More

    ಒಂದೇ ಊರು..ನಾಮ ಹಲವು…!

    ಶಿಗ್ಗಾಂವಿ: ‘ದೇವನೊಬ್ಬ ನಾಮ ಹಲವು’ ಎಂಬ ನಾಣ್ಣುಡಿಯಂತೆ ಊರು ಒಂದೇ ಆದರೂ ಆ ಊರಿಗೆ ನಾಮಗಳು ಹಲವು ಇವೆ. ಇದು ಆಶ್ಚರ್ಯವೆನಿಸಿದರೂ ಸತ್ಯ.

    ಶಿಶುನಾಳ ಶರೀಫರು, ದಾಸಶ್ರೇಷ್ಠ ಕನಕದಾಸರು, ವಿಶ್ವವಿಖ್ಯಾತ ಪ್ರವಾಸಿ ತಾಣಗಳನ್ನು ಒಳಗೊಂಡಿರುವ ಹಾಗೂ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದ ಹಿರಿಮೆ ಶಿಗ್ಗಾಂವಿ ತಾಲೂಕಿಗೆ ಸಲ್ಲುತ್ತದೆ. ಹಾವೇರಿ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾದ ಈ ತಾಲೂಕಿನ ಪ್ರಮುಖ ಆಡಳಿತ ಕೇಂದ್ರ ಸ್ಥಾನ ಶಿಗ್ಗಾಂವಿ ಪಟ್ಟಣ. ಇದನ್ನು ಶಿಗ್ಗಾಂವಿ, ಶಿಗ್ಗಾವಿ, ಶಿಗ್ಗಾಂವ ಎಂದು ಹಲವು ಹೆಸರುಗಳಲ್ಲಿ ಕರೆಯಲಾಗುತ್ತದೆ. ಆದರೆ, ಪಟ್ಟಣಕ್ಕೆ ನಿರ್ದಿಷ್ಟವಾದ ಒಂದು ಹೆಸರಿರದಿರುವುದು ಪ್ರಜ್ಞಾವಂತರಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಪಟ್ಟಣದಲ್ಲಿರುವ ಪ್ರಮುಖ ತಾಲೂಕು ಆಡಳಿತ ಸೌಧದ ಮೇಲೆ ಶಿಗ್ಗಾಂವ ಎಂದು, ಪೊಲೀಸ್ ಠಾಣೆಯ ನಾಮಫಲಕದಲ್ಲಿ ಶಿಗ್ಗಾವಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ನಾಮಫಲಕದಲ್ಲಿ ಶಿಗ್ಗಾಂವ, ಪುರಸಭೆ ಕಾರ್ಯಾಲಯದ ನಾಮಫಲಕದಲ್ಲಿ ಶಿಗ್ಗಾಂವ, ಪಟ್ಟಣದ ಕೆಲ ಸಂಘ- ಸಂಸ್ಥೆಗಳ ಕಚೇರಿ ಮೇಲೆ ಶಿಗ್ಗಾಂವಿ ಎಂಬ ನಾಮಫಲಕ ಹಾಕಲಾಗಿದೆ.

    ಇನ್ನು ಸ್ಥಳೀಯರು ತಮ್ಮ ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಪಡಿತರ ಚೀಟಿ, ಪಾಸ್​ಪೋರ್ಟ್​ನಂತಹ ಪ್ರಮುಖ ಗುರುತಿನ ಚೀಟಿಗಳನ್ನು ಮಾಡಿಸುವಾಗ ಯಾವ ಹೆಸರು ದಾಖಲಿಸಬೇಕು ಎಂದು ಗೊಂದಲಕ್ಕೊಳಗಾಗುತ್ತಾರೆ.

    ಇಲ್ಲಿನ ಇತಿಹಾಸಕಾರರ ಪ್ರಕಾರ ಗ್ರಾಮದಲ್ಲಿ ಪುರಾತನ ಶ್ರೀಕಲಿ ದೇವಸ್ಥಾನ ಪ್ರಸಿದ್ಧಿ ಪಡೆದಿತ್ತು. ಆ ದೇವಸ್ಥಾನದ ಆಧಾರದ ಮೇಲೆ ಶ್ರೀಕಲಿ ಗ್ರಾಮವೆಂದು ಕರೆಯಲ್ಪಡುತ್ತಿತ್ತು. ಅದಕ್ಕೆ ಪೂರಕವೆಂಬಂತೆ ತಾಲೂಕು ಕಚೇರಿಗಳಲ್ಲಿ ಶಾಸನಗಳು ಕೂಡ ಇವೆ. ಕಾಲಕ್ರಮೇಣ ಶ್ರೀಕಲಿ ಗ್ರಾಮದಿಂದ ಶಿಗ್ರಾಮ, ಶಿಗ್ಗಾಮ ಎಂದು ಬದಲಾವಣೆಗೊಳ್ಳುತ್ತ ಶಿಗ್ಗಾವ, ಶಿಗ್ಗಾವಿ, ಶಿಗ್ಗಾಂವಿ ಎಂಬ ಹೆಸರುಗಳೊಂದಿಗೆ ಕರೆಯಲ್ಪಡುತ್ತಿದೆ.

    ಸಂಬಂಧಿಸಿದ ಅಧಿಕಾರಿಗಳು ಪಟ್ಟಣಕ್ಕೆ ಇರುವ ಹಲವು ಹೆಸರುಗಳಲ್ಲಿ ಅಧಿಕೃತ ಹೆಸರು ಯಾವುದು ಎಂಬುದನ್ನು ಘೊಷಿಸಬೇಕು. ಎಲ್ಲ ಆಡಳಿತ ಕಚೇರಿಗಳ ಮೇಲೆ ನಾಮಫಲಕಗಳನ್ನು ಸರಿಪಡಿಸುವ ಕೆಲಸ ಆಗಬೇಕು. ಆಡಳಿತಾತ್ಮಕವಾಗಿ ಅಧಿಕೃತವಾಗಿರುವ ಹೆಸರನ್ನೇ ಬಳಸುವಂತೆ ಆದೇಶಿಸಬೇಕು ಎಂಬುದು ಇಲ್ಲಿನ ಪ್ರಜ್ಞಾವಂತರ ಒತ್ತಾಯವಾಗಿದೆ.

    ಸಾಹಿತಿಗಳ ತವರೂರು, ಸೌಹಾರ್ದದ ನೆಲೆಬೀಡು ಎಂಬ ಖ್ಯಾತಿಗೆ ಭಾಜನವಾದ ಶಿಗ್ಗಾವಿ ಹಲವು ವೈಶಿಷ್ಟ ಮತ್ತು ವಿಶೇಷತೆಗಳಿಂದ ಕೂಡಿದೆ. ನಮ್ಮಲ್ಲಿನ ಪುರಾತನ ಇತಿಹಾಸ ಮತ್ತು ಇಲ್ಲಿರುವ ಕೆಲವೊಂದು ಶಿಲಾಶಾಸನಗಳ ಪ್ರಕಾರ ಶಿಗ್ಗಾಂವಿಯ ಮೂಲನಾಮ ಶ್ರೀಕಲಿ ಗ್ರಾಮ ಎಂದಾಗಿತ್ತು. ಕಾಲಕ್ರಮೇಣ ಬದಲಾದ ಆಡಳಿತ ವ್ಯವಸ್ಥೆಯಲ್ಲಿ ಶ್ರೀಕಲಿ ಗ್ರಾಮ ಕಳೆದು ಹಲವು ಹೆಸರುಗಳೊಂದಿಗೆ ಕರೆಯಲಾಗುತ್ತಿದೆ.

    | ಭ.ಫ. ಯಲಿಗಾರ, ಹಿರಿಯ ಸಾಹಿತಿ

    ಕಂದಾಯ ಇಲಾಖೆಯ ದಾಖಲಾತಿ, ಅಧಿಕೃತ ಸರ್ಕಾರದ ತಂತ್ರಜ್ಞಾನ ಮತ್ತು ಚುನಾವಣೆ ಆಯೋಗದ ಪ್ರಕಾರ ಶಿಗ್ಗಾಂವ ಎಂದು ಉಲ್ಲೇಖವಾಗಿದೆ. ಇಲ್ಲಿನ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ದಾಖಲಾತಿ ಪ್ರಕಾರ ಶಿಗ್ಗಾಂವ ಎಂದು ಪಟ್ಟಣದ ಹೆಸರು ನಮೂದಾಗಿದೆ. ಇನ್ನುಳಿದಂತೆ ಶಿಗ್ಗಾಂವಿ, ಶಿಗ್ಗಾವಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.

    | ಸಂತೋಷ ಹಿರೇಮಠ, ತಹಸೀಲ್ದಾರ್ ಶಿಗ್ಗಾಂವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts