More

    ಹಣದ ಕೊರತೆ, ನೆರವಿಗೆ ಬಾರದ ಆಸ್ಪತ್ರೆ ಸಿಬ್ಬಂದಿ: ಪತ್ನಿಯ ಮೃತದೇಹವನ್ನು 33 ಕಿ.ಮೀ ಹೊತ್ತು ಸಾಗಿದ ಪತಿ

    ಭುವನೇಶ್ವರ್: ಶವ ಸಾಗಾಟ ವಾಹನದ ವ್ಯವಸ್ಥೆ ಮಾಡಲು ಹಣದ ಕೊರತೆ ಹಿನ್ನೆಲೆಯಲ್ಲಿ ಒಡಿಶಾ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೃತದೇಹವನ್ನು ಸುಮಾರು 33 ಕಿ.ಮೀ ದೂರ ಭುಜದ ಮೇಲೆ ಹೊತ್ತು ನಡೆದ ಹೃದಯ ವಿದ್ರಾವಕ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಒಡಿಶಾದ ಕೊರಪಟ್​ ಜಿಲ್ಲೆಯ ಪೊಟ್ಟಾಂಗಿ ಏರಿಯಾದ ನಿವಾಸಿಗಳಾದ ಗುರು ಮತ್ತು ಆತನ ಪತ್ನಿ, ಆಂಧ್ರದ ವಿಶಾಖಪಟ್ಟಣದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿಯ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದ ಕೆಲವು ದಿನಗಳ ಹಿಂದಷ್ಟೇ ಆಕೆಯನ್ನು ಸಾಗರ್ಬಾಲ್ಸಾದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ ಚಿಕಿತ್ಸೆ ಫಲಿಸದೇ ಗುರು ಪತ್ನಿ ತೀರಿಕೊಂಡಳು.

    ಚಿಕಿತ್ಸೆಗೂ ಹಣವಿಲ್ಲದ ವಿಷಮ ಸ್ಥಿತಿಯಲ್ಲಿ ಗುರು, ತನ್ನ ಪತ್ನಿಯ ಅಂತ್ಯಕ್ರಿಯೆಗಾಗಿ, ಆಕೆಯ ಮೃತದೇಹವನ್ನು ಹೇಗಾದರೂ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಡುವಂತೆ ಆಸ್ಪತ್ರೆಯ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದ. ಆದರೆ, ಕಲ್ಲು ಹೃದಯದ ಅಧಿಕಾರಿಗಳು ಗುರುವಿನ ಮನವಿಗೆ ಸ್ಪಂದಿಸಲಿಲ್ಲ. ಯಾವುದೇ ಸಹಾಯವನ್ನು ಮಾಡದೇ ತಮ್ಮ ಪಾಡಿಗೆ ಹೊರಟು ಹೋದರು.

    ಕೊನೆಗೆ ಯಾವುದೇ ಆಯ್ಕೆ ಗುರುವಿಗೆ ಉಳಿಯಲಿಲ್ಲ. ಬಳಿಕ ಮೃತದೇಹವನ್ನು ಹೊತ್ತುಕೊಂಡೇ ಸಾಗುವ ನಿರ್ಧಾರಕ್ಕೆ ಬಂದ. ವಿಶಾಖಪಟ್ಟಣದಿಂದ ತನ್ನ ತವರಿಗೆ ಪತ್ನಿಯ ಮೃತದೇಹವನ್ನು ಭುಜದಲ್ಲಿ ಹೊತ್ತು ನಡೆಯುತ್ತಾ ಸಾಗಿದ. ಮಾರ್ಗ ಮಧ್ಯೆ ಅನೇಕರು ಅದನ್ನು ಗಮನಿಸಿದರೂ ಯಾರೊಬ್ಬರು ಕೂಡ ಸಹಾಯಕ್ಕೆ ಧಾವಿಸಲಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಕೆಲವರು ವಿಜಯನಗರದ ಬಳಿ ಗುರುವನ್ನು ನೋಡಿ ಸ್ಥಳೀಯ ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ವಿಜಯನಗರ ಗ್ರಾಮಾಂತರ ಪೊಲೀಸ್​ ಠಾಣೆಗೆ ಎಎಸ್​ಐ ಕಿರಣ್​ ಕುಮಾರ್​, ಗುರುವನ್ನು ವಿಚಾರಿಸಿ ನೆರವಿನ ಹಸ್ತ ಚಾಚಿದರು. ಸ್ಥಳದಲ್ಲೇ ಆಂಬ್ಯುಲೆನ್ಸ್​ ವ್ಯವಸ್ಥೆ ಮಾಡಿಕೊಟ್ಟು ಗುರುವನ್ನು ಕಳುಹಿಸಿಕೊಟ್ಟರು. ಎಎಸ್​ಐ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾದರೆ, ಆಸ್ಪತ್ರೆಯ ಸಿಬ್ಬಂದಿಯ ಕ್ರೂರ ವರ್ತನೆಗೆ ಎಲ್ಲರು ಶಾಪ ಹಾಕಿದರು.

    2016ರ ಆಗಸ್ಟ್‌ನಲ್ಲೂ ಇಂಥದ್ದೇ ಘಟನೆಯೊಂದು ನಡೆದಿತ್ತು. ಜಿಲ್ಲಾಸ್ಪತ್ರೆಯಲ್ಲಿ ವಾಹನ ನೀಡದ ಕಾರಣ ಒಡಿಶಾದ ಕಲಹಂಡಿಯ ದಾನಾ ಮಾಝಿ ಎಂಬಾತ ತನ್ನ ಪತ್ನಿಯ ಶವವನ್ನು 10 ಕಿ.ಮೀ.ವರೆಗೆ ಭುಜದ ಮೇಲೆ ಹೊತ್ತುಕೊಂಡು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್​)

    ಯುಕೆಜಿ ಓದುತ್ತಿದ್ದ ಮಗುವನ್ನು ಫೇಲ್ ಮಾಡಿದ ಶಾಲೆಯ ವಿರುದ್ಧ ಮಾಜಿ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಆಕ್ರೋಶ!

    ರಾಜಕಾರಣಿಯ ಆಮಿಷ ಮನೆ ಬಾಗಿಲಿಗೇ ಬಂದರೂ ತಿರಸ್ಕರಿಸಿದ ಮಹಿಳೆ!

    ಸಂಸತ್ತಿನಲ್ಲಿ ಪಠಾಣ್​ ಸಿನಿಮಾ ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ! ಶಾರುಖ್​ ಅಭಿಮಾನಿಗಳ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts