸಾಧಿಸಿದ ಹಾಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮತ್ತೊಮ್ಮೆ ಕಣಕ್ಕಿಳಿಯುವುದು ಖಚಿತ. ಚುನಾವಣೆ ದೃಷ್ಟಿಯಲ್ಲಿ ಉಚಿತ ಕೊಡುಗೆಗಳ ಮೂಲಕ ಗಮನ ಸೆಳೆಯುತ್ತಿರುವ ಸಮಾಜ ಸೇವಕರ ಪೈಪೋಟಿಯು ಕೈ ಪಾಳಯಕ್ಕೆ ತಲೆನೋವಾಗಿದೆ. ಸ್ವಪಕ್ಷೀಯ ಅತೃಪ್ತ ಮುಖಂಡರು ಉದ್ಯಮಿ ಪುಟ್ಟಸ್ವಾಮಿಗೌಡರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ಸಮಾಜಸೇವೆಯ ಮೂಲಕ ಜಿಪಂ ಮಾಜಿ ಸದಸ್ಯ ಕೆ.ಕೆಂಪರಾಜು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಕಳೆದ ಬಾರಿ ಪರಾಭವಗೊಂಡಿದ್ದ ಸಿ.ಆರ್. ನರಸಿಂಹಮೂರ್ತಿ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಇದರ ನಡುವೆ ಬಿಜೆಪಿ ನಾಯಕರು ವೈದ್ಯ ಡಾ.ಶಶಿಧರ್ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಜತೆಗೆ ಪಕ್ಷೇತರರ ಪೈಪೋಟಿಯೂ ತೀವ್ರವಾಗಿದೆ.

    ಚಿಂತಾಮಣಿ ಸುಧಾಕರ್​ಗೆ ಘಟಬಂಧನ್ ಬಲ

    ಚಿಕ್ಕಬಳ್ಳಾಪುರದಲ್ಲಿ ಯಾರ ದೊಡ್ಡಸ್ತಿಕೆ?: ಕಾಂಗ್ರೆಸ್​ಗೆ ಭದ್ರಕೋಟೆ ಸುಭದ್ರತೆ ತವಕ, ಕಮಲಕ್ಕೆ ಕ್ಷೇತ್ರ ವಿಸ್ತಾರದ ಹಂಬಲರಾಯಲಸೀಮಾ ಮಾದರಿಯಲ್ಲಿ ಹಣಾಹಣಿಗೆ ಹೆಸರಾಗಿರುವ ಚಿಂತಾಮಣಿ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ ಎಂ.ಸಿ.ಸುಧಾಕರ್ ಕಾಂಗ್ರೆಸ್ ಅಭ್ಯರ್ಥಿ. ಈ ಹಿಂದೆ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಮುನಿಸಿಕೊಂಡು ಪಕ್ಷದಿಂದ ಹೊರ ಹೋಗಿದ್ದರು. ಇದೀಗ ಕೋಲಾರದ ಘಟಬಂಧನ್ ನಾಯಕ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಕೈ ಪಾಳಯಕ್ಕೆ ಬಂದಿದ್ದಾರೆ. ಸತತ ಎರಡು ಬಾರಿ ಗೆಲುವು ಸಾಧಿಸಿರುವ ಹಾಲಿ ಶಾಸಕ ಎಂ.ಕೃಷ್ಣಾರೆಡ್ಡಿ ಜೆಡಿಎಸ್​ನಿಂದ ಸ್ಪರ್ಧಿಸುವುದು ಖಚಿತವಾಗಿದೆ. ಬಿಜೆಪಿಗೆ ಅಭ್ಯರ್ಥಿ ವಿಚಾರದಲ್ಲಿ ಖಚಿತತೆ ಇಲ್ಲ. ಹೊರ ಭಾಗದವರನ್ನು ಕರೆ ತರುವ ಲೆಕ್ಕಾಚಾರ ನಾಯಕರದ್ದಾಗಿದೆ.

    ಮುನಿಯಪ್ಪ ನಿವೃತ್ತಿ ಜಪ, ಸ್ಪರ್ಧೆಯ ಇಂಗಿತ

    ಚಿಕ್ಕಬಳ್ಳಾಪುರದಲ್ಲಿ ಯಾರ ದೊಡ್ಡಸ್ತಿಕೆ?: ಕಾಂಗ್ರೆಸ್​ಗೆ ಭದ್ರಕೋಟೆ ಸುಭದ್ರತೆ ತವಕ, ಕಮಲಕ್ಕೆ ಕ್ಷೇತ್ರ ವಿಸ್ತಾರದ ಹಂಬಲಶಿಡ್ಲಘಟ್ಟದಲ್ಲಿ 6 ಬಾರಿ ಆಯ್ಕೆಯಾಗಿರುವ ಮಾಜಿ ಸಚಿವ ವಿ.ಮುನಿಯಪ್ಪ ಚುನಾವಣಾ ನಿವೃತ್ತಿ ಬಯಸಿದ್ದಾರೆ. ಆದರೆ, ನಾಯಕತ್ವವನ್ನು ಅನ್ಯರಿಗೆ ಬಿಟ್ಟು ಕೊಡಲು ಬಯಸುತ್ತಿಲ್ಲ. ಈ ಬಾರಿ ಕೊನೇ ಸ್ಪರ್ಧೆ ಇಲ್ಲವೇ ಪುತ್ರ ಶಶಿಧರ್​ಗೆ ಟಿಕೆಟ್ ಕೊಡಿಸುವ ಯತ್ನದಲ್ಲಿದ್ದಾರೆ. ಇದರ ನಡುವೆ ಸಮಾಜ ಸೇವಕರಾದ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ ಪಕ್ಷದ ವರಿಷ್ಠರ ಕೃಪಾಕಟಾಕ್ಷ ಬಯಸಿ ಶಕ್ತಿ ಪ್ರದರ್ಶಿಸಿ, ಸಂಘಟನೆಯಲ್ಲಿ ತೊಡಗಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ಸ್ಪರ್ಧೆ ಖಚಿತ. ಬಿಜೆಪಿಗೆ ಮಾಜಿ ಶಾಸಕ ಎಂ.ರಾಜಣ್ಣ (ಜೆಡಿಎಸ್​ನಿಂದ ಸೇರ್ಪಡೆ) ಹೆಸರು ಹೇಳಲಾಗುತ್ತಿದೆಯಾದರೂ ಸ್ವಪಕ್ಷೀಯರು ಮೂಲ ಮತ್ತು ವಲಸಿಗ ಮುನಿಸಿನಲ್ಲಿ ಹೊರ ಭಾಗದವರನ್ನು ಕಣಕ್ಕಿಳಿಸುವ ಯೋಜನೆ ಹೊಂದಿದ್ದಾರೆ. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಡಿ.ಎನ್.ದೇವರಾಜ್ ಹೆಸರು ಕೇಳಿ ಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts