More

    ರಾಜಕಾರಣಿಯ ಆಮಿಷ ಮನೆ ಬಾಗಿಲಿಗೇ ಬಂದರೂ ತಿರಸ್ಕರಿಸಿದ ಮಹಿಳೆ!

    ಬಾಗಲಕೋಟೆ: ಚುನಾವಣೆ ಹೊತ್ತಿನಲ್ಲಿ ಗಿಫ್ಟ್ ರಾಜಕೀಯ ನಡೆಯುವುದು ಮಾಮೂಲಿ. ರಾಜಕೀಯ ಪಕ್ಷಗಳ ನಾಯಕರು ಕೊಟ್ಟ ಗಿಫ್ಟ್‌ಗಳನ್ನು ಬಹುತೇಕ ಮತದಾರರು ಸಂತೋಷದಿಂದ ಪಡೆಯುತ್ತಾರೆ. ಇನ್ನು ಕೆಲವು ಮತದಾರರು ತಮಗೇಕೆ ಗಿಫ್ಟ್ ಕೊಟ್ಟಿಲ್ಲ ಅಂತ ಜಗಳವನ್ನೂ ಮಾಡುತ್ತಾರೆ.

    ಪರಿಸ್ಥಿತಿ ಹೀಗಿರುವಾಗ, ನಾಯಕರೊಬ್ಬರು ಅಕ್ಕರೆಯಿಂದ ಕೊಟ್ಟ ಸಕ್ಕರೆ ಪಾಕೀಟನ್ನು ಬೇಡ ಅಂತ ಹೇಳಿ ಮತದಾರ ಮಹಿಳೆಯೊಬ್ಬರು ವಾಪಸ್ ಕಳಿಸಿದ ಘಟನೆ ನಡೆದಿದೆ.

    ಸಚಿವ ಮುರುಗೇಶ್ ನಿರಾಣಿ ಬೆಂಬಲಿಗರು ಎನ್ನಲಾದ ಕೆಲವರು ಹಂಚಿದ ಸಕ್ಕರೆ ಪಾಕೇಟನ್ನು ಮಹಿಳೆ ತಿರಸ್ಕರಿಸಿದ ಈ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಗಲಗಲಿಯಲ್ಲಿ ನಡೆದಿದೆ.

    ಸಕ್ಕರೆ ಚೀಲವನ್ನು ಮಹಿಳೆ ತಿರಸ್ಕರಿಸಿದ ವಿಡಿಯೋ ಈಗ ವೈರಲ್ ಆಗಿದೆ. ಮನೆ ಮನೆಗೂ ಹೋಗಿ ಸಕ್ಕರೆ ಹಂಚುತ್ತಿರುವಾಗ ಈ ಅಪರೂಪದ ಘಟನೆ ನಡೆದಿದೆ. ಆದರೂ ಕಾರ್ಯಕರ್ತನೊಬ್ಬ ಒತ್ತಾಯವಾಗಿ ಸಕ್ಕರೆ ಚೀಲವನ್ನು ಮನೆಯೊಳಗೆ ಹೋಗಿ ಇಟ್ಟು ಬಂದಿದ್ದಾನೆ. ಅಷ್ಟಕ್ಕೂ ಜಗ್ಗದ ಆ ಮಹಿಳೆ, ಸಕ್ಕರೆ ಚೀಲವನ್ನು ತಂದು ಬಾಗಿಲು ಹೊರಗೆ ಇಟ್ಟಿದ್ದಾಳೆ. ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಕಾರ್ಯಕರ್ತರು ಸಕ್ಕರೆಯನ್ನು ಹಿಂಪಡೆದು ಅಲ್ಲಿಂದ ತೆರಳಿದ್ದಾರೆ.

    ಮಹಿಳೆಯ ಈ ವರ್ತನೆಗೆ ಸೋಶಿಯಲ್ ಮಿಡಿಯಾದಲ್ಲಿ ಭಾರಿ ಬೆಂಬಲ, ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಹೆಗಡೆ ಎಂಬುವವರು ಈ ವಿಡಿಯೋ ಶೇರ್ ಮಾಡಿದ್ದಾರೆ.

    ಈ ತಾಯಿಗಿರುವ ನಿಯತ್ತಿಗೆ ಜನತೆಯಿಂದ‌ ಧನ್ಯವಾದಗಳು. ಆಸೆ, ಆಮಿಷಗಳಿಗೆ ಬಲಿಯಾಗದ ಜಾಗೃತ ಮತದಾರರಿಂದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ, ಇಂತಹ ಆಲೋಚನೆ ಎಲ್ಲ ಮತದಾರರಿಗೂ ಬರಬೇಕಿದೆ ಎಂದು ಯಲ್ಲಪ್ಪ ಹೆಗಡೆ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts