ಬೆಂಗಳೂರು: ನಗರದಲ್ಲಿ ಬಿರುಬಿಸಿಲಿಗೆ ರಸ್ತೆಬದಿ ಗಿಡಗಳು ಬಾಡಿ ಹೋಗುತ್ತಿದ್ದರೂ, ಅವುಗಳಿಗೆ ನೀರುಣಿಸದೆ ಮೌನಕ್ಕೆ ಶರಣಾಗಿರುವ ಬಿಬಿಎಂಪಿ ವಿರುದ್ಧ ಪರಿಸರವಾದಿಗಳು ಕೆಂಗಣ್ಣು ಬೀರಿದ್ದಾರೆ.
ಇತ್ತೀಚಿಗೆ ಮಹಾನಗರದ ಪ್ರಮುಖ ರಸ್ತೆಗಳನ್ನು ಟೆಂಡರ್ ಶ್ಯೂರ್, ವೈಟ್ ಟಾಪಿಂಗ್ ಯೋಜನೆಗಳಡಿ ಮರುನಿರ್ಮಿಸಲಾಗುತ್ತಿದೆ. ಈ ವೇಳೆ ಅಗಲವಾದ ಫುಟ್‌ಪಾತ್ ನಿರ್ಮಿಸುವಾಗ ರಸ್ತೆಬದಿ ಉದ್ದಕ್ಕೂ ಗಿಡಗಳನ್ನು ಬೆಳಸಲಾಗುತ್ತಿದೆ. ಮೀಡಿಯನ್‌ಗಳಲ್ಲೂ ಹಸಿರು ಹೆಚ್ಚಿಸುವ ಕಾರ್ಯ ನಡೆದಿದೆ. ಆದರೆ, ಇವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಗಿಡಗಳು ಸೊರಗುತ್ತಿವೆ. ಬಿಸಿಲಿನಿಂದ ಮತ್ತಷ್ಟು ಒಣಗುವಂತಾಗಿವೆ. ಕಾಲ ಕಾಲಕ್ಕೆ ನೀರುಣಿಸದ ಕಾರಣ ಈ ಗಿಡಗಳು ಬಾಡಿ ನೆಲಕ್ಕುರುಳಿವೆ. ಈ ಸ್ಥಿತಿ ತಲುಪಿದರೂ ಗಿಡಗಳಿಗೆ ನೀರುಣಿಸುವತ್ತ ಪಾಲಿಕೆ ಮುತುವರ್ಜಿ ವಹಿಸುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ಮಿಸಿದ ಗುತ್ತಿಗೆ ಕಂಪನಿಗೆ ಒಂದು ಅಥವಾ ಎರಡು ವರ್ಷ ನಿರ್ವಹಣೆಯ ಹೊಣೆ ನೀಡಲಾಗುತ್ತಿದೆ. ಗುತ್ತಿಗೆ ಕರಾರಿನಂತೆ ಗಿಡಗಳ ಅರೈಕೆ ಮಾಡುವುದನ್ನೂ ಸೇರಿಸಲಾಗಿದೆ. ಆದರೂ, ಗುತ್ತಿಗೆ ವಹಿಸಿಕೊಂಡ ಕಂಪನಿಗಳು ರಸ್ತೆ ಸೇರಿ ಗಿಡಗಳ ಆರೈಕೆ ಮಾಡದ ಕಾರಣ ನಿರ್ವಹಣೆ ಕೊರತೆ ಎದ್ದುಕಾಣುತ್ತಿದೆ. ಇವುಗಳನ್ನು ಆಗಾಗ್ಗೆ ಮೇಲ್ವಿಚಾರಣೆ ನಡೆಸಬೇಕಿದ್ದ ಬಿಬಿಎಂಪಿ ಇಂಜಿನಿಯರಿಂಗ್ ವಿಭಾಗ ಹೊಣೆಗಾರಿಕೆಯಿಂದ ನುಣುಚಿಕೊಂಡಂತಿದೆ.
ಎಸ್‌ಟಿಪಿ ನೀರು ಬಳಕೆಗೆ ಹಿಂದೇಟು:
ಪ್ರಸ್ತುತ ಬಿಬಿಎಂಪಿಯ ಹಸಿರು ಹೆಚ್ಚಿಸುವ ಯೋಜನೆಗಳಿಗೆ ನೀರಿನ ಕೊರತೆ ಉಂಟಾಗಿದೆ. ಬರ ಹಿನ್ನೆಲೆಯಲ್ಲಿ ಅಂತರ್ಜಲ ಬತ್ತಿರುವ ಕಾರಣ ಬೋರ್‌ವೆಲ್‌ಗಳ ಮೂಲಕ ನೀರು ಪಡೆದು ಗಿಡಗಳನ್ನು ಆರೈಕೆ ಮಾಡಲು ಗುತ್ತಿಗೆದಾರರಿಗೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಅರಿತೇ ಪಾಲಿಕೆಯು ಜಲಮಂಡಳಿ ಬಳಿ ಎಸ್‌ಟಿಪಿ ನೀರನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ, ಎಸ್‌ಟಿಪಿ ನೀರನ್ನು ಬಳಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ರಸ್ತೆಬದಿ ಗಿಡಗಳು ಒಣಗುತ್ತಿವೆ. ಕೆಲವೆಡೆ ನಿರ್ವಹಣೆ ಮುಗಿದಿದ್ದು, ಹೊಸದಾಗಿ ಗುತ್ತಿಗೆ ನೀಡುವ ವೇಳೆ ಗಿಡಗಳ ಆರೈಕೆಗೆ ಆದ್ಯತೆ ನೀಡುವಂತೆ ಸೂಚಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.