More

  ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ: ಇನ್ಮುಂದೆ ನಾನು ನಿದ್ದೆ ಮಾಡಲ್ಲ ಎಂದ ರೇಣುಕಾಚಾರ್ಯ

  ದಾವಣಗೆರೆ: ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರದ ಶಾಸಕ ಬಿ.ವೈ. ವಿಜಯೇಂದ್ರ ನೇಮಕವಾದ ಬೆನ್ನಲ್ಲೇ ಹೊನ್ನಾಳಿ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು​ ರಾಜಕೀಯದಲ್ಲಿ ಮತ್ತೆ ಫುಲ್ ಆ್ಯಕ್ಟೀವ್ ಆಗಿದ್ದಾರೆ.

  ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಇನ್ಮುಂದೆ ನಾನು ನಿದ್ದೆ ಮಾಡುವುದಿಲ್ಲ! ವಿಜಯೇಂದ್ರ ಜೊತೆ ಸೇರಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತೇನೆ. 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಸಂಘಟನೆ ಮಾಡುತ್ತೇನೆ ಎಂದರು.

  ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಫುಲ್​ ಸೈಲೆಂಟ್​ ಆಗಿದ್ದ ರೇಣುಕಾಚಾರ್ಯ, ಮತ್ತೆ ಆ್ಯಕ್ಟೀವ್​ ಆಗಿದ್ದಾರೆ. ಪಕ್ಷದ ಹಿರಿಯ ಕಾರ್ಯಕರ್ತರು, ಮಾಜಿ ಶಾಸಕರನ್ನು ಭೇಟಿ ಮಾಡುತ್ತಿದ್ದಾರೆ. ಮಾಜಿ ಶಾಸಕ ಎಸ್. ವಿ. ರವೀಂದ್ರನಾಥ್​ರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇದನ್ನು ನೋಡಿದರೆ, ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ದಾವಣಗೆರೆ ಲೋಕಸಭೆಯಿಂದ ಸ್ಪರ್ಧೆ ಮಾಡುವುದಾಗಿ ರೇಣುಕಾಚಾರ್ಯ ಹೇಳಿಕೊಂಡಿದ್ದರು. ನೂತನ ರಾಜ್ಯಾಧ್ಯಕ್ಷರ ನೇಮಕ ನಂತರ ಆ್ಯಕ್ಟೀವ್​ ಆಗಿರುವ ರೇಣುಕಾಚಾರ್ಯಗೆ ದಾವಣಗೆರೆ ಲೋಕಸಭಾ ಟಿಕೆಟ್ ಅಂತಿಮವಾಯಿತಾ ಎಂಬ ಚರ್ಚೆಯು ಸಹ ಹುಟ್ಟಿಕೊಂಡಿದೆ.

  ವಿಜಯೇಂದ್ರ ನೇಮಕಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಮೋದಿಜೀ, ಜೆಪಿ ನಡ್ಡಾ, ಅಮಿತ್ ಶಾ ಅವರಿಗೆ ವಿಶೇಷವಾಗಿ ಧನ್ಯವಾದ ಹೇಳುತ್ತೇವೆ. ದೀಪಾವಳಿ ಹಬ್ಬಕ್ಕೆ ಕಾಂಗ್ರೆಸ್​ನವರಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷ ಇಲ್ಲ ಎಂದು ಕಾಂಗ್ರೆಸ್​ನವರು ಟೀಕೆ ಮಾಡುತ್ತಿದ್ದರು. ವಿಜಯೇಂದ್ರಗೆ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ನೀಡಿದ್ದು, ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದರು.

  ಕುಟುಂಬ ರಾಜಕಾರಣ ಎಂದು ಕಾಂಗ್ರೆಸ್​ನ ಸಚಿವ ಪ್ರಿಯಾಂಕ ಖರ್ಗೆ ಟೀಕೆ ಮಾಡಿರುವುದಕ್ಕೆ ತಿರುಗೇಟು ನೀಡಿದ ರೇಣುಕಾಚಾರ್ಯ, ಅವರಿಗೆ ಟೀಕೆ ಮಾಡುವ ನೈತಿಕತೆ ಇಲ್ಲ. ನೆಹರು ಅವರಿಂದಿಡಿದು ರಾಹುಲಲ್​ ಗಾಂಧಿವರೆಗೂ ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದರು. ವಿಜಯೇಂದ್ರ ಪಕ್ಷದಲ್ಲಿ ಹಲವು ಜವಾಬ್ದಾರಿ ಗಳನ್ನು ವಹಿಸಿಕೊಂಡು ಬಂದಿದ್ದಾರೆ. ಬಿಜೆಪಿ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಯಡಿಯೂರಪ್ಪ ಪುತ್ರ ಎಂದು ಅವರಿಗೆ ಈ ಸ್ಥಾನವನ್ನು ಕೊಟ್ಟಿಲ್ಲ. ಬದಲಾಗಿ ಅವರ ಸಾಮರ್ಥ್ಯ ನೋಡಿ ಕೊಟ್ಟಿದ್ದಾರೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿ ನಿಮಗೆ ಸಚಿವ ಸ್ಥಾನ‌ ನೀಡಿದ್ದಾರೆ ಅಷ್ಟೇ. ಬಂಗಾರಪ್ಪ, ಗುಂಡುರಾವ್​​ ಪುತ್ರರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ, ಕಾಂಗ್ರೆಸ್​ನಲ್ಲಿ ಕುಟುಂಬ ರಾಜಕಾರಣ ಇದೆ ಹೊರತು ಬಿಜೆಪಿಯಲ್ಲಿ ಇಲ್ಲ ಎಂದರು.

  ವಿಜಯೇಂದ್ರ ರಾಜ್ಯಾಧ್ಯಕ್ಷ ಆಗುವುದು ಕಾರ್ಯಕರ್ತರ ಧ್ವನಿಯಾಗಿತ್ತು. ಮೋದಿಯವರು ಮತ್ತೆ ಪ್ರಧಾನಿಯಾಗಲು ಇಲ್ಲಿ ಸಮರ್ಥ ನಾಯಕ ಬೇಕಿತ್ತು. ಯಡಿಯೂರಪ್ಪನವರ ನೇತೃತ್ವದಲ್ಲೇ ಈ ಬಾರಿಯೂ ಚುನಾವಣೆ ಮಾಡುತ್ತೇವೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿದ್ದು ಇಡೀ ರಾಜ್ಯದ ಯುವಜನತೆಗೆ ಉಮ್ಮಸ್ಸು ಬಂದಿದೆ. ನಾನು ಕಾಂಗ್ರೆಸ್​ಗೆ ಹೋಗುತ್ತೇನೆ ಎಂದು ಹೇಳಿಲ್ಲ. ನನ್ನನ್ನು ಪಕ್ಷದಿಂದ ಹೊರ ಕಳಿಸುವ ಕೆಲಸವನ್ನು ಕೆಲವರು ಮಾಡಿದರು. ಆದರೆ, ನಾನು ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ದಾವಣಗೆರೆ ಲೋಕಾಸಭಾ ಟಿಕೆಟ್ ಅಕಾಂಕ್ಷಿಯಾಗಿದ್ದೇನೆ. ಇದರೊಂದಿಗೆ ರಾಜ್ಯ ಸಂಚಾರ ಮಾಡಿ ಬಿಜೆಪಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆಂದು ತಿಳಿಸಿದರು.

  ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಕೆಲವರಿಗೆ ಬೇಸರ ತರಿಸಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಕೆಲವರಲ್ಲಿ ಬೇಸರ ಇದ್ದೇ ಇರುತ್ತದೆ. ಆದರೆ, ಪಕ್ಷಕ್ಕಾಗಿ ದುಡಿಯಬೇಕು. ಪ್ರಾರಂಭದಲ್ಲಿ ಬೇಸರವಿರುತ್ತದೆ ನಂತರ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದರು.

  ನಮ್ಮ ಯೋಧರು ಹಿಮಾಲಯದಂತೆ ದೃಢವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತ: ಪ್ರಧಾನಿ ಮೋದಿ

  ಟೀಂ ಇಂಡಿಯಾದಂತೆ ಪಾಕಿಸ್ತಾನ ತಂಡವು ಬಲಿಷ್ಠವಾಗುತ್ತದೆ: ಸೌರವ್​ ಗಂಗೂಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts