More

    ಮುಂಡಾಜೆ ನರ್ಸರಿ ಸ್ಥಳಾಂತರ

    -ಮನೋಹರ್ ಬಳಂಜ ಬೆಳ್ತಂಗಡಿ

    ಅರಣ್ಯ ಇಲಾಖೆಯ ಮುಂಡಾಜೆ ಗ್ರಾಮದ ಕಾಪುವಿನಲ್ಲಿದ್ದ ನರ್ಸರಿಯನ್ನು ಅದೇ ಗ್ರಾಮದ ನಿಡಿಗಲ್‌ಗೆ ಸ್ಥಳಾಂತರಗೊಳಿಸಲಾಗಿದೆ.

    ಮುಂಡಾಜೆಯ ಕಾಪುವಿನಲ್ಲಿ ಸುಮಾರು ಎರಡು ಎಕರೆಗಿಂತ ಅಧಿಕ ಪ್ರದೇಶದ ಮೃತ್ಯುಂಜಯ ನದಿ ಬದಿ ಇದ್ದ ಈ ನರ್ಸರಿಯಲ್ಲಿ ಅನೇಕ ಬಗೆಯ ಗಿಡಗಳನ್ನು ಬೆಳೆದು ಇಲಾಖೆಯ ನಾನಾ ಯೋಜನೆಗಳಿಗೆ, ಸಾರ್ವಜನಿಕರಿಗೆ ನೀಡುವ ಜತೆ ಅರಣ್ಯ ಅಭಿವೃದ್ಧಿಗೂ ಉಪಯೋಗಿಸಲಾಗುತ್ತಿತ್ತು. ಇಲ್ಲಿ ಪ್ರತಿ ವಷರ್ ಅಳಿವಿನಂಚಿನಲ್ಲಿರುವ ಹಾಗೂ ಅಪರೂಪದ ಗಿಡಗಳನ್ನು ಬೆಳೆದು ಪೋಷಿಸಲಾಗುತ್ತಿತ್ತು. ತಾಲೂಕಿನ ಹೆಚ್ಚಿನ ಗ್ರಾಮಗಳ ಜನರು ಇಲ್ಲಿಂದಲೇ ಗಿಡಗಳನ್ನು ಕೊಂಡೊಯ್ದು ನಾಟಿ ಮಾಡುತ್ತಿದ್ದರು. ಇಲ್ಲಿ ಉತ್ತಮ ಗುಣಮಟ್ಟದ ಗಿಡಗಳನ್ನು ಬೆಳೆಯುವ ಕಾರಣ ಬೇಡಿಕೆಯು ಹೆಚ್ಚಿತ್ತು.

    ನಿಡಿಗಲ್ಗೆ ಶಿಫ್ಟ್

    ಕಾಪು ನರ್ಸರಿ ಇರುವ ಪ್ರದೇಶದ ಮೂಲಕವೇ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಡೆಯುವ ಕಾರಣ ನರ್ಸರಿಯನ್ನು ನಿಡಿಗಲ್ ಗೆ ಸ್ಥಳಾಂತರ ಗೊಳಿಸಲಾಗಿದೆ. ಇಲ್ಲಿ ಬೆಳೆಯಲು ತಯಾರು ಮಾಡಿದ್ದ ಗಿಡ ಹಾಗೂ ಇತರ ಎಲ್ಲ ವಸ್ತುಗಳನ್ನು ನಿಡಿಗಲ್ ಸಾಗಿಸಿ ಅಲ್ಲಿ ಎರಡು ಎಕರೆ ಪ್ರದೇಶದಲ್ಲಿ ನೂತನ ನರ್ಸರಿ ನಿರ್ಮಿಸಲಾಗಿದೆ.

    ನೀರಿನ ವ್ಯವಸ್ಥೆ

    ಈ ಹಿಂದಿನ ನರ್ಸರಿ ಮೃತ್ಯುಂಜಯ ನದಿ ಬದಿ ಇದ್ದರೆ ಈಗಿನ ನರ್ಸರಿ ನೇತ್ರಾವತಿ ನದಿ ಬದಿಯಲ್ಲಿದೆ. ಮೃತ್ಯುಂಜಯ ನದಿಯಲ್ಲಿ ವಷರ್ವಿಡಿ ಉತ್ತಮ ನೀರು ಇರುತ್ತದೆ. ಆದುದರಿಂದ ಗಿಡಗಳ ಬೆಳವಣಿಗೆಗೆ ಸಮಸ್ಯೆ ಇರಲಿಲ್ಲ. ಆದರೆ ನೇತ್ರಾವತಿಯಲ್ಲಿ ನದಿಯಲ್ಲಿ ನೀರು ಬೇಗನೆ ಬತ್ತುವ ಕಾರಣ ಗಿಡಗಳ ಬೆಳವಣಿಗೆಗೆ ಸಮಸ್ಯೆ ಆಗಬಹುದೇ ಎಂಬ ಅನುಮಾನವೂ ಇದೆ.

    ಆನೆ ದಾಳಿ

    ರಾಷ್ಟ್ರೀಯ ಹೆದ್ದಾರಿ ಬದಿ ಇದ್ದ ಕಾಪು ನರ್ಸರಿಗೆ ಹಲವು ಬಾರಿ ಕಾಡಾನೆಗಳು ದಾಳಿ ನಡೆಸಿ ಸಾವಿರಾರು ಗಿಡಗಳನ್ನು ಹಾಳು ಮಾಡುವುದು ಆಗಾಗ ನಡೆಯುತ್ತಿತ್ತು. ಇಲ್ಲಿನ ಅರಣ್ಯದ ಮೂಲಕ ಹೆದ್ದಾರಿ ದಾಟಿ ನರ್ಸರಿ ಪ್ರವೇಶಿಸಿ ಮೃತ್ಯುಂಜಯ ನದಿಯತ್ತ ಹೋಗುವ ಕಾಡಾನೆಗಳು ಗಿಡಗಳನ್ನು ನಾಶ ಮಾಡುತ್ತಿದ್ದವು. ಇದೀಗ ನರ್ಸರಿ ನಿಡಿಗಲ್‌ಗೆ ಸ್ಥಳಾಂತರವಾಗಿದೆ. ಈ ಪ್ರದೇಶದಲ್ಲಿ ಇದುವರೆಗೆ ಕಾಡಾನೆಗಳ ಕಾಟ ಇಲ್ಲ. ಆದರೆ ಮಂಗಗಳ ಕಾಟ ವಿಪರೀತವಿದೆ.

    ರಸ್ತೆಯಿಂದ 200 ಮೀ ದೂರ

    ಕಾಪು ನರ್ಸರಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇದ್ದರೆ ನಿಡಿಗಲ್ ನರ್ಸರಿ ಮುಖ್ಯ ರಸ್ತೆಗಿಂತ 200 ಮೀ.ನಷ್ಟು ಒಳಗಡೆ ಇದೆ. ಇಲ್ಲಿ ಉತ್ತಮ ಕಟ್ಟಡವು ಇದ್ದು ಇಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಅನುಕೂಲ ನೀಡಲಿದೆ ಕಾಪು ನರ್ಸರಿಯಲ್ಲಿ ಖಾಸಗಿ ಕಂಪನಿಯ ವಿದ್ಯುತ್ ಲೈನ್ ಒಂದಷ್ಟು ಜಾಗ ಆಕ್ರಮಿಸಿಕೊಂಡಿದ್ದಾರೆ, ನಿಡಿಗಲ್ ನರ್ಸರಿಯಲ್ಲಿ ಇಂಥ ಯಾವುದೇ ಅಡಚಣೆ ಇಲ್ಲ.

    ಗಿಡಗಳ ನಾಟಿ ಪೂರ್ಣ

    ಸ್ಥಳಾಂತರ ಗೊಂಡಿರುವ ನಿಡಿಗಲ್ ನರ್ಸರಿಯಲ್ಲಿ ಈಗಾಗಲೇ 90,000 ಗಿಡಗಳನ್ನು ನಾಟಿ ಮಾಡಲಾಗಿದೆ. ಬೀಟೆ, ಹೊನ್ನೆ, ಹಲಸು, ಹೆಬ್ಬಲಸು, ಜಾಯಿಕಾಯಿ, ರಂಬೂಟನ್, ನೇರಳೆ, ಅತ್ತಿ, ನೆಲ್ಲಿ, ಪುನರ್ಪುಳಿ, ರಾಂಪತ್ರೆ, ಬಿದಿರು, ಬೆತ್ತ, ಹೊಳೆ ದಾಸವಾಳ ಸೇರಿದಂತೆ 50ಕ್ಕೂ ಅಧಿಕ ಬಗೆಯ ಅಳಿವಿನಂಚಿನಲ್ಲಿರುವ ಹಾಗೂ ಔಷಧೀಯ ಗಿಡಗಳನ್ನು ನಾಟಿ ಮಾಡಲಾಗಿದ್ದು ಜೂನ್ ವೇಳೆ ಈ ಗಿಡಗಳು ವಿತರಣೆಗೊಳ್ಳಲಿವೆ. ಸುಮಾರು 20,000 ಗಿಡಗಳು ಸಾರ್ವಜನಿಕರಿಗೆ ಹಾಗೂ ಉಳಿದ ಗಿಡಗಳು ವಿವಿಧ ಯೋಜನೆ ಮತ್ತು ಅರಣ್ಯ ಅಭಿವೃದ್ಧಿಗೆ ಬಳಕೆಯಾಗಲಿವೆ. ಕಾಡಿನ ವಿಶೇಷ ಮರಗಳ ಬೀಜ ಸಂಗ್ರಹ ನಡೆಯುತ್ತಿದೆ.

    ಮುಂಡಾಜೆಯ ಕಾಪುವಿನಲ್ಲಿದ್ದ ಇಲಾಖೆಯ ನರ್ಸರಿಯನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಾರಣ ನಿಡಿಗಲ್ ಗೆ ಸ್ಥಳಾಂತರಿಸಲಾಗಿದೆ. ಇದರ ಕಾಮಗಾರಿ ಪೂರ್ಣಗೊಂಡಿದೆ, ಇಲಾಖೆಯ ನಿಯಮಗಳ ಪ್ರಕಾರ ನಿಗದಿಪಡಿಸಿದ ಸಮಯದಲ್ಲಿ, ರಿಯಾಯಿತಿ ದರದಲ್ಲಿ ಗಿಡಗಳನ್ನು ಸಾರ್ವಜನಿಕರಿಗೆ ಹಾಗೂ ಇತರ ಯೋಜನೆಗಳಿಗೆ ಒದಗಿಸಲಾಗುತ್ತದೆ.
    -ಬಿ.ಜಿ.ಮೋಹನ್ ಕುಮಾರ್,
    ಆರ್.ಎಫ್.ಒ., ಬೆಳ್ತಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts