ನಾಡೋಜ ಡಾ. ಜಿ.ಶಂಕರ್ ಸಲಹೆ | ರಂಗಭೂಮಿ ಆನಂದೋತ್ಸವ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಹೊಸತನ, ಬದಲಾವಣೆ ನೆಪದಲ್ಲಿ ಕೆಲವು ನಾಟಕ ಸಂಘಟನೆಗಳು ಅಸಂಬದ್ಧ ಹಾಗೂ ಅರ್ಥವೇ ಆಗದ ನಾಟಕ ಪ್ರದರ್ಶಿಸುತ್ತಿವೆ. ನಾಟಕಗಳು ಪ್ರೇಕ್ಷಕರಿಗೆ ನಗು, ನೆಮ್ಮದಿ ತರುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿರಬೇಕು ಎಂದು ನಾಡೋಜ ಡಾ. ಜಿ.ಶಂಕರ್ ಸಲಹೆ ನೀಡಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ (ರಿ.) ಉಡುಪಿ ವತಿಯಿಂದ ದಿ. ಕುತ್ಪಾಡಿ ಆನಂದ ಗಾಣಿಗ ಅವರ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ರಂಗಭೂಮಿ ಆನಂದೋತ್ಸವ ಹಾಗೂ ವಿವಿಧ ಕ್ಷೇತ್ರಗಳ ಸಾಧಕ ಆನಂದ ಸಿ. ಕುಂದರ್ ಅವರಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ತಲ್ಲೂರು ಗಿರಿಜಾ ಶಿವರಾಂ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲ ಕಲೆ ಬೆಳೆಸೋಣ
ಕಲೆ, ಕಲಾವಿದರನ್ನು ನಾವೆಲ್ಲ ಸೇರಿ ಬೆಳೆಸೋಣ. ದಿ.ಕುತ್ಪಾಡಿ ಆನಂದ ಗಾಣಿಗ ಅವರ ಕನಸನ್ನು ನನಸು ಮಾಡೋಣ. ಕಲೆಯ ಉಳಿವಿಗೆ ನಿರಂತರ ಶ್ರಮ ನೀಡುತ್ತಿರುವ ರಂಗಭೂಮಿ ಉಡುಪಿಗೆ 5 ಲಕ್ಷ ರೂ. ಸಹಾಯ ನೀಡುವುದಾಗಿ ತಿಳಿಸಿದರು. ಅಲ್ಲದೆ, ಸರ್ಕಾರವೂ ಸಹ ಕಲೆಯ ರಕ್ಷಣೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದ ಔಚಿತ್ಯದ ಕುರಿತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ ನರೇಂದ್ರ ಕುಮಾರ್ ಕೋಟ ಕವನದ ಮೂಲಕ ವಿವರಿಸಿದರು. ಮಂಗಳೂರಿನ ನಾಟಕಕಾರ ಶಶಿರಾಜ್ ರಾವ್ ಕಾವೂರು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಮಾತನಾಡಿದರು.
ಗೀತಾ ಕುಂದರ್, ರಂಗಭೂಮಿಯ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಕಿದಿಯೂರ್, ಎನ್. ರಾಜಗೋಪಾಲ ಬಲ್ಲಾಳ್, ಕೋಶಾಧಿಕಾರಿ ಭೋಜ ಯು., ಜತೆ ಕಾರ್ಯದರ್ಶಿಗಳಾದ ಶ್ರೀಪಾದ ಹೆಗಡೆ, ವಿವೇಕಾನಂದ ಎನ್. ಉಪಸ್ಥಿತರಿದ್ದರು.
ರಂಗಭೂಮಿ ಉಡುಪಿಯ ಅಧ್ಯಕ್ಷ ಹಾಗೂ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಂ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ ಚಂದ್ರ ಕುತ್ಪಾಡಿ ಸ್ವಾಗತಿಸಿದರು. ಪೂರ್ಣಿಮಾ ಸುರೇಶ್ ವಂದಿಸಿದರು. ಡಾ. ವಿಷ್ಣುಮೂರ್ತಿ ಪ್ರಭು ಕಾರ್ಯಕ್ರಮ ನಿರೂಪಿಸಿದರು.
ನಾಟಕ ಪ್ರದರ್ಶನ
ಶಶಿರಾಜ್ ರಾವ್ ಕಾವೂರು ರಚನೆ, ನಿರ್ದೇಶನದಲ್ಲಿ ಮಂಗಳೂರಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರದರ್ಶಿಸಿದ ನೆಮ್ಮದಿ ಅಪಾರ್ಟ್ಮೆಂಟ್ ಬ್ಲಾಕ್ ಬಿ ನಾಟಕ ಪ್ರೇಕ್ಷಕರನ್ನು ರಂಜಿಸಿತು.
ಸೇವೆ, ತ್ಯಾಗ ನಮ್ಮ ನಾಡಿನ ಸಂಸ್ಕೃತಿ
ಪ್ರಶಸ್ತಿ ಸ್ವೀಕರಿಸಿದ ಕೋಟದ ಗೀತಾನಂದ ಪ್ರತಿಷ್ಠಾನದ ಪ್ರವರ್ತಕ ಆನಂದ್ ಸಿ. ಕುಂದರ್ ಮಾತನಾಡಿ, ಬಾಲ್ಯದಲ್ಲಿ ಅನುಭವಿಸಿದ ಬಡತನ ನೆನಪಿಟ್ಟುಕೊಂಡು ಮುಂದೆ ದೈವಬಲದಿಂದ ಆರ್ಥಿಕ ಸಬಲರಾದರೆ ಬಡವರಿಗೆ ಸಹಾಯ ಮಾಡಬೇಕು. ಪರೋಪಕಾರ, ಸೇವೆ ಹಾಗೂ ತ್ಯಾಗ ನಮ್ಮ ನಾಡಿನ ಸಂಸ್ಕೃತಿಯಾಗಿದೆ. ನನ್ನ ಅಣ್ಣ ಕೆ.ಸಿ. ಕುಂದರ್ ಅವರು ಬಡವರಿಗೆ ಸಹಾಯ ಮಾಡುತ್ತಿದ್ದರು. ಅದನ್ನು ನೋಡುತ್ತ ಬೆಳೆದ ನಾನೂ ಸಹ ದೇವರ ಕೃಪೆಯಿಂದಾಗಿ ಪರೋಪಕಾರ ಮಾಡುತ್ತಿದ್ದೇನೆ. ಗಳಿಸಿದ ಹಣ ನಮ್ಮ ತಲೆಹತ್ತಿ ಕುಳಿತುಕೊಳ್ಳಬಾರದು. ಪೇಜಾವರ ಶ್ರೀಗಳು, ‘ನಾವು ನೀಡಿದ ಸಹಾಯದಿಂದ ಬೀಗಬಾರದು, ಬಾಗಬೇಕು. ನಾವು ಬಡವರಿಗೆ ನೀಡುವ ಸಹಕಾರ ದೇವರಿಗೆ ಕೊಡುವ ಕರ’ ಎಂದು ಹೇಳಿದ್ದರು. ಶ್ರೀಗಳ ಆ ಮಾತಿನಂತೆ ನಾನು ಸಮಾಜದ ಏಳಿಗೆಗೆ ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದರು.