More

    ಬಯಲು ಸಂಗ್ರಹಾಲಯ ಸೇರಿದ ಪುರಾತನ ಸಾಮಗ್ರಿ

    ಶಿಗ್ಗಾಂವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಗ್ರಾಮ ಕರ್ನಾಟಕ ಬಯಲು ವಸ್ತು ಸಂಗ್ರಹಾಲಯದ ಪ್ರದರ್ಶನಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ. ರಾಜ್ಯದಲ್ಲಿ ಎಲ್ಲ ಪ್ರದೇಶದ, ಎಲ್ಲ ವರ್ಗಗಳ, ಎಲ್ಲ ಕಾಯಕ ಜೀವಿಗಳು ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಬೇಕು. ಇದಕ್ಕಾಗಿ ರಜೆ ದಿನಗಳಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಕ್ಷೇತ್ರಕಾರ್ಯ ಮಾಡುತ್ತಿದ್ದೇವೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.
    ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಗ್ರಾಮ ಕರ್ನಾಟಕ ಬಯಲು ವಸ್ತು ಸಂಗ್ರಹಾಲಯದ ಪ್ರದರ್ಶನಕ್ಕಾಗಿ ಭಾನುವಾರ ಹಾವೇರಿ ಜಿಲ್ಲೆಯ ಕಾಲ್ವೆಕಲ್ಲಾಪುರ ಗ್ರಾಮದಲ್ಲಿ ಕ್ಷೇತ್ರಕಾರ್ಯ ಮಾಡಿ, ಪುರಾತನ ವಸ್ತುಗಳನ್ನು ಸಂಗ್ರಹಿಸಿ ಅವರು ಮಾತನಾಡಿದರು. ಗ್ರಾಮದಲ್ಲಿ ದುರುಗಮುರಗಿ ಸಮುದಾಯದ ಹನುಮಂತಪ್ಪ ಗಿಡ್ಡಪ್ಪ ದುರುಗಮುರಗಿ ಅವರು ತಮ್ಮ ಕಲೆ ಮತ್ತು ವೃತ್ತಿಗಾಗಿ ಬಳಸುತ್ತಿದ್ದ ಭೂತಪ್ಪನ ಮುಖವಾಡ ಹಾಗೂ ರುಮ್ಮಿಯನ್ನು ದಾನವಾಗಿ ನೀಡಿದರು.
    ಹನುಮಂತಪ್ಪ ದುರುಗಮುರಗಿ ಮಾತನಾಡಿ, ಭೂತಪ್ಪನ ಮುಖ ಮೂರ್ತಿ ಸುಮಾರು ನಾಲ್ಕೈದು ತಲೆಮಾರಿನಿಂದ ನಮ್ಮ ಮನೆಯ ಕಾಯಕದಲ್ಲಿ ಬಳಸುತ್ತಿದ್ದೇವೆ. ನಮ್ಮ ಮುತ್ತಾತ, ತಾತ, ಅಪ್ಪ, ನಾನು ಧರಿಸಿಕೊಂಡು ಭಿಕ್ಷಾ ಕಾಯಕ ಮಾಡಿದ ದೈವವಿದು ಎಂದರು.
    ಗ್ರಾಮದವರಿಂದ ಜಯದಾರು, ಹತ್ತಿ, ಬಿತ್ತುವ ಕೂರಿಗೆ, ಬಟ್ಟಲು, ವಡೆಕಲ್ಲು, ತೊಗರಿ ಬೀಸುವ ಕಲ್ಲು, ಒರಳುಕಲ್ಲು ಇತರ ಪ್ರಾಚೀನ ವಸ್ತುಗಳನ್ನು ವಸ್ತು ಸಂಗ್ರಹಾಲಯಕ್ಕೆ ದಾನವಾಗಿ ಪಡೆದುಕೊಳ್ಳಲಾಯಿತು.
    ಗ್ರಾಮದ ಕಲಾವಿದರಾದ ಮಧು ಕುಮಾರ ಹರಿಜನ, ವೀರೇಶ ಮಹಾದೇವಪ್ಪ ಮರುಡಿ, ಗದ್ದಿಗಯ್ಯ ಶಿವಲಿಂಗಯ್ಯ ಹಿರೇಮಠ, ಜಯರೆಡ್ಡಿ ಸಣ್ಣಮ್ಮನ್ನವರ ಹಾಗೂ ವಿಶ್ವವಿದ್ಯಾಲಯದ ಜನಪದ ಕಲೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts