More

    ಒಟಿಪಿ ಇಲ್ಲದೆ ಖಾತೆಯಿಂದ ಲಕ್ಷ ಲಕ್ಷ ಗುಳುಂ !

    ನವೀನ್ ಬಿಲ್ಗುಣಿ ಶಿವಮೊಗ್ಗ
    ಆನ್‌ಲೈನ್‌ನಲ್ಲಿ ವ್ಯವಹರಿಸುವಾಗ ಜಾಗೃತರಾಗಿರುವಂತೆ ಪೊಲೀಸ್ ಇಲಾಖೆ, ಬ್ಯಾಂಕ್‌ಗಳು ಪದೇಪದೆ ಎಚ್ಚರಿಕೆ ನೀಡುತ್ತಿದ್ದರೂ ಆನ್‌ಲೈನ್‌ನಲ್ಲಿ ವಂಚನೆಗೆ ಒಳಗಾಗುವರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಇಷ್ಟು ದಿನ ಒಟಿಪಿ(ಒನ್ ಟೈನ್ ಪಾಸ್‌ವರ್ಡ್) ಶೇರ್ ಮಾಡದಂತೆ ಅರಿವು ಮೂಡಿಸಲಾಗುತ್ತಿತ್ತು. ಆದರೆ ಇದೀಗ ವಂಚನೆಗೆ ಹೊಸ ಮಾರ್ಗ ಕಂಡುಕೊಂಡಿರುವ ಖದೀಮರು ರಾಟ್(ರಿಮೋಟ್ ಅಕ್ಸೆಸ್ ಟೂಲ್) ತಂತ್ರ ಬಳಸಿ ಮೊಬೈಲ್‌ಗೆ ಒಟಿಪಿ ಬಾರದೆಯೂ ಬ್ಯಾಂಕ್ ಖಾತೆಗಳಿಂದ ಲಕ್ಷಾಂತರ ರೂ. ಗುಳುಂ ಮಾಡುತ್ತಿದ್ದಾರೆ.

    ಇದುವರೆಗೆ ಮೊಬೈಲ್‌ಗೆ ಬರುವ ಒಟಿಪಿ ಇಲ್ಲದೆ ಬ್ಯಾಂಕ್ ಖಾತೆಯಿಂದ ಹಣ ವಂಚನೆ ಮಾಡಲು ಆಗುತ್ತಿರಲಿಲ್ಲ. ಆದರೆ ಇದೀಗ ಒಟಿಪಿ ಬಾರದೆಯೇ ಗ್ರಾಹಕರ ಬ್ಯಾಂಕ್ ಖಾತೆಯಿಂದ ಲಕ್ಷ ಲಕ್ಷ ರೂ. ಮಾಯವಾಗುತ್ತಿದೆ. ಎಲ್ಲೋ ಕುಳಿತು ಆನ್‌ಲೈನ್ ಮೂಲಕವೇ ಗ್ರಾಹಕರ ಮಾಹಿತಿ ಪಡೆದು ಬ್ಯಾಂಕ್ ಖಾತೆಯನ್ನೇ ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳುತ್ತಿದ್ದಾರೆ.
    ವಿಚಿತ್ರವೆಂದರೆ ಶಿವಮೊಗ್ಗ ಜಿಲ್ಲೆಯಲ್ಲೇ ಮೂರು ರಾಟ್ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಗ್ರಾಹಕರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಬ್ಯಾಂಕ್‌ನಿಂದ ಬರುವ ಸಂದೇಶವೆಂದು ನಂಬಿ ಸುಲಭವಾಗಿ ಮಾಹಿತಿಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ವಂಚನೆ ಜಾಲ ವಿಸ್ತಾರವಾಗುತ್ತಿದೆ. ಗ್ರಾಹಕರ ಅರಿವಿಗೆ ಬರುವಷ್ಟರಲ್ಲೇ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ವಂಚಕರು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ.
    ವಂಚಕರ ಹಿಡಿತಕ್ಕೆ ಬ್ಯಾಂಕ್ ಖಾತೆ
    ಬ್ಯಾಂಕ್‌ನಿಂದ ಬಂದ ಸಂದೇಶ ಇರಬೇಕೆಂದು ನಂಬುತ್ತಿರುವ ಗ್ರಾಹಕರು ಪೂರ್ವಾಪರ ಆಲೋಚಿಸದೆ ಮೊಬೈಲ್‌ಗೆ ಬಂದ ಮೆಸೇಜ್ ಮೇಲೆ ಕ್ಲಿಕ್ ಮಾಡುತ್ತಿದ್ದಾರೆ. ನೋಡನೋಡುತ್ತಿದ್ದಂತೆ ಆಟೋಮೆಟಿಕ್ ಆಗಿ ಆ್ಯಪ್ ಇನ್‌ಸ್ಟಾಲ್ ಆಗಲಿದೆ. ಅಲ್ಲಿ ಮಾಹಿತಿ ಶೇರ್ ಮಾಡುತ್ತಿದ್ದಂತೆ ಗ್ರಾಹಕರ ಬ್ಯಾಂಕ್ ಖಾತೆಯ ನಿಯಂತ್ರಣ ಸಂಪೂರ್ಣ ವಂಚಕರ ಹಿಡಿತಕ್ಕೆ ಹೋಗಲಿದೆ. ಅವರೇ ನೆಟ್ ಬ್ಯಾಂಕಿಂಗ್ ಮಾಡಿಕೊಂಡು ಹಣ ವರ್ಗಾವಣೆ ಮಿತಿಯನ್ನೂ ಹೆಚ್ಚಿಸಿಕೊಂಡು ಲಕ್ಷಾಂತರ ರೂ. ಲಪಟಾಯಿಸುತ್ತಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣ ಕಡಿತ ಆಗಿರುವ ಬಗ್ಗೆ ಸಾಲು ಸಾಲು ಮೆಸೇಜ್‌ಗಳು ಬಂದಾಗಲೇ ಗ್ರಾಹಕರ ಗಮನಕ್ಕೆ ಬರುವುದು.
    ಆ್ಯಪ್ ಇನ್‌ಸ್ಟಾಲ್
    ವಂಚಕರು ರಾಟ್ ಗಳ ಸಹಾಯದಿಂದ ಆಪ್ಕೆ (ಎಪಿಕೆ) ಫೈಲ್ ಅಥವಾ ಆ್ಯಪ್ ಸಿದ್ಧಪಡಿಸಿ ವಾಟ್ಸ್‌ಆ್ಯಪ್ ಅಥವಾ ಮೊಬೈಲ್‌ಗೆ ಟೆಕ್ಸ್ಟ್ ಸಂದೇಶದ ಮುಖಾಂತರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗಳಿಗೆ ಕಳಿಸುತ್ತಾರೆ. ಅದನ್ನು ತೆರೆಯುತ್ತಿದ್ದಂತೆ ಆಟೋಮೆಟಿಕ್ ಆಗಿ ಆ್ಯಪ್ ಇನ್‌ಸ್ಟಾಲ್ ಆಗಲಿದೆ. ಗ್ರಾಹಕರಿಗೆ ಬರುವ ಎಲ್ಲ ಮೆಸೇಜ್‌ಗಳು ವಂಚಕರ ಮೊಬೈಲ್‌ಗೆ ರವಾನೆಯಾಗುತ್ತವೆ. ಆ ಮೂಲಕ ಸುಲಭವಾಗಿ ಒಟಿಪಿ ಪಡೆದು ಸಾರ್ವಜನಿಕರ ಖಾತೆಗಳಿಗೆ ಮೊಬೈಲ್ ನೆಟ್ ಬ್ಯಾಂಕಿಂಗ್ ಸೇವೆ ಅಳವಡಿಸಿಕೊಂಡು ಕ್ಷಣ ಮಾತ್ರದಲ್ಲಿ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ.
    ಐದೇ ತಿಂಗಳಲ್ಲಿ 3.85 ಕೋಟಿ ರೂ. ವಂಚನೆ
    ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸಕ್ತ ಮೇ 15ರವರೆಗೆ 32 ವಂಚನೆ ಪ್ರಕರಣಗಳು ಸೈಬರ್ ಠಾಣೆಯಲ್ಲಿ ದಾಖಲಾಗಿದ್ದು, ಬರೋಬ್ಬರಿ 3.85 ಕೋಟಿ ರೂ. ಆನ್‌ಲೈನ್ ಮೂಲಕ ವಂಚಕರ ಕೈಸೇರಿದೆ. ಅದರಲ್ಲಿ 21.75 ಲಕ್ಷ ರೂ. ಗ್ರಾಹಕರ ಖಾತೆಗೆ ರೀಫಂಡ್ ಆಗಿದೆ. ಕಳೆದ 2023ರಲ್ಲಿ 45 ಪ್ರಕರಣ ದಾಖಲಾಗಿದ್ದು 4.02 ಕೋಟಿ ರೂ. ವಂಚನೆ ಆಗಿತ್ತು. 29.10 ಲಕ್ಷ ರೂ. ರೀಫಂಡ್ ಆಗಿತ್ತು. ಈ ವರ್ಷ ಐದೇ ತಿಂಗಳಲ್ಲೇ 32 ವಂಚನೆ ಕೇಸ್ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
    ಸುಶಿಕ್ಷಿತರದ್ದೇ ಸಿಂಹಪಾಲು
    ಶಿವಮೊಗ್ಗದಲ್ಲಿ ಆನ್‌ಲೈನ್ ವಂಚನೆಗೆ ಒಳಗಾದವರಲ್ಲಿ ಸುಶಿಕ್ಷಿತರದ್ದೇ ಸಿಂಹಪಾಲು. ವೈದ್ಯರು, ಶಿಕ್ಷಕರು, ಇಂಜಿನಿಯರ್‌ಗಳು, ಪದವೀಧರರು, ಉದ್ಯಮಿಗಳೂ ಸೇರಿದ್ದಾರೆ. ನಿವೃತ್ತ ಅಧಿಕಾರಿಗಳೂ ಈ ಪಟ್ಟಿಯಲ್ಲಿದ್ದಾರೆ. ಕೆಲ ಗೃಹಿಣಿಯರೂ ವಂಚನೆಗೆ ಒಳಗಾಗಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಆನ್‌ಲೈನ್ ವಂಚನೆಗೆ ಒಳಗಾಗುತ್ತಿರುವುದು ಮಾತ್ರ ತಪ್ಪುತ್ತಿಲ್ಲ. ವಂಚನೆಗೆ ಒಳಗಾದ ತಕ್ಷಣವೇ ದೂರು ನೀಡಿದರೆ ಖಾತೆಯಲ್ಲಿದ್ದ ಹಣ ಫ್ರೀಜ್ ಮಾಡಬಹುದು. ಆದರೆ ಬಹಳಷ್ಟು ಮಂದಿ ಹಲವು ದಿನಗಳ ಬಳಿಕ ಬಂದು ದೂರು ನೀಡುತ್ತಿದ್ದಾರೆ ಎನ್ನುತ್ತಾರೆ ಸೈಬರ್ ಠಾಣೆ ಪೊಲೀಸರು.

    ಲೋಕ ಚುನಾವಣೆ ಸಂದರ್ಭದಲ್ಲೇ ಹೆಚ್ಚು
    ವಿಶೇಷವೆಂದರೆ ಈ ಬಾರಿ ಲೋಕಸಭೆ ಚುನಾವಣಾ ಸಂದರ್ಭದಲ್ಲೇ ಹೆಚ್ಚು ಸೈಬರ್ ಪ್ರಕರಣಗಳು ಬೆಳಕಿಗೆ ಬಂದಿವೆ. ದೇಶಾದ್ಯಂತ ಚುನಾವಣೆ ಇರುವುದನ್ನೇ ದುರುಪಯೋಗಪಡಿಸಿಕೊಂಡಿರುವ ವಂಚಕರು ಗ್ರಾಹಕರ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಆನ್‌ಲೈನ್ ವಂಚನೆ ಜಾಲಕ್ಕೊಳಗಾಗಿ ಹಣ ಕಳೆದುಕೊಂಡವರಿಗಾಗಿ ಪೊಲೀಸ್ ಇಲಾಖೆ ಗೋಲ್ಡನ್ ಅವರ್ ಯೋಜನೆಗೆ ಒತ್ತು ನೀಡಿದ್ದು ಹಣ ಕಳೆದುಕೊಂಡವರು ಒಂದು ಗಂಟೆಯೊಳಗೆ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಬೇಕು. ಈ ಹಂತದಲ್ಲಿಯೇ ಶೇ.50ರಷ್ಟು ಕಾರ್ಯಾಚರಣೆ ಯಶಸ್ವಿಯಾಗುತ್ತಿದೆ ಎನ್ನುತ್ತಾರೆ ಸೈಬರ್ ಪೊಲೀಸರು.

    ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಕೆಲವರು ಆನ್‌ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರಾಟ್ ಆ್ಯಪ್ ಬಳಸಿಕೊಂಡು ವಂಚಿಸಲಾಗುತ್ತಿದೆ. ಯಾರಿಗೂ ಆನ್‌ಲೈನ್ ಮೂಲಕ ಮಾಹಿತಿ ನೀಡಬಾರದು. ವಂಚನೆಗೆ ಒಳಗಾದ ತಕ್ಷಣ ದೂರು ನೀಡಿದರೆ ಹಣ ಫ್ರೀಜ್ ಸುಲಭವಾಗುತ್ತದೆ. ವಿಳಂಬ ಮಾಡಿದಷ್ಟೂ ಪ್ರಕರಣ ಭೇದಿಸುವುದು ಕಷ್ಟಕವಾಗಲಿದ್ದು ಜನತೆ ಎಚ್ಚೆತ್ತುಕೊಳ್ಳಬೇಕಿದೆ.
    ಜಿ.ಕೆ.ಮಿಥುನ್‌ಕುಮಾರ್, ಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts