More

    ಬಂಧನ ಭಯ…ಪರಾರಿಯಾದ ಗೋತಬಯ! ಇಂದು ಬೆಳಗ್ಗೆಯೇ ವಿಮಾನದಲ್ಲಿ ಲಂಕಾ ಅಧ್ಯಕ್ಷರು ಹಾರಿದ್ದೆಲ್ಲಿಗೆ?

    ಕೊಲಂಬೊ: ಜನಾಕ್ರೋಶ ಮತ್ತು ಬಂಧನದ ಸಾಧ್ಯತೆಯಿಂದ ಪಾರಾಗಲು ಅಧ್ಯಕ್ಷ ಹುದ್ದೆಯಲ್ಲಿ ಇರುವಾಗಲೇ ಗೋತಬಯ ರಾಜಪಕ್ಸ ಅವರು ದೇಶ ಬಿಟ್ಟು ಹಾರಿದ್ದಾರೆ. ಈ ವಾರಾಂತ್ಯದಲ್ಲಿ ರಾಜೀನಾಮೆ ನೀಡುವ ಭರವಸೆ ನೀಡಿದ್ದ ಗೋತಬಯ ಅವರು ಇದೀಗ ಇಡೀ ದೇಶದ ಕಣ್ತಪ್ಪಿಸಿ ಬುಧವಾರ ಮುಂಜಾನೆಯೇ ಸೇನಾ ವಿಮಾನದಲ್ಲಿ ನೆರೆಯ ದೇಶಕ್ಕೆ ಹಾರಿದ್ದಾರೆ ಎಂದು ತಿಳಿದುಬಂದಿದೆ.

    ದ್ವೀಪ ರಾಷ್ಟ್ರ ಶ್ರೀಲಂಕಾ ಹಿಂದೆಂದೂ ಕಾಣದಂತಹ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಕೊಳ್ಳಲಾರದಷ್ಟು ಗಗನಕ್ಕೇರಿದೆ. ಇಂಧನ ಪಡೆಯಲು ವಾರಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಹ ಅರಾಜಕತೆ ಲಂಕಾದಲ್ಲಿ ನಿರ್ಮಾಣವಾಗಿದ್ದು, ಇದರಿಂದ ರೊಚ್ಚಿಗೆದ್ದಿರುವ ಲಂಕಾ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪ್ರಧಾನಿ ರೆನಿಲ್​ ವಿಕ್ರಮಸಿಂಘೆ ನಿವಾಸಕ್ಕೆ ಬೆಂಕಿಯಿಟ್ಟಿರುವ ಪ್ರತಿಭಟನಾಕಾರರು ಅಧ್ಯಕ್ಷ ಗೋತಬಯ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ, ಅಲ್ಲಿಯೆ ಬೀಡು ಬಿಟ್ಟಿದ್ದಾರೆ.

    ಜನರು ಆಕ್ರೋಶವನ್ನು ಕಂಡು ಗೋತಬಯ ಅವರು ನಿವಾಸ ತೊರೆಯ ನೌಕಾ ನೆಲೆಯಲ್ಲಿ ಅಡಗಿಕೊಂಡಿದ್ದರು. ಅಲ್ಲದೆ, ಜನರ ಒತ್ತಾಯದ ಮೇರೆಗೆ ಈ ವಾರಾಂತ್ಯದಲ್ಲಿ ರಾಜೀನಾಮೆ ನೀಡುವ ಮೂಲಕ ಶಾಂತಿಯುತವಾಗಿ ಅಧಿಕಾರವನ್ನು ಹಸ್ತಾಂತರ ಮಾಡುವ ಭರವಸೆಯನ್ನು ನೀಡಿದ್ದ ಗೋತಬಯ ಇದೀಗ ಅಧಿಕಾರದಲ್ಲಿ ಇರುವಾಗಲೇ ದೇಶವನ್ನು ತೊರೆದಿದ್ದಾರೆ.

    ಅಧಿಕಾರದಿಂದ ಕೆಳಗಿಳಿಯುವ ಮುನ್ನ ಬಂಧನದಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಗೋತಬಯ ರಾಜೀನಾಮೆ ಬೆನ್ನಲ್ಲೇ ಅವರ ಬಂಧನ ಸಾಧ್ಯತೆ ಇತ್ತು. ತಮ್ಮ ಪತ್ನಿ, ಓರ್ವ ಬಾಡಿಗಾರ್ಡ್​ ಹಾಗೂ ನಾಲ್ವರು ಪ್ರಯಾಣಿಕರ ಜೊತೆ ಗೋತಬಯ ಅವರು ಅಂಟನೋವಾ-32 ಮಿಲಿಟರಿ ಏರ್​ಕ್ರಾಫ್ಟ್​ ಮೂಲಕ ಕೊಲಂಬೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೆರೆಯ ಮಾಲ್ಡೀವ್ಸ್​ಗೆ ಹಾರಿದ್ದಾರೆ ಎಂದು ವಲಸೆ ಮೂಲಗಳು ತಿಳಿಸಿವೆ.

    ಗೋತಬಯ ಅವರ ಪಾಸ್‌ಪೋರ್ಟ್‌ಗಳನ್ನು ಸ್ಟ್ಯಾಂಪ್ ಮಾಡಲಾಗಿದೆ ಮತ್ತು ಅವರು ವಿಶೇಷ ವಾಯುಪಡೆಯ ವಿಮಾನವನ್ನು ಏರಿದರು” ಎಂದು ವಲಸೆ ಪ್ರಕ್ರಿಯೆಯಲ್ಲಿ ತೊಡಗಿರುವ ವಲಸೆ ಅಧಿಕಾರಿಯೊಬ್ಬರು ಎಎಫ್​ಪಿಗೆ ತಿಳಿಸಿದರು.

    ಸೋಮವಾರ ಸಂಜೆಯೇ ಗೋತಬಯ ಅವರು ವಾಣಿಜ್ಯ ವಿಮಾನದಲ್ಲಿ ದುಬೈಗೆ ಹಾರಲು ಬಯಸಿದ್ದರು. ಆದರೆ, ಬಂಡಾರನಾಯಕೆ ಇಂಟರ್‌ನ್ಯಾಶನಲ್‌ನ ಏರ್​ಪೋರ್ಟ್​ನ ಸಿಬ್ಬಂದಿ ವಿಐಪಿ ಸೇವೆಗಳನ್ನು ಹಿಂತೆಗೆದುಕೊಂಡರು ಮತ್ತು ಎಲ್ಲಾ ಪ್ರಯಾಣಿಕರು ಸಾರ್ವಜನಿಕ ಕೌಂಟರ್‌ಗಳ ಮೂಲಕ ಹೋಗಬೇಕೆಂದು ಒತ್ತಾಯಿಸಿದರು. ಆದರೆ, ಸಾರ್ವಜನಿಕರ ಆಕ್ರೋಶಕ್ಕೆ ಹೆದರಿದ್ದ ಗೋತಬಯಾ ಪ್ರಶ್ನೆಗಳಿಗೆ ಉತ್ತರಿಸಲು ಆಗುವುದಿಲ್ಲ ಎಂದು ವಾಣಿಜ್ಯ ವಿಮಾನದಲ್ಲಿ ತೆರಳಲು ಹಿಂದೇಟು ಹಾಕಿದರು. ಮಂಗಳವಾರ ಒಂದು ಹಂತದಲ್ಲಿ ಸಮುದ್ರದ ಮೂಲಕ ಪಲಾಯನ ಮಾಡಲು ಯತ್ನಿಸಿದರು. ಕೊನೆಗೆ ಸೇನಾ ವಿಮಾನ ಮೂಲಕ ಗೋತಬಯ ಅವರು ಮಾಲ್ಡೀವ್ಸ್​ಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.

    ಶ್ರೀಲಂಕಾದ ಮಾಜಿ ಹಣಕಾಸು ಸಚಿವ ಮತ್ತು ರಾಜಪಕ್ಸ ಸೋದರರ ಪೈಕಿ ಕಿರಿಯವರಾದ ಬಾಸಿಲ್ ರಾಜಪಕ್ಸಗೆ ದೇಶ ಬಿಟ್ಟು ಹೋಗದಂತೆ ತಡೆ ಒಡ್ಡಲಾಗಿದೆ. ವಿದೇಶಕ್ಕೆ ಹೋಗಲು ಕೊಲಂಬೊದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಟರ್ವಿುನಲ್​ಗೆ ಸೋಮವಾರ ಮಧ್ಯರಾತ್ರಿ ಬಂದ ಬಾಸಿಲ್​ರನ್ನು ತಡೆಯಲಾಯಿತು ಎಂದು ವಲಸೆ ಅಧಿಕಾರಿಗಳು ತಿಳಿಸಿದ್ದಾರೆ. ಲಂಕಾ ಪೌರತ್ವದ ಜತೆಗೆ ಅಮೆರಿಕದ ಪಾಸ್​ಪೋರ್ಟ್ ಹೊಂದಿರುವ ಬಾಸಿಲ್, ಬಿಜಿನೆಸ್ ಪ್ರವಾಸದ ಆಧಾರದ ಮೇಲೂ ದೇಶಬಿಡಲು ಪ್ರಯತ್ನ ಪಟ್ಟರು. ಆದರೆ, ದೇಶ ಬಿಕ್ಕಟ್ಟಿನಲ್ಲಿರುವುದರಿಂದ ವಿಐಪಿ ಕ್ಲಿಯರೆನ್ಸ್ (ಸಿಲ್ಕ್ ರೂಟ್) ಚಟುವಟಿಕೆಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿದಿರುವ ಕಾರಣ ಅನುಮತಿ ಸಿಗುವುದಿಲ್ಲ ಎಂಬ ಉತ್ತರ ಬಾಸಿಲ್​ಗೆ ಸಿಕ್ಕಿತ್ತು. ನಂತರ ಅವರು ಸಾಮಾನ್ಯ ಪ್ರಯಾಣಿಕರ ಸಾಲಿಗೆ ಬಂದು ಎಮಿರೇಟ್ಸ್ ಸಂಸ್ಥೆಯ ವಿಮಾನದಲ್ಲಿ ಹೋಗಲು ಪ್ರಯತ್ನ ಮಾಡಿದರು. ಆದರೆ, ಅಲ್ಲೂ ಅವರ ಪ್ರಯತ್ನ ಕೈಗೂಡಲಿಲ್ಲ. ಹೀಗಾಗಿ ನಸುಕಿನ 3.15ರವರ ವೇಳೆಗೆ ವಿಮಾನ ನಿಲ್ದಾಣದಿಂದ ವಾಪಸು ತೆರಳಿದರು ಎಂದು ಮೂಲಗಳು ತಿಳಿಸಿವೆ.

    ಲಂಕಾ ಬಿಕ್ಕಟ್ಟಿನ ಹಿನ್ನೋಟ
    * ಮಾರ್ಚ್ ಕಡೆಯ ವಾರದಲ್ಲಿ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ಆರಂಭ.
    * ಏಪ್ರಿಲ್ 3- ಸಂಪುಟ ವಿಸರ್ಜನೆ, ಮಹಿಂದ ಪ್ರಧಾನಿಯಾಗಿ ಮುಂದುವರಿಕೆ
    * ಏಪ್ರಿಲ್ 9- ಪ್ರಧಾನಿ ಕಾರ್ಯಾಲಯದ ಮುಂದೆ ತೀವ್ರಗೊಂಡ ಪ್ರತಿಭಟನೆ
    * ಏಪ್ರಿಲ್ 4- ಹಣಕಾಸು ಸಚಿವ ಸ್ಥಾನದಿಂದ ಬಾಸಿಲ್ ವಜಾ, ಇಡೀ ಸಚಿವ ಸಂಪುಟ ರಾಜೀನಾಮೆ
    * ಮೇ 9- ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡ ಕಾರಣ ಪ್ರಧಾನಿ ಸ್ಥಾನಕ್ಕೆ ಮಹಿಂದ ರಾಜೀನಾಮೆ
    * ಮೇ 12- ವಿರೋಧ ಪಕ್ಷದ ನಾಯಕ ರನಿಲ್ ವಿಕ್ರಮಸಿಂಘ ಪ್ರಧಾನಿಯಾಗಿ ಪ್ರಮಾಣ, ಮಧ್ಯಂತರ ಸರ್ಕಾರ ರಚನೆ
    * ಜೂನ್ 9- ಸಂಸದ ಸ್ಥಾನಕ್ಕೆ ಬಾಸಿಲ್ ರಾಜೀನಾಮೆ
    * ಜುಲೈ 9- ನಾಗರಿಕ ದಂಗೆ, ಅಧ್ಯಕ್ಷರ ಅರಮನೆಗೆ ನುಗ್ಗಿದ ಜನರು. ಗೋತಬಯ ಅಜ್ಞಾತ ಸ್ಥಳಕ್ಕೆ ಪಲಾಯನ.

    ಸಶಕ್ತ ಗಂಡನಿಗೆ ಹೆಂಡತಿ ಜೀವನಾಂಶ ಕೊಡಬೇಕಿಲ್ಲ: ಮೇಲ್ಮನವಿ ವಜಾ ಮಾಡಿದ ಹೈಕೋರ್ಟ್..

    13 ಶತಕೋಟಿ ವರ್ಷದ ಹಿಂದಿನ ನಕ್ಷತ್ರಪುಂಜ; ಚಿತ್ರ ರವಾನಿಸಿದ ಜೇಮ್ಸ್​ ವೆಬ್​ಟೆಲಿಸ್ಕೋಪ್

    ಚಿತ್ರನಟನ ಮೇಲೆ ಗುಂಡಿನ ದಾಳಿ; ಬೈಕ್​ನಲ್ಲಿ ಬಂದ ಇಬ್ಬರಿಂದ ದುಷ್ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts