More

    ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು: ವಿಪಕ್ಷಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

    ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೇ ವಿಪಕ್ಷಗಳ ವಿರುದ್ಧ ಗುಡುಗಿದ ಪ್ರಧಾನಿ ಮೋದಿ, ನಿಮ್ಮ ಹಾದಿಯನ್ನು ಸರಿಪಡಿಸಿಕೊಳ್ಳಿ ಇಲ್ಲದಿದ್ದರೆ, ಸಾರ್ವಜನಿಕರು ನಿಮ್ಮನ್ನು ಹೊರಹಾಕುತ್ತಾರೆ ಎಂದು ಖಡಕ್​ ಎಚ್ಚರಿಕೆ ನೀಡಿದರು.

    ರಾಜ್ಯಗಳ ಹೃದಯಭಾಗವಾದ ಮಧ್ಯಪ್ರದೇಶದಲ್ಲಿ ಭರ್ಜರಿ ಗೆಲುವಿನೊಂದಿಗೆ ಬಿಜೆಪಿ ತನ್ನ ಅಧಿಕಾರ ಉಳಿಸಿಕೊಂಡಿದ್ದು, ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಪಕ್ಷವನ್ನು ಹೊರದಬ್ಬಿದೆ. ಈ ಅಭೂತಪೂರ್ವ ಗೆಲುವು 2024 ಲೋಕಸಭಾ ಚುನಾವಣೆಯ ಹ್ಯಾಟ್ರಿಕ್​ ಗೆಲುವಿನ ದಿಕ್ಸೂಚಿ ಎಂದು ಪ್ರಧಾನಿ ಮೋದಿ ಕರೆದರು.

    ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಚುನಾವಣಾ ಗೆಲುವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದಿನ ಗೆಲುವು ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ. ಇದು ಸಬ್​ಕಾ ಸಾತ್, ಸಬ್​ಕಾ ವಿಕಾಸ್​​ ಗೆಲುವು, ಅಭಿವೃದ್ಧಿ ಹೊಂದಿದ ಭಾರತದ ಕರೆ ಗೆದ್ದಿದೆ, ದಮನಿತರ ವಿಚಾರ (ಧ್ವನಿ) ಗೆದ್ದಿದೆ, ಪ್ರಾಮಾಣಿಕತೆ ಮತ್ತು ಉತ್ತಮ ಆಡಳಿತ ಗೆದ್ದಿದೆ ಎಂದು ಬಣ್ಣಿಸಿದರು.

    ಈ ಹ್ಯಾಟ್ರಿಕ್ ಗೆಲುವು​ 2024ರ ಹ್ಯಾಟ್ರಿಕ್​ ಗೆಲುವನ್ನು ಖಾತ್ರಿಪಡಿಸಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಭ್ರಷ್ಟಾಚಾರ, ತುಷ್ಟೀಕರಣ ಮತ್ತು ವಂಶಾಡಳಿತ ರಾಜಕಾರಣದ ಮೇಲೆ ಜನರು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದಾರೆ ಎಂಬುದನ್ನು ಇಂದಿನ ಜನಾದೇಶ ಸಾಬೀತುಪಡಿಸಿದೆ. ಇಂದಿನ ಫಲಿತಾಂಶ ಕಾಂಗ್ರೆಸ್​ ಮತ್ತು ಘಮಾಂಡಿಯಾ (ದುರಹಂಕಾರ) ಮೈತ್ರಿಕೂಟಕ್ಕೆ ದೊಡ್ಡ ಪಾಠವಾಗಿದೆ. ಭ್ರಷ್ಟಾಚಾರ ವಿರುದ್ಧದ ಅಭಿಯಾನಕ್ಕೆ ಬಹುದೊಡ್ಡ ಬೆಂಬಲ ಸಿಕ್ಕಿದೆ. ಭ್ರಷ್ಟರ ಜೊತೆ ನಿಲ್ಲಲು ನಾಚಿಕೆ ಇಲ್ಲದ ಪಕ್ಷಗಳು ಮತ್ತು ನಾಯಕರಿಗೆ ಮತದಾರರು ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದಾರೆ ಎಂದರು.

    2024ರ ಚುನಾವಣೆಗೆ ಸಂಭಾವ್ಯ ಪ್ರಮುಖ ವಿಷಯವಾಗಿರುವ ರಾಷ್ಟ್ರೀಯ ಜಾತಿ ಗಣತಿಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ಹರಿಹಾಯ್ದರು. ಜಾತಿಗಣತಿ ಆಧಾರದ ಮೇಲೆ ದೇಶವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ಮಹಿಳಾ, ಯುವ ಜನತೆ, ರೈತರು ಮತ್ತು ಬಡ ಜನರು ಎಂಬ ನಾಲ್ಕು ಸಮುದಾಯಗಳನ್ನು ಮಾತ್ರ ನಾವು ದೇಶದಲ್ಲಿ ಹೊಂದಿದ್ದೇವೆ. ಈ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮೂಲಕ ದೇಶವನ್ನು ಸಬಲಗೊಳಿಸಬಹುದು, ಇವರೆಲ್ಲರೂ ಬಿಜೆಪಿಯ ಯೋಜನೆಗಳು ಮತ್ತು ಭಾರತಕ್ಕಾಗಿ ಮತ್ತು ಅದರ ಮಾರ್ಗಸೂಚಿಗಾಗಿ ಉತ್ಸಾಹವನ್ನು ತೋರಿಸಿದ್ದಾರೆ ಎಂದರು.

    ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಜನರು ಬಿಜೆಪಿಯ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ. ತೆಲಂಗಾಣದಲ್ಲಿಯೂ ಸಹ ಬಿಜೆಪಿಗೆ ಜನರ ಬೆಂಬಲ ನಿರಂತರವಾಗಿ ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದರು. ಇದರ ಜತೆಗೆ ಧನ್ಯವಾದಗಳನ್ನು ತಿಳಿಸಿದರು. (ಏಜೆನ್ಸೀಸ್​)

    3 ರಾಜ್ಯಗಳ ಭರ್ಜರಿ ಗೆಲುವು 2024ರ ಹ್ಯಾಟ್ರಿಕ್​ ಗೆಲುವಿನ ದಿಕ್ಸೂಚಿ: ಪ್ರಧಾನಿ ಮೋದಿ

    3ರಾಜ್ಯ ಗೆದ್ದು ಬೀಗಿದ ಬಿಜೆಪಿ: 2ಕಡೆ ‘ಕೈ’ಕಚ್ಚಿಸಿಕೊಂಡ ಕಾಂಗ್ರೆಸ್​- ತೆಲಂಗಾಣ ಗೆಲುವು ತಂದ ಸಮಾಧಾನ!

    ಮೂರು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲು: ರಾಹುಲ್​ ಗಾಂಧಿ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts