More

    ಹೆಸರಘಟ್ಟದಲ್ಲಿ 4 ದಿನ ರಾಷ್ಟ್ರೀಯ ತೋಟಗಾರಿಕೆ ಮೇಳ: 120ಕ್ಕೂ ಹೆಚ್ಚು ತಳಿಗಳ ಪ್ರದರ್ಶನ, 63 ತಂತ್ರಜ್ಞಾನ ಪ್ರಾತ್ಯಕ್ಷಿಕೆ

    ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಆವರಣದಲ್ಲಿ ಫೆ.22ರಿಂದ ಫೆ.25ರವರೆಗೆ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ ನಡೆಯಲಿದೆ.

    ‘ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ’ ಪರಿಕಲ್ಪನೆಯಡಿ ಜರಗುವ ಈ ಮೇಳದಲ್ಲಿ 120ಕ್ಕೂ ಹೆಚ್ಚು ತಳಿಗಳು, 63 ತಂತ್ರಜ್ಞಾನ ಪ್ರಾತ್ಯಕ್ಷಿಕೆ, 250ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತಿದೆ. ಹಲವು ನವೋದ್ಯಮಗಳು ಮೇಳದಲ್ಲಿ ಗಮನ ಸೆಳೆಯಲಿದ್ದು, ಪ್ರತಿನಿತ್ಯ ರೈತರು ಸೇರಿ ಅಂದಾಜು 30 ಸಾವಿರಕ್ಕೂ ಹೆಚ್ಚು ಜನರು ಮೇಳಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಐಐಎಚ್‌ಆರ್ ನಿರ್ದೇಶಕ ಡಾ. ಸಂಜಯ್‌ಕುಮಾರ್ ಸಿಂಗ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮೇಳದಲ್ಲಿ ಹತ್ತಾರು ಹೊಸ ತಳಿಗಳು, ತಂತ್ರಜ್ಞಾನಗಳು ರೈತರನ್ನು ಸೆಳೆಯಲಿವೆ. ಸಂಸ್ಥೆ ವತಿಯಿಂದ ಈಚೆಗೆ ಬಿಡುಗಡೆ ಮಾಡಿದ ಹಣ್ಣು, ತರಕಾರಿ, ಹೂವು ಹಾಗೂ ಔಷಧ ತಳಿಗಳನ್ನು ಪ್ರಾತ್ಯಕ್ಷಿಕೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಈವರೆಗೆ ಯಶಸ್ವಿಯಾಗಿ ಐದು ಮೇಳ ನಡೆಸಲಾಗಿದ್ದು, ಇದು ಆರನೇ ಮೇಳವಾಗಿದೆ. ಕಡಿಮೆ ಜಾಗದಲ್ಲಿ ಸಮೃದ್ಧವಾದ ಬೆಳೆ ತೆಗೆದು, ಲಾಭ ಮಾಡಿಕೊಳ್ಳಲು ಅನುಕೂಲವಾಗುವಂತೆ ’ಲಂಬ ಕೃಷಿ ಪದ್ಧತಿ’ ಪರಿಚಯಿಸಲಾಗುವುದು. ಪಾಲಿಹೌಸ್‌ನಲ್ಲಿ 12 ಅಡಿ ಲಂಬವಾದ ಜಾಗ ಬಳಸಿಕೊಂಡು ಆರು ಪಟ್ಟು ಇಳುವರಿ ಪಡೆಯಬಹುದಾದ ವ್ಯವಸ್ಥೆ ಇದಾಗಿದೆ. ಜರ್ಬೇರಾ, ಗ್ಲಾಡಿಯೋಲಸ್, ಬೀನ್ಸ್, ಹೂಕೋಸು, ಎಲೆಕೋಸು ಸೇರಿ ಹಲವು ಹೂವು, ತರಕಾರಿ ಬೆಳೆಗಳನ್ನು ಈ ವಿಧಾನದಲ್ಲಿ ಬೆಳೆಯಬಹುದು ಎಂದು ವಿವರಿಸಿದರು.

    ಕೋಕೊಪಿಟ್ ತುಂಬಿದ ಬೃಹತ್ ಬ್ಯಾಗ್‌ಗಳನ್ನು ಸ್ಟ್ಯಾಂಡ್‌ಗೆ ಅಳವಡಿಸಿ, ಬತ್ತಿ ನೀರಾವರಿ ವ್ಯವಸ್ಥೆಯಲ್ಲಿ ಉತ್ತಮ ಬೆಳೆ ತೆಗೆಯಬಹುದು. ಈ ವಿಧಾನದ ಬೆಳೆಗೆ ಸಬ್ಸಿಡಿ ಸಿಕ್ಕರೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಇದರ ಲಾಭ ಪಡೆಯಬಹುದು. ಹೀಗಾಗಿ, ಕೇಂದ್ರ ಸರ್ಕಾರದ ಎಂಐಡಿಎಚ್‌ಗೆ ಶಿಫಾರಸು ಮಾಡಲಾಗಿದೆ ಎಂದು ಐಐಎಚ್‌ಆರ್‌ನ ಪ್ರಧಾನ ವಿಜ್ಞಾನಿ ಡಾ. ಅಶ್ವತ್ಥ್ ತಿಳಿಸಿದರು.

    ಸಿರಿಧಾನ್ಯ ಮಿಶ್ರಿತ ಬಿಸ್ಕೆಟ್: ಜೋಳ, ಸಜ್ಜೆ ಮತ್ತು ಸಾಮೆ ಬಳಸಿ ಪೋಷಕಾಂಶ ಭರಿತ ಬಿಸ್ಕೆಟ್ ತಯಾರಿಸುವ ತಂತ್ರಜ್ಞಾನವನ್ನು ಐಐಎಚ್‌ಆರ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಉತ್ಪನ್ನಗಳು ಮೈದಾ ಮತ್ತು ಸಕ್ಕರೆಯಿಂದ ಮುಕ್ತವಾಗಿದ್ದು, ಶೂನ್ಯ ಸಂರಕ್ಷಕಗಳಿಂದ ತಯಾರಿಸಲಾಗಿದೆ. ಮಾರುಕಟ್ಟೆಯಲ್ಲಿ ಇರುವ ಬಿಸ್ಕತ್ತುಗಳಿಗೆ ಹೋಲಿಸಿದರೆ ಇವುಗಳಲ್ಲಿ ಶೇ.15 ಪ್ರೋಟೀನ್ ಅಂಶ, ಕ್ಯಾಲ್ಸಿಯಂ ಮತ್ತು ಕಡಿಮೆ ಕಾರ್ಬೊಹೈಡ್ರೇಟ್ ಹೊಂದಿದೆ. ಅಲ್ಲದೆ, ಪ್ರತಿನಿತ್ಯ ದೇವಸ್ಥಾನಗಳಿಗೆ ಅಂದಾಜು 5 ಸಾವಿರ ಟನ್ ಹೂವು ಬಳಸಲಾಗುತ್ತದೆ. ಈ ಹೂವು ತ್ಯಾಜ್ಯಕ್ಕೆ ಹೋಗುತ್ತದೆ. ಇವುಗಳನ್ನು ಬಳಸಿಕೊಂಡು ಅಗರಬತ್ತಿ ತಯಾರಿಸಲು ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಈ ಸಂಬಂಧ ಆಸಕ್ತರಿಗೆ ತರಬೇತಿ ನೀಡಲು ಐಐಎಚ್‌ಆರ್ ಮುಂದಾಗಿದೆ. ಇದರ ಬಗೆಗೂ ತೋಟಗಾರಿಕೆ ಮೇಳದಲ್ಲಿ ಪ್ರಾತ್ಯಕ್ಷಿಕೆ ಇರಲಿದೆ.

    ತಮ್ಮದೇ ಮೂತ್ರ ಕುಡಿದು ಜೀವ ಉಳಿಸಿಕೊಂಡ ಸಹೋದರರು; ಭೂಕಂಪದ ಅವಶೇಷಗಳಡಿ 1 ವಾರ ಜೀವನ್ಮರಣ ಹೋರಾಟ

    ಕೋವಿಡ್​ ತಡೆಯುವಲ್ಲಿ ಮಾಸ್ಕ್​ ನಿಜಕ್ಕೂ ಪರಿಣಾಮ ಬೀರಿದೆಯಾ?: ಇಲ್ಲಿದೆ ಅಧ್ಯಯನವೊಂದರ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts