More

    ಸಮುದಾಯಕ್ಕೂ ಹಬ್ಬಬಹುದು ಕೋವಿಡ್

    ವೇಣುವಿನೋದ್ ಕೆ.ಎಸ್.ಮಂಗಳೂರು

    ಮುಂದಿನ ಎರಡು ತಿಂಗಳು ದ.ಕ ಜಿಲ್ಲೆಯಲ್ಲೂ ಬಹಳ ಸೂಕ್ಷ್ಮ. ಜನರು ಎಚ್ಚರಿಕೆಯಿಂದಿರಬೇಕು, ಭಯ ಬೇಡ. ಕೋವಿಡ್ ಇನ್ನೂ ಸಮುದಾಯ ಮಟ್ಟಕ್ಕೆ ಹರಡಿಲ್ಲ, ಆದರೆ ಮುಂದೆ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಂತಹ ಸ್ಥಿತಿ ಬಂದರೆ ಎದುರಿಸಲು ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದೇವೆ.
    ಇದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಅವರ ಭರವಸೆಯ ಮಾತು. ಕಳೆದ ಎರಡುವರೆ ತಿಂಗಳಿನಿಂದ ಜಿಲ್ಲೆಯಲ್ಲಿ ಕರೊನಾ ಚಿಕಿತ್ಸೆ, ನಿಯಂತ್ರಣ, ಜಾಗೃತಿ ವಿಚಾರದಲ್ಲಿ ಆರೋಗ್ಯ ಇಲಾಖೆ ನೇತೃತ್ವ ವಹಿಸಿರುವ ಅವರು ‘ವಿಜಯವಾಣಿ’ ಜತೆ ಸಂದರ್ಶನದಲ್ಲಿ ಹಂಚಿಕೊಂಡಿರುವ ಪ್ರಮುಖಾಂಶಗಳು ಇಲ್ಲಿವೆ.

    ಕಳೆದ ತಿಂಗಳು ನೋಡಿದರೆ ನಮ್ಮ ಜಿಲ್ಲೆ ಸೇಫ್ ಅನ್ನಿಸುತ್ತಿತ್ತು, ಈಗ ಪಾಸಿಟಿವ್ ಸಂಖ್ಯೆ ಏರಿರುವುದು ಗಾಬರಿ ಮೂಡಿಸಿಲ್ಲವೇ?
    -ಹಾಗೇನೂ ಇಲ್ಲ, ಜಿಲ್ಲೆಯ ಪರಿಸ್ಥಿತಿ ಬಹಳ ನಿಯಂತ್ರಣದಲ್ಲೇ ಇದೆ. ನಮ್ಮಲ್ಲಿಗೆ ಇದುವರೆಗೆ ಬಂದಿರುವವರಲ್ಲಿ 260 ಅಂತಾರಾಷ್ಟ್ರೀಯ ಪ್ರಯಾಣಿಕರು, 130 ಹೊರರಾಜ್ಯದ ಪ್ರಯಾಣಿಕರಲ್ಲಿ(ಮುಖ್ಯವಾಗಿ ಮಹಾರಾಷ್ಟ್ರ) ಕರೊನಾ ಕಾಣಿಸಿಕೊಂಡಿದೆ. ಎಂದರೆ ಒಟ್ಟು 466 ಪ್ರಕರಣದಲ್ಲಿ 390 ಕೂಡ ಆಮದಾಗಿರುವ ಪಾಸಿಟಿವ್. ಕೇವಲ 76 ಮಾತ್ರವೇ ಸಂಪರ್ಕದಿಂದ ಅಥವಾ ಇತರ ಕಾರಣಗಳಿಂದ ಬಂದಿರುವುದು. ನಾವು ಎಲ್ಲ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ.

    ಮೀನು ಮಾರುವವರಲ್ಲಿ, ವೈದ್ಯರಲ್ಲಿ ಸೋಂಕು ಕಾಣಿಸಿರುವುದು?
    -ಮೀನು ವ್ಯಾಪಾರಿಗೆ ಸೋಂಕು ತಗುಲಿದ್ದು ತಮಿಳುನಾಡು ಮೂಲದ ಮೀನು ಮಾರಾಟಗಾರರಿಂದ ಎನ್ನುವುದು ದೃಢವಾಗಿದೆ, ಎಷ್ಟೋ ರೋಗಿಗಳನ್ನು ನೋಡುವಾಗ ವೈದ್ಯರೂ ಸೋಂಕಿಗೆ ಹೊರತಲ್ಲ, ಆದರೆ ಅವರೆಲ್ಲರೂ ಸೋಂಕು ತಗಲಿದ್ದರೂ, ಆರೋಗ್ಯ ವಾಗಿದ್ದಾರೆ.

    ಮುಂದಿನ ತಿಂಗಳುಗಳಲ್ಲಿ ಕರೊನಾ ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆಯೇ?
    -ಸದ್ಯ ನಿಯಂತ್ರಣದಲ್ಲಿದ್ದರೂ ಈಗ ಜನರು ಯಾವುದೇ ನಿಯಂತ್ರಣವಿಲ್ಲದೆ ಸಂಚರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕರೊನಾ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ, ಆದರೆ ಆ ಬಗ್ಗೆ ಭೀತಿ ಬೇಡ.

    ನಿಮ್ಮ ಇದುವರೆಗಿನ ಅನುಭವ ಪ್ರಕಾರ ಕರೊನಾ ನಮ್ಮಲ್ಲಿ ಹೇಗಿದೆ ?
    -ಕರೊನಾ ವೈರಸ್ ನಿರೀಕ್ಷೆ ಮಾಡಿದಷ್ಟು ನಮ್ಮಲ್ಲಿ ಪರಿಣಾಮ ಬೀರಿಲ್ಲ, ಮರಣ ಪ್ರಮಾಣ ಬಹಳ ಕಡಿಮೆ ಇದೆ. ಕ್ಯಾನ್ಸರ್, ಬಿಪಿ, ಶುಗರ್ ಇದ್ದಂತಹ ವೃದ್ಧರೂ ಚೇತರಿಸಿ ಮನೆಗೆ ತೆರಳಿದ್ದಾರೆ. ಆದರೆ ಬಹುವಿಧದ ಆರೋಗ್ಯ ಸಮಸ್ಯೆ ಇದ್ದವರಿಗೆ, ಶ್ವಾಸಕೋಶ ಘಾಸಿಗೊಂಡವರಿಗೆ ಸಾವು ಬಂದಿದೆ. ಶೇ.95ಕ್ಕೂ ಹೆಚ್ಚು ಮಂದಿಗೆ ಕೋವಿಡ್ ಲಕ್ಷಣಗಳೇ ಇಲ್ಲ. ಅಂಥವರಿಂದ ಹರಡುವ ಸಾಧ್ಯತೆಯೂ ಕಡಿಮೆ ಎನ್ನುವುದು ಕಂಡುಬರುತ್ತಿದೆ.

    ತಿರುಗಾಡುವವರ ಸ್ಯಾಂಪಲ್ ಸಮೀಕ್ಷೆ ಶುರು
    ಮುಂದೆ ಯಾವುದೇ ರೀತಿಯಲ್ಲಿ ಸಮುದಾಯಕ್ಕೆ ಸೋಂಕು ಹರಡಬಾರದು ಎನ್ನುವ ದೃಷ್ಟಿಯಿಂದ ಬೃಹತ್ ಸಮೀಕ್ಷೆಯನ್ನು ನಿನ್ನೆಯಿಂದ ಶುರು ಮಾಡಿದ್ದೇವೆ. ಎಲ್ಲ ತಾಲೂಕುಗಳಲ್ಲೂ ಸ್ಲಂವಾಸಿಗಳು, ಸೂಪರ್ ಮಾರ್ಕೆಟ್, ವ್ಯಾಪಾರಿಗಳು, ಡೆಲಿವರಿ ಬಾಯ್ಸ, ಫುಟ್‌ಪಾತ್ ವಾಸಿಗಳ ಗಂಟಲುದ್ರವ ಮಾದರಿ ತೆಗೆದು ಪರೀಕ್ಷೆ ಮಾಡಲಾಗುವುದು. ಇದು ಮುಂದೆ ನಿರಂತರ ನಡೆಯಲಿದೆ. ಪ್ರಸ್ತುತ ಜಿಲ್ಲೆಯಲ್ಲಿ 13 ಫೀವರ್ ಕ್ಲಿನಿಕ್ ಇವೆ. ಈಗಿರುವ ಒಟ್ಟು 66 ಪ್ರಾಥಮಿಕ ಕೇಂದ್ರಗಳಲ್ಲಿ ಶೇ.50ನ್ನು ಫೀವರ್ ಕ್ಲಿನಿಕ್ ಆಗಿ ಪರಿವರ್ತಿಸಲಿದ್ದೇವೆ, ಆ ಮೂಲಕ ಹೆಚ್ಚಿನ ನಿಗಾ ಇರಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts