More

    ಮೆಲ್ಬೋರ್ನ್‌ನಲ್ಲಿ ಜಯದೊಂದಿಗೆ ಹಲವು ದಾಖಲೆಗಳನ್ನು ಬರೆದ ಟೀಮ್ ಇಂಡಿಯಾ

    ಮೆಲ್ಬೋರ್ನ್: ಅಡಿಲೇಡ್‌ನಲ್ಲಿ ಕೇವಲ 36 ರನ್‌ಗೆ ಕುಸಿದ ತಂಡ ಇದೇನಾ ಎಂದು ಅಚ್ಚರಿ ಪಡುವ ರೀತಿಯಲ್ಲಿ ಮೆಲ್ಬೋರ್ನ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾಕ್ಕೆ ತಿರುಗೇಟು ನೀಡಿರುವ ಭಾರತ ತಂಡ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಅಜಿಂಕ್ಯ ರಹಾನೆ ಅವರ ಪ್ರಬುದ್ಧ ನಾಯಕತ್ವ ಮತ್ತು ಯುವ ಆಟಗಾರರ ಅಪೂರ್ವ ನಿರ್ವಹಣೆಯ ಬಲದಿಂದ ಭಾರತ ತಂಡ 4 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಮೂರೂವರೆ ದಿನಗಳಲ್ಲೇ ಒಲಿಸಿಕೊಂಡು ಈ ಅಪೂರ್ವ ಜಯದೊಂದಿಗೆ ಭಾರತ ತಂಡ ಹಲವು ದಾಖಲೆಗಳನ್ನೂ ನಿರ್ಮಿಸಿತು. ಅದರ ಸಂಕ್ಷಿಪ್ತ ವಿವರ ಇಲ್ಲಿದೆ…

    ರಹಾನೆ ಶತಕಕ್ಕೆ ಸೋಲಿಲ್ಲ!
    ಅಜಿಂಕ್ಯ ರಹಾನೆ ಇದುವರೆಗೆ 12 ಶತಕ ಸಿಡಿಸಿರುವ ಟೆಸ್ಟ್ ಪಂದ್ಯಗಳಲ್ಲೂ ಭಾರತ ತಂಡ ಸೋಲು ಕಂಡಿಲ್ಲ. 9ರಲ್ಲಿ ಭಾರತ ಜಯಿಸಿದ್ದು, 3ರಲ್ಲಿ ಡ್ರಾಕ್ಕೆ ತೃಪ್ತಿಪಟ್ಟಿದೆ.

    ಇದನ್ನೂ ಓದಿ: ಆಸೀಸ್‌ಗೆ ತಿರುಗೇಟು, ಬಾಕ್ಸಿಂಗ್ ಡೇ ಟೆಸ್ಟ್ ಜಯಿಸಿದ ಭಾರತ ತಂಡ

    *4: ಭಾರತ ತಂಡ ಎಂಸಿಜಿಯಲ್ಲಿ 4ನೇ ಗೆಲುವು ದಾಖಲಿಸಿತು. ಇದು ಭಾರತ ತಂಡ ತವರಿನಿಂದ ಹೊರಗೆ ಅತಿಹೆಚ್ಚು ಟೆಸ್ಟ್ ಗೆದ್ದ ತಾಣವೆನಿಸಿದೆ. ಪೋರ್ಟ್‌ಆ್ ಸ್ಪೇನ್, ಕಿಂಗ್‌ಸ್ಟನ್ ಮತ್ತು ಕೊಲಂಬೊದ ಎಸ್‌ಎಸ್‌ಸಿ ಮೈದಾನದಲ್ಲಿ ಭಾರತ ತಲಾ 3 ಗೆಲುವು ದಾಖಲಿಸಿದೆ.

    *3: ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಭಾರತ ತಂಡ ಸತತ 3ನೇ ಟೆಸ್ಟ್‌ನಲ್ಲೂ ಗೆದ್ದು ಅಜೇಯ ದಾಖಲೆ ಉಳಿಸಿಕೊಂಡಿತು.

    *2: ಭಾರತ ತಂಡ ಎಂಸಿಜಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿತು. 2018ರಲ್ಲೂ ಭಾರತ ಜಯಿಸಿತ್ತು.

    *29: ಆಸ್ಟ್ರೇಲಿಯಾ ವಿರುದ್ಧದ 100ನೇ ಟೆಸ್ಟ್ ಪಂದ್ಯದಲ್ಲಿ ಭಾರತ 29ನೇ ಗೆಲುವು ಒಲಿಸಿಕೊಂಡಿತು. ಆಸೀಸ್ ನೆಲದ 50 ಟೆಸ್ಟ್‌ಗಳಲ್ಲಿ ಇದು 8ನೇ ಗೆಲುವಾಗಿದೆ.

    *10: ಭಾರತ ತಂಡ ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಟಾಸ್ ಸೋತ ಮತ್ತು ಮೊದಲು ಫೀಲ್ಡಿಂಗ್ ಮಾಡಿದ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿತು.

    *3: ಕಳೆದ 50 ವರ್ಷಗಳಲ್ಲಿ ಆಸೀಸ್ ನೆಲದಲ್ಲಿ ಮೊದಲ ಟೆಸ್ಟ್ ಸೋತ ಪ್ರವಾಸಿ ತಂಡ 2ನೇ ಟೆಸ್ಟ್‌ನಲ್ಲೇ ಗೆದ್ದು ತಿರುಗೇಟು ನೀಡಿದ 3ನೇ ದೃಷ್ಟಾಂತ ಇದಾಗಿದೆ. 1975-76ರಲ್ಲಿ ವೆಸ್ಟ್ ಇಂಡೀಸ್, 2011ರಲ್ಲಿ ನ್ಯೂಜಿಲೆಂಡ್ ಈ ಸಾಧನೆ ಮಾಡಿತ್ತು.

    *2: ಭಾರತ ತಂಡ ವಿದೇಶಿ ನೆಲದಲ್ಲಿ ಮೊದಲ ಟೆಸ್ಟ್ ಸೋತ ಬೆನ್ನಲ್ಲೇ 2ನೇ ಗೆದ್ದ 2ನೇ ದೃಷ್ಟಾಂತ ಇದಾಗಿದೆ. ಈ ಮುನ್ನ 2010-11ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ಸಾಧನೆ ಮಾಡಿತ್ತು.

    *2: ಭಾರತ ತಂಡ ಮೆಲ್ಬೋರ್ನ್‌ನಲ್ಲಿ 2ನೇ ಬಾರಿ ಸತತ 2 ಟೆಸ್ಟ್ ಜಯಿಸಿತು. ಈ ಮುನ್ನ 1977, 1980ರಲ್ಲಿ ಈ ಸಾಧನೆ ಮಾಡಿತ್ತು.

    *32: ಕಳೆದ 32 ವರ್ಷಗಳಲ್ಲಿ ತವರಿನಲ್ಲಿ ಆಸೀಸ್ ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಪಂದ್ಯದಲ್ಲಿ ಒಂದೂ ಅರ್ಧಶತಕ ದಾಖಲಿಸಲು ವಿಲರಾಗಿದ್ದು ಇದೇ ಮೊದಲಾಗಿದೆ.

    ಭಾರತಕ್ಕೆ 30 ಅಂಕ, ಫೈನಲ್ ಆಸೆಗೆ ಬಲ
    ಭಾರತ ತಂಡ ಜಯದೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) 30 ಅಂಕ ಕಲೆಹಾಕಿದೆ. ಇದರಿಂದ ಭಾರತದ ಒಟ್ಟು ಅಂಕ 390ಕ್ಕೆ ವತ್ತು ಶೇಕಡಾವಾರು ಅಂಕ 0.722ಕ್ಕೇರಿದೆ. ಆಸೀಸ್ ಶೇ. 0.766 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕಿವೀಸ್ ಶೇ. 0.625 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. ಡಬ್ಲ್ಯುಟಿಸಿಯಲ್ಲಿ ಭಾರತವಿನ್ನೂ 6 ಟೆಸ್ಟ್ ಆಡಬೇಕಾಗಿದ್ದು, ಅಗ್ರ 2 ತಂಡಗಳ ಪೈಕಿ ಒಂದಾಗಿ ಫೈನಲ್‌ಗೇರುವ ಆಸೆಗೆ ಬಲ ಬಂದಿದೆ.

    ರಹಾನೆ ಪಡೆಗೆ ಪ್ರಶಂಸೆ ಸುರಿಮಳೆ
    ಕೇವಲ 36 ರನ್‌ಗೆ ಕುಸಿದಿದ್ದ ತಂಡಕ್ಕೆ ಸ್ಫೂರ್ತಿಯುತ ಶತಕದ ಬಲ ತುಂಬಿ ಗೆಲುವಿನ ಹಾದಿಗೆ ತಂದ ನಾಯಕ ಅಜಿಂಕ್ಯ ರಹಾನೆ ಮತ್ತು ಉತ್ಸಾಹಿ ನಿರ್ವಹಣೆ ತೋರಿದ ಭಾರತ ತಂಡಕ್ಕೆ ಕ್ರಿಕೆಟ್ ವಲಯ ಮತ್ತು ಅಭಿಮಾನಿಗಳಿಂದ ಪ್ರಶಂಸೆಯ ಸುರಿಮಳೆಯಾಗಿದೆ. ನಾಯಕ ವಿರಾಟ್ ಕೊಹ್ಲಿ, ದಿಗ್ಗಜ ಸಚಿನ್ ತೆಂಡುಲ್ಕರ್, ಕಪಿಲ್ ದೇವ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಗೌತಮ್ ಗಂಭೀರ್, ರೋಹಿತ್ ಶರ್ಮ ಮತ್ತಿತರರು ಸಾಮಾಜಿಕ ಜಾಲತಾಣದಲ್ಲಿ ಭಾರತ ತಂಡವನ್ನು ಹೊಗಳಿದ್ದಾರೆ.

    *ಕೊಹ್ಲಿ, ರೋಹಿತ್, ಇಶಾಂತ್, ಶಮಿ ಅವರಿಲ್ಲದೆ ಟೆಸ್ಟ್ ಜಯಿಸಿದ್ದು ಅಮೋಘ ಸಾಧನೆ. ಮೊದಲ ಪಂದ್ಯದ ಸೋಲನ್ನು ಮರೆತು ಚೇತೋಹಾರಿ ನಿರ್ವಹಣೆ ತೋರಿದ್ದು ಇಷ್ಟವಾಯಿತು. ವೆಲ್ ಡನ್ ಟೀಮ್ ಇಂಡಿಯಾ.
    ಸಚಿನ್ ತೆಂಡುಲ್ಕರ್, ಕ್ರಿಕೆಟ್ ದಿಗ್ಗಜ

    *ಎಂಥಾ ಗೆಲುವಿದು. ನಿಜಕ್ಕೂ ಸಂಪೂರ್ಣ ತಂಡದ ಅಮೋಘ ಹೋರಾಟವಿದು. ಆಟಗಾರರ ಬಗ್ಗೆ ಅಪಾರ ಖುಷಿಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ, ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಜಿಂಕ್ಸ್ (ರಹಾನೆ) ಬಗ್ಗೆ. ಇನ್ನೂ ಮುಂದಕ್ಕೆ ಹೋಗಿ ಮತ್ತು ಮೇಲಕ್ಕೇರಿ.
    ವಿರಾಟ್ ಕೊಹ್ಲಿ

    *ತಂಡದ ಆಟಗಾರರ ಬಗ್ಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಗಿಲ್, ಸಿರಾಜ್ ಅವರಿಗೂ ಶ್ರೇಯ ಸಲ್ಲಬೇಕು. ಅಡಿಲೇಡ್‌ನಲ್ಲಿ ಒಂದು ಗಂಟೆಯ ಕೆಟ್ಟ ಆಟ ಪಂದ್ಯವನ್ನು ನಮ್ಮಿಂದ ಕಸಿಯಿತು. ಅದರಿಂದ ಸಾಕಷ್ಟು ಪಾಠ ಕಲಿತುಕೊಂಡೆವು.
    ಅಜಿಂಕ್ಯ ರಹಾನೆ, ಹಂಗಾಮಿ ನಾಯಕ

    *ರಹಾನೆ ಓರ್ವ ತೀಕ್ಷ್ಣ ನಾಯಕ. ಪಂದ್ಯವನ್ನು ಚೆನ್ನಾಗಿ ಗ್ರಹಿಸಬಲ್ಲವರು. ಅವರ ತಾಳ್ಮೆಯ ಮನೋಭಾವ ಪದಾರ್ಪಣೆ ಪಂದ್ಯವಾಡಿದವರಿಗೆ ಮತ್ತು ಬೌಲರ್‌ಗಳಿಗೆ ನೆರವಾಯಿತು. ಜಡೇಜಾ ಸೇರ್ಪಡೆಯಿಂದ ತಂಡ ಸಮತೋಲನ ಕಂಡುಕೊಂಡಿತು.
    ರವಿಶಾಸ್ತ್ರಿ, ಟೀಮ್ ಇಂಡಿಯಾ ಕೋಚ್

    *ನಾವು ಅತ್ಯಂತ ಕೆಟ್ಟ ಆಟವಾಡಿದೆವು. ಭಾರತಕ್ಕೆ ಶ್ರೇಯ ಸಲ್ಲಬೇಕು. ನಾವು ಬ್ಯಾಟ್, ಬಾಲ್ ಮತ್ತು ಫೀಲ್ಡಿಂಗ್‌ನಲ್ಲಿ ತಪ್ಪು ಮಾಡುವಂತೆ ಭಾರತ ಒತ್ತಡ ಹೇರಿತು. ನಾವು ಪ್ರಮುಖವಾಗಿ ಬ್ಯಾಟಿಂಗ್ ವಿಭಾಗದ ಸಮಸ್ಯೆ ಪರಿಹರಿಕೊಳ್ಳಬೇಕಾಗಿದೆ.
    ಟಿಮ್ ಪೇನ್, ಆಸೀಸ್ ನಾಯಕ

    ಸಿಡ್ನಿಯಲ್ಲೇ ಮೂರನೇ ಟೆಸ್ಟ್
    ಭಾರತ-ಆಸೀಸ್ ಸರಣಿಯ 3ನೇ ಟೆಸ್ಟ್ ಪಂದ್ಯ ಜನವರಿ 7ರಿಂದ ನಿಗದಿಯಂತೆಯೇ ಸಿಡ್ನಿಯಲ್ಲಿ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮಂಗಳವಾರ ಸ್ಪಷ್ಟಪಡಿಸಿದೆ. ಸಿಡ್ನಿಯಲ್ಲಿ ಕರೊನಾ ಪ್ರಕರಣಗಳ ಏರಿಕೆಯಿಂದಾಗಿ ಸಾಂಪ್ರದಾಯಿಕ ನ್ಯೂ ಇಯರ್ ಟೆಸ್ಟ್ ಈ ಬಾರಿ ಎಸ್‌ಸಿಜಿಯಲ್ಲಿ ನಡೆಯುವುದು ಅನುಮಾನವೆನಿಸಿತ್ತು ಮತ್ತು ಮೆಲ್ಬೋರ್ನ್‌ನಲ್ಲೇ ಸತತ 2ನೇ ಟೆಸ್ಟ್ ಆಯೋಜಿಸಲು ಸಿದ್ಧತೆಗಳೂ ನಡೆದಿದ್ದವು. ಜನವರಿ 15ರಿಂದ 4ನೇ ಹಾಗೂ ಅಂತಿಮ ಟೆಸ್ಟ್ ನಡೆಯಲಿರುವ ಬ್ರಿಸ್ಬೇನ್‌ನಲ್ಲಿ (ಕ್ವೀನ್ಸ್‌ಲ್ಯಾಂಡ್) ಸಿಡ್ನಿ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ನಿರ್ಬಂಧಗಳಿರುವ ನಡುವೆಯೂ ಸಿಎ, ಹಾಲಿ ವೇಳಾಪಟ್ಟಿಯಂತೆಯೇ ಪಂದ್ಯಗಳು ನಡೆಯಲಿವೆ ಎಂದಿದೆ.

    PHOTO | ನವವಿವಾಹಿತ ಚಾಹಲ್‌ಗೆ ದುಬೈನಲ್ಲಿ ಭರ್ಜರಿ ಔತಣ ನೀಡಿದ ಧೋನಿ ದಂಪತಿ

    ಯುವರಾಜ್ ಸಿಂಗ್ ಕ್ರಿಕೆಟ್‌ಗೆ ಮರಳದಂತೆ ತಡೆಯೊಡ್ಡಿದ ಬಿಸಿಸಿಐ

    ರನೌಟ್ ಆದ ಬಳಿಕ ಅಜಿಂಕ್ಯ ರಹಾನೆ ತೋರಿದ ವರ್ತನೆಗೆ ಕ್ರಿಕೆಟ್ ಪ್ರೇಮಿಗಳ ಪ್ರಶಂಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts