More

    ಪಠ್ಯ ತಪ್ಪುಗಳ ಪರಿಷ್ಕರಣೆ: 83 ವಿಚಾರಗಳ ಮಾರ್ಪಾಡು, ರಾಜ್ಯ ಸರ್ಕಾರ ತಿದ್ದೋಲೆ ಆದೇಶ

    ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪರಿಷ್ಕೃತ ಪಠ್ಯಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಲು ಸರ್ಕಾರ ಮುಂದಾಗಿದೆ. ಪರಿಷ್ಕೃತ ಪಠ್ಯದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ತಿದ್ದೋಲೆ ಆದೇಶ ಹೊರಡಿಸಿದೆ. ಪ್ರಮುಖವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಶಿಲ್ಪಿ ಎಂಬ ಪದ ಕೈಬಿಟ್ಟಿದ್ದು, ಕುವೆಂಪು, ಬಸವಣ್ಣ ನವರ ವಿಚಾರಗಳಲ್ಲಿ ಆಗಿರುವ ತಪ್ಪುಗಳು, ಮಠ-ಮಾನ್ಯಗಳ ವಿಚಾರಗಳನ್ನು ಸರಿಪಡಿಸಲಾಗುತ್ತದೆ. ಮತ್ತೊಮ್ಮೆ ಪರಿಷ್ಕರಣೆಗೆ ಒಳಪಡಿಸುವ ವಿಚಾರಗಳ ಪುಸ್ತಕವನ್ನು ಬುಕ್​ಲೆಟ್ ಮಾದರಿಯಲ್ಲಿ ಮುದ್ರಿಸಿ ಎಲ್ಲ ಶಾಲೆಗಳಿಗೂ ವಿತರಣೆ ಮಾಡುವಂತೆ ಪ್ರಾಥಮಿಕ ಶಿಕ್ಷಣ ಇಲಾಖೆ ಆದೇಶಿಸಿದೆ.

    ಚಕ್ರತೀರ್ಥ ಸಮಿತಿ 1 ರಿಂದ 10ನೇ ತರಗತಿ ಭಾಷಾ ವಿಷಯಗಳು, ಪರಿಸರ ಅಧ್ಯಯನ ಮತ್ತು 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಗಳನ್ನು ಪರಿಷ್ಕರಿಸಿತ್ತು. ಇದರಲ್ಲಿ 6ರಿಂದ 8ನೇ ತರಗತಿಯ ಸಮಾಜ ವಿಜ್ಞಾನದಲ್ಲಿನ 68 ಹಾಗೂ 1ರಿಂದ 10ನೇ ತರಗತಿಯ ಕನ್ನಡ ಭಾಷಾ ವಿಷಯದ 15 ಪರಿಷ್ಕೃತ ಪಠ್ಯ ಸೇರಿ ಒಟ್ಟಾರೆ 83 ವಿಚಾರಗಳನ್ನು ಪರಿಷ್ಕರಿಸಿ ಮುದ್ರಿಸಿ ವಿತರಿಸಲು ಸೂಚಿಸಿದೆ.

    ಪ್ರಸ್ತುತ ತಿದ್ದೋಲೆ ಪ್ರತಿಗಳನ್ನು ಮುದ್ರಿಸಲು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಸೂಚಿಸಲಾಗಿದೆ. ಈ ಪ್ರತಿಯನ್ನು ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಉಚಿತವಾಗಿ ತಲಾ ಒಂದು ಪ್ರತಿಯಂತೆ ವಿತರಿಸಬೇಕು. ತಿದ್ದೋಲೆಯ ವಿಷಯಾಂಶಗಳನ್ನು ಪಠ್ಯಪುಸ್ತಕ ಸಂಘದ ಜಾಲತಾಣದಲ್ಲಿ ಸಾಫ್ಟ್ ಪ್ರತಿ ಅಪ್​ಲೋಡ್ ಮಾಡುವಂತೆ ಇಲಾಖೆ ತಿಳಿಸಿದೆ.

    ಪರಿಷ್ಕೃತ ಪಠ್ಯದ ಪುಟ-ಪುಟಗಳಲ್ಲಿಯೂ ತಪ್ಪುಗಳಿರು ವುದನ್ನು ನಾಡಿನ ಅನೇಕ ಶಿಕ್ಷಣ ತಜ್ಞರು ವಿವರವಾಗಿ ಪಟ್ಟಿಮಾಡಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹೀಗಿದ್ದರೂ ದೋಷಪೂರ್ಣ ಪಠ್ಯವನ್ನು ಸಮರ್ಥಿಸಲು ಹೊರಟಿರುವುದು ಸರ್ಕಾರದ ಉದ್ದಟತನವನ್ನಷ್ಟೇ ತೋರಿಸುತ್ತದೆ.

    |ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

    ಯಾವುದೆಲ್ಲ ಮಾರ್ಪಾಡು, ಸೇರ್ಪಡೆ?

    1. 9ನೇ ತರಗತಿ ಸಮಾಜ ವಿಜ್ಞಾನ ಭಾಗ- 1ರಲ್ಲಿ ‘ನಮ್ಮ ಸಂವಿಧಾನ’ ಪಾಠದಲ್ಲಿ ಸಂವಿಧಾನದ ಕರಡು ರಚನೆ ಸಮಿತಿ ಬಗ್ಗೆ ಉಲ್ಲೇಖವಿದೆ. ಪರಿಷ್ಕೃತ ಪಠ್ಯದಲ್ಲಿ ಸಂವಿಧಾನ ರಚನೆಗೆ ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಕೊಡುಗೆ ಆಧರಿಸಿ ‘ಸಂವಿಧಾನ ಶಿಲ್ಪಿ’ ಎಂದು ಕರೆಯಲಾಗಿದೆ ಎಂಬ ವಾಕ್ಯ ಇಲ್ಲವಾಗಿದ್ದು, ಪುನರ್ ಸೇರ್ಪಡೆ ಮಾಡಲಾಗುತ್ತಿದೆ.
    2. 7ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಭಕ್ತಿ ಪಂಥ ಹಾಗೂ ಸೂಫಿ ಸಂತರು ಪಾಠ ಕೈಬಿಡಲಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಭಾಗ-2ರಲ್ಲಿ ಭಕ್ತಿಪಂಥ ಅಧ್ಯಾಯದಲ್ಲಿ ಪುರಂದರದಾಸ, ಕನಕದಾಸರ ಕುರಿತ ವಿಷಯ ಸಂಕ್ಷಿಪ್ತಗೊಳಿಸಲಾಗಿದೆ. ಇದೀಗ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಭಕ್ತಿ ಪಂಥ ಹಾಗೂ ಸೂಫಿ ಸಂತರು ಸಂಪೂರ್ಣ ಪಾಠ ಮರು ಸೇರ್ಪಡೆ.
    3. 7ನೇ ತರಗತಿ ಕನ್ನಡದಲ್ಲಿ ‘ಗೊಂಬೆ ಕಲಿಸುವ ನೀತಿ’ ಪಾಠದಲ್ಲಿ ಕೃತಿಕಾರರ ಹೆಸರು ಡಾ.ಆರ್.ಎನ್.ಜಯಗೋಪಾಲ್ ಎಂದು ತಪ್ಪಾಗಿ ಮುದ್ರಣಗೊಂಡಿದ್ದು, ಮೂಲ ಕೃತಿಕಾರ ಚಿ.ಉದಯಶಂಕರ್ ಕವಿ ಪರಿಚಯ.
    4. 6ನೇ ತರಗತಿ ಸಮಾಜ ವಿಜ್ಞಾನ ಭಾಗ-1 ‘ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’ ಪಾಠದಲ್ಲಿ ಸಿದ್ಧಗಂಗಾ ಮತ್ತು ಆದಿಚುಂಚನಗಿರಿ ಮಠದ ಸೇವೆಯ ಸಾಲುಗಳ ಪುನರ್ ಸೇರ್ಪಡೆ.
    5. 7ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಮೈಸೂರು ಮತ್ತು ಇತರ ಸಂಸ್ಥಾನಗಳು ಪಾಠದಲ್ಲಿದ್ದ ಸುರಪುರ ನಾಯಕರ ಉಲ್ಲೇಖ.
    6. 9ನೇ ತರಗತಿ ಸಮಾಜ ವಿಜ್ಞಾನ ಭಾಗ-1 ಪಠ್ಯದಲ್ಲಿ ‘ಭಾರತದ ಮತ ಪ್ರವರ್ತಕರು’ ಅಧ್ಯಾಯದಲ್ಲಿ ಬಸವಣ್ಣನವರ ಕುರಿತಾದ ವಿಷಯಾಂಶ ಮಾರ್ಪಡಿಸಲಾಗುತ್ತದೆ.
    7. 7ನೇ ತರಗತಿ ಸಮಾಜ ವಿಜ್ಞಾನ ಭಾಗ-2ರ ‘ಕರ್ನಾಟಕ ಏಕೀಕರಣ- ಗಡಿ ವಿವಾದ ಗಳು’ ಪಾಠದಲ್ಲಿ ಕುವೆಂಪು, ಹುಯಿಲಗೋಳ ನಾರಾಯಣರಾವ್ ಭಾವಚಿತ್ರಗಳ ಅಳವಡಿಕೆ.
    8. 4ನೇ ತರಗತಿ ಪರಿಸರ ಅಧ್ಯಯನದಲ್ಲಿ ‘ಪ್ರತಿಯೊಬ್ಬರು ವಿಶಿಷ್ಟ’ದಲ್ಲಿ ‘ಕುವೆಂಪುಗೆ ಚಿಕ್ಕಿಂದಿನಿಂದಲೂ ಕಥೆ, ಕವನ, ಪುಸ್ತಕ ಓದುವ, ಬರೆಯುವ ಅಭ್ಯಾಸ ಇತ್ತು ಎಂಬ ವಾಕ್ಯದ ನಂತರ ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’ ಎಂಬ ಸಾಲನ್ನು ಕೈಬಿಡುವುದು.
    ಕನಕದಾಸರ ಹಳೇ ಪಠ್ಯವೇ ಮುಂದುವರಿಕೆ

    ಪಠ್ಯದಲ್ಲಿ ಕನಕದಾಸರ ಹಿಂದಿನ ಪಾಠವನ್ನೇ ಯಥಾವತ್ ಆಗಿ ಮುಂದುವರಿ ಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಮಾಡಿದ್ದಾರೆ. ಕನಕದಾಸರ ಪಠ್ಯಕ್ಕೆ ಕತ್ತರಿ ಹಾಕಿರುವ ಬಗ್ಗೆ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮಿಜಿ 2 ದಿನಗಳ ಹಿಂದೆ, ಹಳೆಯ ಪಠ್ಯ ಮುಂದುವರಿಸಿ ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗುವಂತೆ ಸಿಎಂಗೆ ನೇರ ವಾಗಿಯೇ ಎಚ್ಚರಿಕೆ ನೀಡಿದ್ದರು. ಸೋಮವಾರ ಬೆಂಗಳೂರಿನಲ್ಲಿ ಬೊಮ್ಮಾಯಿ ಭೇಟಿ ಮಾಡಿದ ಸ್ವಾಮೀಜಿ, ಪತ್ರ ನೀಡಿದರು. ತಕ್ಷಣವೇ ಸಿಎಂ ಈ ಆದೇಶ ಮಾಡಿದ್ದಾರೆ. ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದಲ್ಲಿ ಕಾಗಿನೆಲೆ ಸ್ವಾಮೀಜಿ ಪ್ರಭಾವ ಹೆಚ್ಚಿರುವುದರಿಂದಲೇ ತಕ್ಷಣ ಸ್ಪಂದಿಸಿದರೆಂದು ಹೇಳಲಾಗಿದೆ.

    ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts