ತೂತುಬಿದ್ದ ಗುಡಿಸಲು, ಸೆಕ್ಯುರಿಟಿ ಕೆಲಸ: ಕಷ್ಟದ ಹಾದಿ ಮೆಟ್ಟಿನಿಂತು ಪ್ರಾಧ್ಯಾಪಕನಾದ ಯುವಕನ ಯಶೋಗಾಥೆ!

IIM Prof
Published on

ಕಾಸರಗೋಡು/ರಾಂಚಿ: ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬ ಮಾತಿಗೆ ಕೇರಳ ಮೂಲದ 28 ವರ್ಷದ ರಂಜಿತ್​ ರಾಮಚಂದ್ರನ್ ಅವರು ತಾಜಾ ಉದಾಹರಣೆಯಾಗಿದ್ದಾರೆ.

ತಮ್ಮ ಬಹುದಿನಗಳ ಕನಸನ್ನು ಇತ್ತೀಚೆಗಷ್ಟೇ ನನಸು ಮಾಡಿಕೊಂಡ ರಂಜಿತ್​,​ ರಾಂಚಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್​ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ. ಸಹನೆಯೊಂದಿಗೆ ಸಾಧಿಸುವ ಹಂಬಲವಿದ್ದರೆ, ಯಶಸ್ಸು ಕಂಡಿತ ಎನ್ನುವುದಕ್ಕೆ ಉದಾಹರಣೆ ಆಗಿರುವ ರಂಜಿತ್​ ಅವರ ಯಶೋಗಾಥೆ ಎಲ್ಲರಿಗು ಸ್ಫೂರ್ತಿ ನೀಡುತ್ತದೆ.

ಬಡ ಕುಟುಂಬದಲ್ಲಿ ಹುಟ್ಟಿದ ರಂಜಿತ್​ ಅವರ ಮೂಲ ಕೇರಳದ ಕಾಸರಗೋಡು ಜಿಲ್ಲೆ. ಇವರ ತಾಯಿ ನರೇಗಾ ಕೆಲಸವನ್ನು ನಂಬಿದ್ದಾರೆ. ಸಣ್ಣ ಗುಡಿಸಲು, ತೂತು ಬಿದ್ದ ಛಾವಣಿ ಮತ್ತು ಇಕ್ಕಾಟದ ಕೋಣೆಯಲ್ಲೇ ರಂಜಿತ್​ ಕುಟುಂಬದ ವಾಸ. ಇವರು ಮನೆಯ ಹಿರಿಯ ಮಗ.

ರಂಜಿತ್​ ಅವರು ರಾಜ್ಯದಲ್ಲಿ ಮರಾಠಿ ಮಾತನಾಡುವ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಆದರೆ, ಇವರೆಂದಿಗೂ ತಮ್ಮ ಈ ಸ್ಥಾನಕ್ಕೆ ಬರಲು ಮೀಸಲಾಯಿಯನ್ನು ಬಳಸಿಕೊಳ್ಳಲೇ ಇಲ್ಲ. ತನ್ನ ವಿದ್ಯಾಭ್ಯಾಸದೊಂದಿಗೆ ಮನೆಯವರಿಗೆ ಸಹಾಯ ಮಾಡಲು ನಿರ್ಧರಿಸಿದ ರಂಜಿತ್​, ಬಿಎಸ್​ಎನ್​ಎಲ್​ ಟೆಲಿಫೋನ್​ ಎಕ್ಸ್​ಚೇಂಜ್​ ಆಫೀಸ್​ನಲ್ಲಿ ರಾತ್ರಿ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸಕ್ಕೆ ಸೇರಿದರು. ಆವಾಗ ತಿಂಗಳಿಗೆ 4000 ಸಾವಿರ ರೂ. ಸಂಬಳ.

ಅಂದಿನಿಂದ ಟೆಲಿಫೋನ್​ ಎಕ್ಸ್​ಚೇಂಜ್​ ಆಫೀಸ್​ ರಂಜಿತ್​ ಅವರಿಗೆ ತಾತ್ಕಾಲಿಕ ಮನೆಯಾಯಿತು. ಶಾಲೆ ಹಾಗೂ ಕಾಲೇಜಿನಿಂದ ನೇರವಾಗಿ ಇಲ್ಲಿಗೆ ಬರುತ್ತಿದ್ದರು. ಕೇವಲ ಊಟ ಮಾಡಲು ಮಾತ್ರ ಮನೆಗೆ ಹೋಗುತ್ತಿದ್ದರು. ತಮ್ಮ ನಿರಂತರ ಪರಿಶ್ರಮದಿಂದಾಗಿ ಹೈಸ್ಕೂಲ್​, ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಯಶಸ್ವಿಯಾಗಿ ಮುಗಿಸಿದ ರಂಜಿತ್​, ಪಿಎಚ್​ಡಿ ಮಾಡಲು ಐಐಟಿ ಮದ್ರಾಸ್​ಗೆ ತೆರಳಿದರು. ಆದಾಗ್ಯು ದುಡ್ಡಿನ ಸಮಸ್ಯೆ ಅವರಿಗೆ ಕಾಡುತ್ತಲೇ ಇತ್ತು. ಹೀಗಾಗಿ ಐಐಟಿ ತೊರೆಯಲು ಬಯಸಿದರು.

ಆದರೆ, ಐಐಟಿ ಕ್ಯಾಂಪಸ್​ನಲ್ಲಿ ನೆಲೆಸಿದ್ದ ಡಾ. ಸುಬಾಶ್​ ಸಸಿಧರನ್​ ಮತ್ತು ಅವರ ಪತ್ನಿ ವೈದೇಹಿ, ರಂಜಿತ್​ ನೆರವಿಗೆ ಧಾವಿಸಿದರು. ನನ್ನ ಮಾರ್ಗದರ್ಶಕರಾದ ಪ್ರೋಫೆಸರ್​ ಸುಬಾಶ್ ಅವರು ನನ್ನನ್ನು ಮನವೊಲಿಸಿ ಮತ್ತು ಹುರಿದುಂಬಿಸಿ ಐಐಟಿ ಬಿಡದಂತೆ ತಡೆದರು ಎಂದು ರಂಜಿತ್​ ಹೇಳಿಕೊಂಡಿದ್ದಾರೆ.

ಉತ್ತಮ ಮಾರ್ಗದರ್ಶಕರ ಸಹಾಯದಿಂದ ತಮ್ಮ ಕನಸಿನ ಬೆನ್ನತ್ತಿ ಹೊರಟ ರಂಜಿತ್​ ಕೊನೆಗೂ 2016ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪಿಎಚ್​ಡಿ ಪಡೆದರು. ಇದಾದ ಬಳಿಕ ಬೆಂಗಳೂರಿನ ಕ್ರೈಸ್ಟ್​ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಪಕ ವೃತ್ತಿಗೆ ಸೇರಿಕೊಂಡರು. ಇದರ ಬೆನ್ನಲ್ಲೇ ಇದೀಗ ರಾಂಚಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್​ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ.

ಪ್ರತಿಷ್ಠಿತ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಿರುವುದು ಸಾಧನೆಯೇ ಸರಿ. ಅದರಲ್ಲೂ ರಂಜಿತ್​ ಅವರ ಜೀವನ ಪಯಣ ನಿಜಕ್ಕೂ ಮಾದರಿಯಾಗಿದೆ. ಇದೀಗ ತಮ್ಮ ಫೇಸ್​ಬುಕ್​ನಲ್ಲಿ ತನ್ನ ಮನೆಯ ಚಿತ್ರವನ್ನು ಪೋಸ್ಟ್​ ಮಾಡಿ ನಾನು ಇಲ್ಲಿ ಹುಟ್ಟಿ ಇಂದು ಐಐಎಂ ಸಹಾಯಕ ಪ್ರಾಧ್ಯಪಕನಾಗಿದ್ದೇನೆಂದು ಬರೆದುಕೊಂಡಿದ್ದಾರೆ. ರಂಜಿತ್​ ಅವರ ಪೋಸ್ಟ್​ಗೆ ಮೆಚ್ಚುಗೆಗಳ ಸುರಿಮಳೆಯಾಗುತ್ತಿದೆ. ರಂಜಿತ್​ ಅವರ ಪಯಣ ಎಲ್ಲರಿಗೂ ದಾರಿದೀಪವಾಗಲಿ ಎಂದು ಎಲ್ಲರು ಬಯಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net