More

    ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು, ಆರೋಪ

    ರಾಣೆಬೆನ್ನೂರ: ವೈದ್ಯರ ನಿರ್ಲಕ್ಷ್ಯಂದ ರೋಗಿ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ರೋಗಿಯ ಸಂಬಂಧಿಕರು ವೈದ್ಯರ ಕಾರನ್ನು ಕಲ್ಲಿನಿಂದ ಹೊಡೆದು ಜಖಂಗೊಳಿಸಿ, ಮನೆ ಮೇಲೂ ಕಲ್ಲು ತೂರಿದ ಘಟನೆ ನಗರದ ಮೇಡ್ಲೇರಿ ರಸ್ತೆಯ ಖಾಸಗಿ ಆಸ್ಪತ್ರೆ ಎದುರು ಗುರುವಾರ ರಾತ್ರಿ ಸಂಭವಿಸಿದೆ.

    ಇಲ್ಲಿಯ ಮಾರುತಿ ನಗರದ ಖಾಜಾಮುದ್ದೀನಸಾಬ ಟೀನಮೇಕರ್ ಎಂಬುವರಿಗೆ ಗುರುವಾರ ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಅವರನ್ನು ಡಾ. ಸುನೀಲ ಸಾಲಿಮಠ ಅವರ ಬಳಿ ಕರೆದುಕೊಂಡು ಹೋಗಲಾಗಿತ್ತು. ‘ವೈದ್ಯರು ಮೊದಲಿಗೆ ಡ್ರಿಪ್ ಹಚ್ಚಿ ಇಂಜೆಕ್ಷನ್ ಕೊಟ್ಟರು. ಇದಾದ ಸ್ವಲ್ಪ ಹೊತ್ತಿಗೆ ನಮ್ಮ ತಂದೆ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡರು. ಆಗ ವೈದ್ಯ ಸುನೀಲ, ಕೂಡಲೆ ತಮ್ಮ ಕಾರಿನಲ್ಲಿ ಅವರನ್ನು ನಗರದ ಸಾಲಮನಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಅಲ್ಲಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಅಲ್ಲಿಂದ ಓಂ ಆಸ್ಪತ್ರೆಗೆ ಕರೆದುಕೊಂಡು ಬಂದರು. ಅಷ್ಟರಲ್ಲಿ ನಮ್ಮ ತಂದೆ ಜೀವ ಹೋಗಿತ್ತು’ ಎಂದು ಮೃತನ ಪುತ್ರ ಜಾಫರ್​ಅಲಿ ಆರೋಪಿಸಿದ್ದಾರೆ.

    ಆಕ್ರೋಶಗೊಂಡ ಕುಟುಂಬಸ್ಥರು: ಖಾಜಾಮುದ್ದೀನಸಾಬ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ನಗರದ ಓಂ ಆಸ್ಪತ್ರೆ ಆವರಣದಲ್ಲಿ ಸೇರಿದ ಅವರ ಕುಟುಂಬಸ್ಥರು ಹಾಗೂ ಪರಿಚಯಸ್ಥರು, ಏಕಾಏಕಿ ವೈದ್ಯರ ಕಾರಿಗೆ ಕಲ್ಲಿನಿಂದ ಹೊಡೆದು ಗ್ಲಾಸ್ ಒಡೆದು ಹಾಕಿದರು. ಅಲ್ಲದೆ, ಅವರ ಮನೆಗೆ ತೆರಳಿ ಮನೆ ಮೇಲೂ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಮೃತನ ಸಾವಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಶಹರ ಠಾಣೆ ಸಿಪಿಐ ಎಂ. ಗೌಡಪ್ಪಗೌಡ್ರ ಹಾಗೂ ಸಿಬ್ಬಂದಿ ಪರಿಸ್ಥಿತಿ ಹತೋಟಿಗೆ ತಂದರು. ನಂತರ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಮಾಡಿ ವಾಪಸ್ ಕಳುಹಿಸಿದರು.

    ಈ ಕುರಿತು ಪ್ರತಿಕ್ರಿಯಿಸಿದ ವೈದ್ಯ ಡಾ. ಸುನೀಲ ಸಾಲಿಮಠ, ‘ರೋಗಿಯು ಹೊಟ್ಟೆನೋವು ಎಂದು ಬಂದಿದ್ದರು. ಅವರೇ ಡ್ರಿಪ್ ಹಚ್ಚಲು ಹೇಳಿದ್ದರು. ಅದಕ್ಕೆ ಡ್ರಿಪ್ ಹಚ್ಚಿ, ಇಂಜೆಕ್ಷನ್ ನೀಡಿದ್ದೆ. ಅಷ್ಟರಲ್ಲಿ ಅವರು ವಾಂತಿ ಮಾಡಿಕೊಂಡು ಸುಸ್ತಾದರು. ಆದ್ದರಿಂದ ಓಂ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಆಗ ಆತ ಮೃತಪಟ್ಟಿದ್ದಾನೆ. ನಾವು ಸರಿಯಾದ ಚಿಕಿತ್ಸೆ ನೀಡಿದ್ದೇವೆ’ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts