More

    ಸಿಡ್ನಿ ಟೆಸ್ಟ್‌ಗೆ ರೋಹಿತ್ ಬಲ ತುಂಬುವ ನಿರೀಕ್ಷೆ; ಮಯಾಂಕ್, ವಿಹಾರಿಗೆ ಕೊಕ್ ಸಾಧ್ಯತೆ

    ಮೆಲ್ಬೋರ್ನ್: ಭಾರತ ತಂಡ ಮೊದಲ ಮೆಲ್ಬೋರ್ನ್‌ನಲ್ಲಿ ಐವರು ಬೌಲರ್‌ಗಳ ಕಾರ್ಯತಂತ್ರ ಅನುಸರಿಸಿ ಭರ್ಜರಿ ಯಶಸ್ಸನ್ನೇ ಕಂಡಿದೆ. ಆದರೆ ಬ್ಯಾಟಿಂಗ್ ವಿಭಾಗದ ತಲೆನೋವು ಹಾಗೆಯೇ ಉಳಿದುಕೊಂಡಿದೆ. ಹೀಗಾಗಿ ಸಿಡ್ನಿಯ 3ನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮ ಜತೆಗೆ ಕನ್ನಡಿಗ ಕೆಎಲ್ ರಾಹುಲ್ ಅವರನ್ನೂ ಸೇರ್ಪಡೆಗೊಳಿಸಿ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳುವ ನಿರೀಕ್ಷೆ ಇದೆ.

    ರೋಹಿತ್ ಕಳೆದ ವರ್ಷದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಿಂದ ಟೆಸ್ಟ್‌ನಲ್ಲೂ ಆರಂಭಿಕರಾಗಿ ಆಡುತ್ತಿದ್ದಾರೆ. ಆದರೆ ಈ ಬಾರಿ ರೋಹಿತ್ ಮ್ಯಾಚ್ ಪ್ರ್ಯಾಕ್ಟೀಸ್ ಕೊರತೆ ಎದುರಿಸುತ್ತಿರುವುದರಿಂದ ಆರಂಭಿಕನ ಬದಲಾಗಿ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯೂ ಇದೆ. ಇದೆಲ್ಲದರ ನಡುವೆ 2 ವಾರಗಳ ಕ್ವಾರಂಟೈನ್ ಬಳಿಕ ರೋಹಿತ್ ದೈಹಿಕ ಕ್ಷಮತೆ ಹೇಗಿದೆ ಎಂಬುದನ್ನು ಪರಿಶೀಲಿಸಿದ ಬಳಿಕವೇ ಆಡಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೋಚ್ ರವಿಶಾಸಿ ಈಗಾಗಲೆ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಐಪಿಎಲ್ ಆಡಿದಲ್ಲಿಗೆ ಹನಿಮೂನ್‌ಗೆ ಹೋದ ಯಜುವೇಂದ್ರ ಚಾಹಲ್

    ಉಮೇಶ್ ಬದಲಿಗೆ ನಟರಾಜನ್?
    ಮೆಲ್ಬೋರ್ನ್ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿರುವ ವೇಗಿ ಉಮೇಶ್ ಯಾದವ್ ಬದಲಿಗೆ ಎಡಗೈ ವೇಗಿ ಟಿ. ನಟರಾಜನ್ ಭಾರತ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಈಗಾಗಲೆ ಆಸೀಸ್ ನೆಲದಲ್ಲಿ ಏಕದಿನ, ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಮಿಂಚಿರುವ ನಟರಾಜನ್, ಸದ್ಯ ನೆಟ್ ಬೌಲರ್ ಆಗಿ ಟೆಸ್ಟ್ ತಂಡದ ಜತೆಗಿದ್ದಾರೆ. ಮೊಹಮದ್ ಶಮಿ ಗಾಯಗೊಂಡಾಗ ಶಾರ್ದೂಲ್ ಠಾಕೂರ್ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಂಡಿದ್ದರೆ, ಮತ್ತೋರ್ವ ವೇಗಿ ನವದೀಪ್ ಸೈನಿ ಕೂಡ ತಂಡದಲ್ಲಿದ್ದಾರೆ. ಆದರೆ ನಟರಾಜನ್ ಎಡಗೈ ವೇಗಿಯಾಗಿರುವುದರಿಂದ ಬೌಲಿಂಗ್ ವಿಭಾಗಕ್ಕೆ ವೈವಿಧ್ಯತೆ ತರುವ ದೃಷ್ಟಿಯಿಂದ ನಟರಾಜನ್ 3ನೇ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆಯಬಹುದು ಎನ್ನಲಾಗಿದೆ.

    ಮಯಾಂಕ್, ವಿಹಾರಿಗೆ ಕೊಕ್?
    ಯುವ ಬ್ಯಾಟ್ಸ್‌ಮನ್ ಶುಭಮಾನ್ ಗಿಲ್ ಪದಾರ್ಪಣೆಯ ಟೆಸ್ಟ್‌ನಲ್ಲೇ ಮಿಂಚಿದ್ದಾರೆ. ಹೀಗಾಗಿ ರೋಹಿತ್ ಶರ್ಮ ಆರಂಭಿಕರಾಗಿ ತಂಡಕ್ಕೆ ಮರಳಿದರೆ ಕನ್ನಡಿಗ ಮಯಾಂಕ್ ಅಗರ್ವಾಲ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಒಂದು ವೇಳೆ ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ಆಡಿದರೆ ಹನುಮ ವಿಹಾರಿ ಹೊರಗುಳಿಯಬೇಕಾಗುತ್ತದೆ. ಕೆಎಲ್ ರಾಹುಲ್ ಕೂಡ ತಂಡಕ್ಕೆ ಸೇರ್ಪಡೆಗೊಂಡರೆ ಆಗ ಮಯಾಂಕ್, ವಿಹಾರಿ ಇಬ್ಬರೂ ಹೊರಗುಳಿಯಬೇಕಾಗುತ್ತದೆ. ಮಯಾಂಕ್ ಸರಣಿಯ 4 ಇನಿಂಗ್ಸ್‌ಗಳಲ್ಲಿ 1 ಬಾರಿ ಮಾತ್ರ ಎರಡಂಕಿ ಗಳಿಸಿದ್ದಾರೆ. 2018ರಲ್ಲಿ ಆಸೀಸ್‌ನಲ್ಲೇ ಪದಾರ್ಪಣೆಯ ಸರಣಿಯಲ್ಲಿ ತೋರಿದ ದಿಟ್ಟ ಆಟವನ್ನು ಅವರು ಈ ಬಾರಿ ಮರುಕಳಿಸಲು ವಿಫಲರಾಗಿದ್ದಾರೆ. ವಿಹಾರಿ ಕೂಡ ಸರಣಿಯ 3 ಇನಿಂಗ್ಸ್‌ಗಳಲ್ಲಿ ಒಟ್ಟು 45 ರನ್ ಮಾತ್ರ ಗಳಿಸಿದ್ದು, ಅರೆಕಾಲಿಕ ಬೌಲರ್ ಆಗಿಯೂ ತಂಡಕ್ಕೆ ಇದುವರೆಗೆ ಉಪಯೋಗಕ್ಕೆ ಬಂದಿಲ್ಲ. ಭರ್ಜರಿ ಫಾರ್ಮ್‌ನಲ್ಲಿರುವ ರಾಹುಲ್ ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಎರಡೂ ಸ್ಥಾನಗಳಿಗೆ ಅರ್ಹರೆನಿಸಿದ್ದಾರೆ.

    ಇದನ್ನೂ ಓದಿ: ಬಿಜೆಪಿಗೆ ಸೇರ್ಪಡೆಗೊಂಡ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್

    ಸಿಡ್ನಿ ಟೆಸ್ಟ್ ಲೆಕ್ಕಾಚಾರ:
    ಇನ್: ರೋಹಿತ್ ಶರ್ಮ, ಕೆಎಲ್ ರಾಹುಲ್, ಟಿ. ನಟರಾಜನ್.
    ಔಟ್: ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ಉಮೇಶ್ ಯಾದವ್.

    ತಂಡ ಕೂಡಿಕೊಂಡ ರೋಹಿತ್
    ಸಿಡ್ನಿಯಲ್ಲಿ ಕ್ವಾರಂಟೈನ್ ಮುಗಿಸಿರುವ ರೋಹಿತ್ ಶರ್ಮ ಬುಧವಾರ ವಿಶೇಷ ವಿಮಾನದಲ್ಲಿ ತೆರಳಿ ಮೆಲ್ಬೋರ್ನ್‌ನಲ್ಲಿರುವ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಹೋಟೆಲ್‌ನಲ್ಲಿ ರೋಹಿತ್ ಸಹ-ಆಟಗಾರರನ್ನು ಕೂಡಿಕೊಂಡು ಕುಶಲೋಪರಿ ಮಾತನಾಡಿರುವ ವಿಡಿಯೋವನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಪ್ರಕಟಿಸಿದೆ.

    PHOTO | ನವವಿವಾಹಿತ ಚಾಹಲ್‌ಗೆ ದುಬೈನಲ್ಲಿ ಭರ್ಜರಿ ಔತಣ ನೀಡಿದ ಧೋನಿ ದಂಪತಿ

    ಯುವರಾಜ್ ಸಿಂಗ್ ಕ್ರಿಕೆಟ್‌ಗೆ ಮರಳದಂತೆ ತಡೆಯೊಡ್ಡಿದ ಬಿಸಿಸಿಐ

    ಮೆಲ್ಬೋರ್ನ್‌ನಲ್ಲಿ ಜಯದೊಂದಿಗೆ ಹಲವು ದಾಖಲೆಗಳನ್ನು ಬರೆದ ಟೀಮ್ ಇಂಡಿಯಾ

    ಎಂಎಸ್ ಧೋನಿ, ವಿರಾಟ್ ಕೊಹ್ಲಿ ಸಾಲಿಗೆ ಸೇರ್ಪಡೆಗೊಂಡ ರವೀಂದ್ರ ಜಡೇಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts