More

    ತಹಸೀಲ್ದಾರ್ ವಿರುದ್ಧ ಪ್ರತಿಭಟನೆ ; 40 ವರ್ಷಗಳಿಂದ ಗೋಮಾಳ ಅನುಭವಿಸಿದವರಿಗೆ ಅನ್ಯಾಯ

    ತುಮಕೂರು : 40 ವರ್ಷಗಳಿಂದ ಸರ್ಕಾರಿ ಗೋಮಾಳದಲ್ಲಿ ಉಳುಮೆ ಮಾಡಿ ಬದುಕಟ್ಟಿಕೊಂಡಿದ್ದ ಕುಟುಂಬವನ್ನು ಒಕ್ಕಲೆಬ್ಬಿಸಿ, ಈ ಜಾಗವನ್ನು ಶ್ರೀಮಂತ ಕುಟುಂಬಕ್ಕೆ ಸಾಗುವಳಿ ಚೀಟಿ ಮಾಡಿಕೊಟ್ಟಿರುವ ಕೊರಟಗೆರೆ ತಹಸೀಲ್ದಾರ್ ವಿರುದ್ಧ ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದಪಟೇಲ್ ನೇತೃತ್ವದಲ್ಲಿ ಸಂತ್ರಸ್ತ ಕುಟುಂಬದೊಂದಿಗೆ ಪ್ರತಿಭಟನೆ ನಡೆಸಿದ ರೈತ ಮುಖಂಡರು, ಸರ್ಕಾರ ಕೂಡಲೇ ಬೆಂಗಳೂರಿನ ವ್ಯಕ್ತಿಗಳಿಗೆ ನೀಡಿರುವ ಸಾಗುವಳಿ ಪತ್ರ ರದ್ದುಗೊಳಿಸಿ ರೈತರಿಗೆ ಮರು ಮಂಜೂರು ಮಾಡಿಕೊಡಬೇಕು. ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಆನಂದ ಪಟೇಲ್, ಕೊರಟಗೆರೆ ತಾಲೂಕು ಅಕ್ಕಾಜಿಹಳ್ಳಿ ಸ.ನಂ. 33ರ 641 ಎಕರೆ ಸರ್ಕಾರಿ ಗೋಮಾಳದಲ್ಲಿ ಕಾಮಣ್ಣ ಹಾಗೂ ದಾಳಿ ನರಸಪ್ಪ ಎಂಬುವವರು ತಲಾ 2 ಎಕರೆಯಂತೆ ಕಳೆದ 35-40 ವರ್ಷಗಳಿಂದ ಉಳುಮೆ ಮಾಡಿ ಜೀವನ ನಡೆಸುತ್ತಿದ್ದಾರೆ. ಈ ಜಮೀನಿಗಾಗಿ ಸರ್ಕಾರಕ್ಕೆ ಫಾರಂ ನಂ 50-53 ಮತ್ತು 57 ರಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ತಾಲೂಕು ಆಡಳಿತ ಇವರ ಅರ್ಜಿ ಅನ್ವಯ 2003ರ ಡಿ.4 ರಂದು ಸರ್ವೇ ನಕಾಶೆ ತಯಾರಿಸಿ, ಜಮೀನು ಗುರುತಿಸಿಕೊಟ್ಟಿದೆ. ಇದಕ್ಕೆ ಮೇಲಿನವರು ಕಿಮ್ಮತ್ತನ್ನು ಸಹ ಕೊಟ್ಟಿದ್ದಾರೆ. ಈ ಜಾಗದಿಂದ ಅವರನ್ನು ಪೊಲೀಸ್ ಬಲ ಪ್ರಯೋಗಿಸಿ ಹೊರದಬ್ಬಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೊರಟಗೆರೆ ತಹಸೀಲ್ದಾರ್ ಅವರು ಏಕಾಏಕಿ ಸ್ಥಳೀಯರಲ್ಲದವರ ಬೆಂಗಳೂರಿನಲ್ಲಿ ವಾಸವಾಗಿರುವ ಸರಸ್ವತಿ, ಉಮೇಶ್, ರಾಹುಲ್, ಕಲಾವತಿ ಅವರಿಗೆ 2017ರಲ್ಲಿ ಸಾಗುವಳಿ ಚೀಟಿ ನೀಡಿ, ಸುಮಾರು 40 ವರ್ಷಗಳಿಂದ ಉಳುಮೆ ಮಾಡಿ, ಜೀವನ ನಡೆಸುತ್ತಿದ್ದ ಕಾಮಣ್ಣ ಹಾಗೂ ನರಸಪ್ಪ ಅವರ ಕುಟುಂಬವನ್ನು ಒಕ್ಕಲೆಬ್ಬಿಸಿರುವುದು ಅನ್ಯಾಯ. ಗೋಮಾಳದ ಜಮೀನುಗಳನ್ನು ಖಾಸಗಿ ಭೂಮಾಫೀಯದವರಿಗೆ ತಹಸೀಲ್ದಾರ್ ಮಾರಾಟ ಮಾಡುವ ಮೂಲಕ ಹತ್ತಾರು ವರ್ಷಗಳ ಕಾಲ ಭೂಮಿ ಉಳುಮೆ ಮಾಡಿದವರನ್ನು ನಿರ್ಗತಿಕರನ್ನಾಗಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಶಿರಾ ಅಧ್ಯಕ್ಷ ಸಣ್ಣದ್ಯಾಮಯ್ಯ, ಕೊರಟಗೆರೆ ಅಧ್ಯಕ್ಷ ಸಿದ್ದರಾಜು, ಶಿವಾನಂದ್, ಪುಟ್ಟರಾಜು ಮತ್ತಿತರರು ಪಾಲ್ಗೊಂಡಿದ್ದರು.

    ಶಾಸಕ ಪರಮೇಶ್ವರ ನ್ಯಾಯ ಕೊಡಲಿ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಕ್ಷೇತ್ರದಲ್ಲಿ ಬಡವರಿಗೆ, ರೈತರಿಗೆ ನ್ಯಾಯವಿಲ್ಲದಂತಾಗಿದೆ. ಅಧಿಕಾರಿಗಳು ಮನಸೋಯಿಚ್ಛೆ ಗೋಮಾಳಗಳನ್ನು ಯಾರಿಗೆ ಬೇಕೋ ಅವರಿಗೆ ಮಾರಾಟ ಮಾಡುತ್ತಿದ್ದಾರೆ. ಬಡವರು ಬದುಕುವುದೇ ಕಷ್ಟವಾಗಿದೆ. ಕೂಡಲೇ ಶಾಸಕರು ಗಮನಹರಿಸಿ, ರೈತರಾದ ಕಾಮಣ್ಣ , ನರಸಪ್ಪಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಾಧ್ಯಕ್ಷ ಧನಂಜಯ ಆರಾಧ್ಯ ಎಚ್ಚರಿಸಿದರು.
    ಜಿಲ್ಲಾಧಿಕಾರಿಗೆ ರೈತರು ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts